​ಸಿದ್ದರಾಮಯ್ಯ-ಶ್ರೀರಾಮುಲು ನಡುವೆ ಮತ್ತೊಮ್ಮೆ ವಾಕ್ಸಮರ

Update: 2019-11-19 17:33 GMT

ಬೆಂಗಳೂರು, ನ.19: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ನಡುವೆ ಮತ್ತೊಮ್ಮೆ ವಾಕ್ಸಮರ ಏರ್ಪಟ್ಟಿದೆ.

ಸಚಿವ ಶ್ರೀರಾಮುಲು ನನ್ನ ವಿರುದ್ಧ ಚುನಾವಣೆಯಲ್ಲಿ ಸೋತಿದ್ದರು, ಪಾಪ ಇನ್ನೂ ಆ ಹತಾಶೆಯಿಂದ ಹೊರಬಂದಂತೆ ಕಾಣುತ್ತಿಲ್ಲ. ಅದಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರಿಗೆ ಮಾನ ಮರ್ಯಾದೆ ಇದ್ದರೆ ಹಿಂದೆಯೇ ರಾಜೀನಾಮೆ ಕೊಡಬೇಕಿತ್ತು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುತ್ತೇವೆಂದು ಪ್ರಚಾರ ಮಾಡಿದ್ದರು, ಕೊನೆಗೆ ಉಪಮುಖ್ಯಮಂತ್ರಿ ಮಾಡಿದರಾ? ಶಾಸಕರೇ ಅಲ್ಲದವರಿಗೆ ಉಪಮುಖ್ಯಮಂತ್ರಿ ಹುದ್ದೆ ಕೊಟ್ಟಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಎಸ್ಟಿ ಜನಾಂಗಕ್ಕೆ ಶೇ.7ರಷ್ಟು ಮೀಸಲಾತಿ ನೀಡದಿದ್ದರೆ ರಾಜೀನಾಮೆ ಕೊಡುತ್ತೇನೆ, ಒಂದು ನಿಮಿಷ ಇರಲ್ಲ ಎಂದಿದ್ದರು. ಏನಾಯ್ತು? ಸ್ವಾರ್ಥಿಗಳೆಲ್ಲ ಒಂದೆಡೆ ಸೇರಿಕೊಂಡಿದ್ದಾರೆ. ಅವರ ಬಳಿ ಸ್ವಾರ್ಥವೊಂದು ಬಿಟ್ಟು ಬೇರಾವ ಮೌಲ್ಯ ಸಿದ್ಧಾಂತಗಳು ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸಿದ್ದರಾಮಯ್ಯ ಮಾಡಿರುವ ಟ್ವೀಟ್‌ಗೆ ತಿರುಗೇಟು ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ನಾನೇನು ಸ್ವಾರ್ಥದ ಕೆಲಸ ಮಾಡಿದ್ದೇನೆ ಹೇಳಿ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.

ಉಪಮುಖ್ಯಮಂತ್ರಿ ಮಾಡಿ ಹಣಕಾಸು ಖಾತೆಯಂತಹ ಮಹತ್ವದ ಖಾತೆಗಳನ್ನು ನೀಡಿದ್ದರೂ ಮುಖ್ಯಮಂತ್ರಿ ಮಾಡಲಿಲ್ಲ ಎಂದು ಸುಳ್ಳು ಹೇಳಿಕೊಂಡು ನಿಮ್ಮನ್ನು ಬೆಳೆಸಿ ನಾಯಕನನ್ನಾಗಿ ರೂಪಿಸಿದ ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿ ಆ ಪಕ್ಷದ ಹಿರಿಯ ನಾಯಕರಿಗೆಲ್ಲಾ ಅನ್ಯಾಯ ಮಾಡಿ ಮುಖ್ಯಮಂತ್ರಿಯಾಗಿದ್ದು ನಿಮ್ಮ ಸ್ವಾರ್ಥವಲ್ಲವೇ ಸಿದ್ದರಾಮಯ್ಯನವರೇ ಎಂದು ಅವರು ಹೇಳಿದ್ದಾರೆ.

ನನಗೆ ಮಾನ, ಮರ್ಯಾದೆ ಇದೆಯಾ ಎಂದು ಕೇಳಿದ್ದೀರಲ್ಲಾ ಸಿದ್ದರಾಮಯ್ಯ. ಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳಿದ ನೀವು ನಂತರ ಅವರ ಮನೆಬಾಗಿಲಿಗೆ ಹೋಗಿ ಕರೆತಂದು ಮುಖ್ಯಮಂತ್ರಿ ಮಾಡಿ ನಂತರ ಷಡ್ಯಂತ್ರ ಮಾಡಿ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಿದ ನಿಮಗೆ ಮಾನ, ಮರ್ಯಾದೆ ಎಂದರೆ ಏನು ಎಂಬುದು ಗೊತ್ತಿದೆಯೇ? ಎಂದು ಶ್ರೀರಾಮುಲು  ಪ್ರಶ್ನಿಸಿದ್ದಾರೆ.

ಮಾನ್ಯ ಸಿದ್ದರಾಮಯ್ಯನವರೇ, ನಿಮಗೊಂದು ಸವಾಲು. ಬಾದಾಮಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ನೀವು ಗೆದ್ದಿರಬಹುದು. ಮೀಸಲಾತಿ ಇಲ್ಲದ ಕ್ಷೇತ್ರವಾದರೂ ಸರಿಯೇ, ನನ್ನ ವಿರುದ್ಧ ಗೆದ್ದು ತೋರಿಸಿ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬನ್ನಿ. ನಾನೂ ರಾಜೀನಾಮೆ ಕೊಟ್ಟು ಬರುತ್ತೇನೆ. ಜನ ಯಾರನ್ನು ಗೆಲ್ಲಿಸುತ್ತಾರೋ ನೋಡಿಯೇ ಬಿಡೋಣ ಅವರು ಸವಾಲು ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News