‘ಉಪ ಚುನಾವಣೆ’ ಬಿಜೆಪಿ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ

Update: 2019-11-19 13:18 GMT

ಬೆಂಗಳೂರು, ನ.19: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಬಿಜೆಪಿ ಅಭ್ಯರ್ಥಿಗಳು 15 ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ತಮ್ಮ ಬೆಂಬಲಿಗರೊಂದಿಗೆ ಪ್ರಚಾರ ಆರಂಭಿಸಿದರು. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್, ಹೊಸಕೋಟೆ ತಾಲೂಕಿನ ನಂದಗುಡಿ, ನೆಲವಾಗಿಲು ಸೇರಿದಂತೆ ಮೂರು ಪಂಚಾಯಿತಿಗಳ 28 ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು.

ಹಾವೇರಿ ಜಿಲ್ಲೆಯ ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ವ್ಯಾಪಾರೋದ್ಯಮಿಗಳು, ಮಹಿಳಾ ಕೇಸರಿ ಪಡೆ, ವಕೀಲರ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿ ಬೆಂಬಲ ಕೋರಿದರು.

ಬೆಂಗಳೂರಿನ ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸರವಣ, ಪ್ರಚಾರದ ಮೊದಲ ದಿನ ಕ್ಷೇತ್ರದಲ್ಲಿನ ಎಲ್ಲ ಸಮುದಾಯದ ಮುಖಂಡರು ಹಾಗೂ ಗಣ್ಯರನ್ನು ಭೇಟಿ ಮಾಡಿ ಬೆಂಬಲ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಸರವಣ, ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳ ಬೆಂಬಲ ತಮಗಿದೆ. ಬಿಜೆಪಿ ರಾಜ್ಯದಲ್ಲಿ ಮತ್ತು ಬಿಬಿಎಂಪಿಯಲ್ಲಿ ಅಧಿಕಾರದಲ್ಲಿರುವುದರಿಂದ ತಮ್ಮನ್ನು ಗೆಲ್ಲಿಸುವುದರೊಂದಿಗೆ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಮಹಾಲಕ್ಷ್ಮಿ ಲೇಔಟ್ ಅಭ್ಯರ್ಥಿ ಕೆ.ಗೋಪಾಲಯ್ಯ, ಸಚಿವ ವಿ.ಸೋಮಣ್ಣ ಜೊತೆಗೆ ನಾಗಪುರ ವಾರ್ಡ್‌ನ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡರು. ಆನಂತರ ವಾರ್ಡ್‌ನಲ್ಲಿ ಮತದಾರರ ಬಳಿ ತೆರಳಿ ಮತ ಯಾಚನೆ ಮಾಡಿದರು.

ಕೆ.ಆರ್.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ, ತಾಲೂಕಿನ ಸವಿತಾ ಸಮಾಜದ ಮುಖಂಡರು ಹಾಗೂ ಕಲಾವಿದರ ಸಂಘದ ಅಧ್ಯಕ್ಷರನ್ನು ಭೇಟಿ ಮಾಡಿದರು. ಇದೇ ವೇಳೆ ಕಲಾವಿದರ ಸಂಘದ ಅಧ್ಯಕ್ಷರು ನಾರಾಯಣಗೌಡಗೆ ಬೆಂಬಲ ೂಚಿಸಿ ಬಿಜೆಪಿ ಸೇರ್ಪಡೆಯಾದರು.

ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್, ಕ್ಷೇತ್ರದ ವಿವಿಧ ವಾರ್ಡ್‌ಗಳಲ್ಲಿ ಬಿಜೆಪಿ ಮುಖಂಡರೊಂದಿಗೆ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News