ತನ್ವೀರ್ ಸೇಠ್ ರಿಗೆ ಇನ್ನೂ ಮೂರು ದಿನ ಐಸಿಯುನಲ್ಲಿಯೇ ಚಿಕಿತ್ಸೆ: ಡಾ.ಉಪೇಂದ್ರ ಶಣೈ

Update: 2019-11-19 14:56 GMT

ಮೈಸೂರು,ನ.19: ಮಾರಣಾಂತಿಕ ಹಲ್ಲೆಗೊಳಗಾಗಿರುವ ಮಾಜಿ ಸಚಿವ ನರಸಿಂಹ ರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಗುಣಮುಖರಾಗುತ್ತಿದ್ದಾರೆ ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆಯ ವೈದ್ಯಕೀಯ ಮುಖ್ಯಸ್ಥ ಡಾ.ಉಪೇಂದ್ರ ಶಣೈ ತಿಳಿಸಿದರು.

ನಗರದ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ತನ್ವೀರ್ ಸೇಠ್ ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ಆರೋಗ್ಯ ಸ್ಥಿರವಾಗುತ್ತಿದೆ. ಆದರೂ ಅವರಿಗೆ ಐಸಿಯುನಲ್ಲಿಯೇ ಚಿಕಿತ್ಸೆ ನೀಡುತಿದ್ದು, ಇನ್ನೂ ಮೂರು ದಿನಗಳ ಕಾಲ ಐಸಿಯುನಲ್ಲಿಯೇ ಚಿಕಿತ್ಸೆ ನೀಡಿ ಅವರ ಆರೋಗ್ಯದ ಬಗ್ಗೆ ನಿಗಾವಹಿಸಲಾಗುವುದು ಎಂದು ಹೇಳಿದರು.

ಆಸ್ಪತ್ರೆಗೆ ಬಂದಾಗ ತನ್ವೀರ್ ಸೇಠ್ ಅವರು ಗಂಭೀರ ಸ್ಥಿತಿಯಲ್ಲಿದ್ದರು. ತಕ್ಷಣ ನಮ್ಮ ವೈದ್ಯರು ಅವರಿಗೆ ಚಿಕಿತ್ಸೆ ನೀಡಿ ತೀವ್ರವಾಗಿ ರಕ್ತಸ್ರಾವವಾಗುತ್ತಿದ್ದುದನ್ನು ತಡೆದಿದ್ದಾರೆ. ನಂತರ ಶಸ್ತ್ರಚಿಕಿತ್ಸೆ ನಡೆಸಿ ರಕ್ತನಾಳದ ನರವನ್ನು ಮರು ಜೋಡಣೆ ಮಾಡಿ ರಕ್ತ ಸಂಚರಿಸುವಂತೆ ಮಾಡಲಾಗಿದೆ. ಆದರೂ ಅವರನ್ನು ನಿಗಾಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.

ಅವರು ಬೆಳಿಗ್ಗೆ ಕುಟುಂಬದವರ ಜೊತೆ ಮಾತನಾಡಿದ್ದಾರೆ. ಎಂದಿನಂತೆ ತೆಗೆದುಕೊಳ್ಳುವ ಆಹಾರವನ್ನೇ ಸೇವನೆ ಮಾಡಿದ್ದಾರೆ. ಪ್ರಾಣಕ್ಕೆ ಯಾವುದೇ ಆಪಾಯವಿಲ್ಲ. ಆದರೂ ಅವರಿಗೆ ಸೋಂಕು ತಗುಲುವ ಸಂಭವಿರುವುದರಿಂದ ಐಸಿಯುನಲ್ಲಿಯೇ ಚಿಕಿತ್ಸೆ ನೀಡುತ್ತೇವೆ ಎಂದು ಹೇಳಿದರು.

ಶಾಸಕ ತನ್ವೀರ್ ಸೇಠ್ ಅವರ ಆರೋಗ್ಯದ ಮೇಲೆ ನಾವು ವಿಶೇಷ ಗಮನ ಹರಿಸಿದ್ದೇವೆ. ಚಿಕಿತ್ಸೆಗೆ ಅವರು ಸಂಪೂರ್ಣ ಸ್ಪಂಧಿಸುತ್ತಿದ್ದಾರೆ. ಅವರಿಗೆ ಹೆಚ್ಚಿನ ಚಿಕಿತ್ಸೆ ಬೇಕು ಎಂದರೆ ತಜ್ಞ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಲಾಗುವುದು. ನಮ್ಮ ಆಸ್ಪತ್ರೆಯಲ್ಲಿಯೇ ಎಲ್ಲಾ ರೀತಿಯ ಸೌಲಭ್ಯವಿದೆ. ಆದರೂ ಹೆಚ್ಚಿನ ಚಿಕಿತ್ಸೆ ಬೇಕು ಎಂದರೆ ಬೇರೆ ಆಸ್ಪತ್ರೆಗೆ ಕಳುಹಿಸಕೊಡಲಾಗುವುದು. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ನಿನ್ನೆ ಭೇಟಿ ನೀಡಿ ಚಿಕಿತ್ಸೆ ನೀಡುವಂತೆ ಹೇಳಿದ್ದಾರೆ. ಅದರಂತೆ ನಾವು ನೀಡುತಿದ್ದೇವೆ. ಅವರ ಮನೆಯವರು ಇಲ್ಲಿಯೇ ಚಿಕಿತ್ಸೆ ನೀಡಲಿ ಎಂದಿದ್ದಾರೆ. ಹಾಗಾಗಿ ಚಿಕಿತ್ಸೆ ಮುಂದುವರೆಸಿದ್ದೇವೆ ಎಂದು ಹೇಳಿದರು.

ಇಂದು ಸಹ ಆಸ್ಪತ್ರೆಗೆ ಆಗಮಿಸಿದ ಗಣ್ಯರು: ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ತನ್ವೀರ್ ಸೇಠ್ ಅವರ ಆರೋಗ್ಯ ವಿಚಾರಿಸಲು ಮಂಗಳವಾರವೂ ಸಹ ಗಣ್ಯರ ದಂಡೇ ಅಗಮಿಸಿತು.
ಸಂಸದ ವಿ.ಶ್ರೀನಿವಾಸ ಪ್ರಸಾದ್, ಅನರ್ಹ ಶಾಸಕ ಎಚ್.ವಿಶ್ವನಾಥ್, ಮಾಜಿ ಸಂಸದ ಆರ್.ಧ್ರುವನಾರಾಯಣ್, ಮಾಜಿ ಶಾಸಕ ರೋಷನ್ ಬೇಗ್, ಶಾಸಕ ಸಾ.ರಾ.ಮಹೇಶ್ ಸೇರಿದಂತೆ ಹಲವರು ಆಸ್ಪತ್ರೆಗೆ ಆಗಮಿಸಿ ತನ್ವೀರ್ ಸೇಠ್ ಅವರ ಆರೋಗ್ಯ ವಿಚಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News