ವಿಮಾನ ಆ್ಯಂಬುಲೆನ್ಸ್‌ನಲ್ಲಿ ಲಂಡನ್‌ಗೆ ಪ್ರಯಾಣಿಸಿದ ನವಾಝ್ ಶರೀಫ್

Update: 2019-11-19 16:17 GMT

ಲಾಹೋರ್, ನ. 19: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಮಂಗಳವಾರ ವಿಮಾನ ಆ್ಯಂಬುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದರು. ಇದಕ್ಕೂ ಮೊದಲು, ಲಾಹೋರ್ ಹೈಕೋರ್ಟ್ ನಾಲ್ಕು ವಾರಗಳ ವಿದೇಶ ಪ್ರಯಾಣಕ್ಕೆ ಶರೀಫ್‌ಗೆ ಅನುಮತಿ ನೀಡಿತು ಹಾಗೂ ‘ಇಂಡೆಮ್ನಿಟಿ ಬಾಂಡ್’ (ಹೊಣೆ ಹೊರುವ ಬಾಂಡ್) ಸಲ್ಲಿಸಬೇಕೆಂಬ ಇಮ್ರಾನ್ ಖಾನ್ ಸರಕಾರದ ಶರತ್ತನ್ನು ತಿರಸ್ಕರಿಸಿತು.

69 ವರ್ಷದ ನವಾಝ್ ಶರೀಫ್ ಜೊತೆಗೆ ಅವರ ತಮ್ಮ ಶೆಹ್ಬಾಝ್ ಶರೀಫ್ ಮತ್ತು ಖಾಸಗಿ ವೈದ್ಯ ಅದ್ನಾನ್ ಖಾನ್ ತೆರಳಿದ್ದಾರೆ. ದೋಹಾದಿಂದ ಬಂದ ಉನ್ನತ ದರ್ಜೆಯ ಏರ್ ಆ್ಯಂಬುಲೆನ್ಸ್‌ನಲ್ಲಿ ಖತರ್ ಮೂಲಕ ಅವರು ಲಂಡನ್‌ಗೆ ಪ್ರಯಾಣಿಸಿದ್ದಾರೆ.

ಲಂಡನ್‌ಗೆ ತೆರಳಿದ ಬಳಿಕ ಶರೀಫ್‌ರನ್ನು ಚಿಕಿತ್ಸೆಗಾಗಿ ಹ್ಯಾರ್ಲೇ ಸ್ಟ್ರೀಟ್ ಕ್ಲಿನಿಕ್‌ಗೆ ಒಯ್ಯಲಾಗುವುದು ಹಾಗೂ ಅಗತ್ಯ ಬಿದ್ದರೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕದ ಬೋಸ್ಟನ್‌ಗೆ ಕರೆದುಕೊಂಡು ಹೋಗಲಾಗುವುದು ಎಂದು ನವಾಝ್ ಶರೀಫ್‌ರ ಪಕ್ಷ ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ (ಪಿಎಮ್‌ಎಲ್-ಎನ್) ವಕ್ತಾರೆ ಮರಿಯಮ್ ಔರಂಗಝೇಬ್ ತಿಳಿಸಿದರು.

ಕಳೆದ ಬುಧವಾರ ಇಮ್ರಾನ್ ಖಾನ್ ಸರಕಾರವು, ನಾಲ್ಕು ವಾರಗಳ ಕಾಲ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಲು ಶರೀಫ್‌ಗೆ ಒಂದು ಬಾರಿಯ ಅವಕಾಶ ನೀಡಿತ್ತು. ಆದರೆ, ಅದಕ್ಕಾಗಿ ಅವರು 700 ಕೋಟಿ ರೂಪಾಯಿಯ ಇಂಡೆಮ್ನಿಟಿ ಬಾಂಡನ್ನು ಸಲ್ಲಿಸಬೇಕು ಎಂಬ ಶರತ್ತು ವಿಧಿಸಿತ್ತು.

ವಿಮಾನದಲ್ಲೇ ಐಸಿಯು, ಆಪರೇಶನ್ ಥಿಯೇಟರ್

ವಿಮಾನ ಆ್ಯಂಬುಲೆನ್ಸ್‌ನಲ್ಲಿ ತೀವ್ರ ನಿಗಾ ಘಟಕ (ಐಸಿಯು) ಮತ್ತು ಆಪರೇಶನ್ ಥಿಯೇಟರ್‌ಗಳನ್ನು ಸ್ಥಾಪಿಸಲಾಗಿದೆ ಹಾಗೂ ವೈದ್ಯರು ಮತ್ತು ನರ್ಸ್‌ಗಳ ಒಂದು ತಂಡವೂ ಆ್ಯಂಬುಲೆನ್ಸ್‌ನಲ್ಲಿ ಪ್ರಯಾಣಿಸಲಿದೆ ಎಂದು ಶರೀಫ್‌ರ ಖಾಸಗಿ ವೈದ್ಯ ಅದ್ನಾನ್ ಖಾನ್ ಸೋಮವಾರ ರಾತ್ರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News