ಕೊಡ್ಲಿಪೇಟೆಯ ಮಸ್ಜಿದುನ್ನೂರ್ ವತಿಯಿಂದ ಮೀಲಾದುನ್ನಬಿ ಆಚರಣೆ

Update: 2019-11-19 17:51 GMT

ಬೆಂಗಳೂರು, ನ.19: ಕೊಡಗು ಜಿಲ್ಲೆಯ ಕೊಡ್ಲಿಪೇಟೆ ಹ್ಯಾಂಡ್‌ಪೋಸ್ಟ್ ಬಳಿಯಿರುವ ಮಸ್ಜಿದುನ್ನೂರ್ ವತಿಯಿಂದ ಪ್ರವಾದಿ ಮುಹಮ್ಮದ್(ಸ)ರವರ ಜನ್ಮ ಮಾಸಾಚರಣೆಯ ಪ್ರಯುಕ್ತ ಈದ್-ಮೀಲಾದುನ್ನಬಿ ಹಾಗೂ ಸ್ವಲಾತ್ ಕಾರ್ಯಕ್ರಮವನ್ನು ಇತ್ತೀಚೆಗೆ ಅದ್ಧೂರಿಯಾಗಿ ಆಚರಿಸಲಾಯಿತು.

ಈದ್-ಮಿಲಾದ್ ಸಂದೇಶ ರ್ಯಾಲಿಯು ಬ್ಯಾಡಗೊಟ್ಟ ಅರಬ್ಬೀ ಮದ್ರಸಾದ ಸಮೀಪದಿಂದ ಆರಂಭಿಸಿ ಹ್ಯಾಂಡ್ ಪೋಸ್ಟ್ ವೃತ್ತದ ಮೂಲಕ ದೊಡ್ಡುಕುಂದ ಜೂನಿಯರ್ ಕಾಲೇಜು ಜಂಕ್ಷನ್ ಮೂಲಕ ನೂರ್‌ಮಹಲ್‌ನವರೆಗೆ ಸಾಗಿತು.

ಜಾಥಾದ ಮುಂಭಾಗದಲ್ಲಿ ತ್ರಿವರ್ಣ ವರ್ಣದ ರಾಷ್ಟ್ರದ್ವಜ ಮತ್ತು ನಾಡ ದ್ವಜ ಹಾಗೂ ಈದ್-ಮಿಲಾದ್ ಸಂಕೇತವಾದ ಹಸಿರು ಧ್ವಜಗಳ ಸಮ್ಮಿಲನ ಹಾಗೂ ತಜಲ್ಲಿಯಾತ್ ಮದ್ರಸಾ ವಿದ್ಯಾರ್ಥಿಗಳ ಸ್ಕೌಟ್ ಮತ್ತು ದಫ್ ತಂಡಗಳು ನೋಡುಗರ ಕಣ್ಮನ ಸೆಳೆದವು.

ನೂರ್ ಯೂತ್ ಅಸೋಷಿಯೇಷನ್ ಸದಸ್ಯರು ವಿವಿಧ ವರ್ಣದ ವೇಷಭೂಷಣಗಳನ್ನು ಧರಿಸಿದ ಆಕರ್ಷಕ ಮೂರು ತಂಡಗಳ 'ಭಾರತದ ದೇಶದ ಪ್ರಜೆಗಳು ನಾವು ಹಾಡುವೆವು ನವ ಸಂದೇಶ' ಎಂಬ ಹಾಡಿನೊಂದಿಗಿನ ದಫ್ ಪ್ರದರ್ಶನ ಜನ ಮೆಚ್ಚುಗೆಗೆ ಪಾತ್ರವಾಯಿತು.

ದಾರಿಯುದ್ದಕ್ಕೂ ಪ್ರವಾದಿ ಪ್ರೇಮಿಗಳು ಸಿಹಿ ಪದಾರ್ಥಗಳನ್ನು ವ್ಯವಸ್ಥೆ ಮಾಡಿದರು. ಹ್ಯಾಂಡ್ ಪೋಸ್ಟ್ ಜಂಕ್ಷನ್‌ನಲ್ಲಿರುವ ಎಸ್ಸಾರ್ ಪೆಟ್ರೋಲ್ ಬಂಕ್ ಮಾಲಕ ತೇಜ್ ಕುಮಾರ್ ಹಾಗೂ ದೊಡ್ಡಕುಂದ ಜಂಕ್ಷನ್‌ನಲ್ಲಿ ಜಯಂತ್ ಮದು ಗೆಳೆಯರ ಬಳಗ ತಂಪು ಪಾನಿಯ ನೀಡಿ ಸೌಹಾರ್ದತೆ ಮೆರೆದದ್ದು ವಿಶೇಷವಾಗಿತ್ತು.

ಸ್ವಲಾತ್‌ಗೆ ನೇತೃತ್ವವನ್ನು ಸಯ್ಯದ್ ಅಲ್-ಅಝ್ಝರಿ ಪಟ್ಟಾಂಭಿ ವಹಿಸಿದ್ದರು. ಮಸ್ಜಿದುನೂರ್ ಖತೀಬ್ ಹಾರಿಸ್ ಬಾಖವಿ ಕಂಡಕೆರೆ ಮುಖ್ಯ ಪ್ರಭಾಷಣ ಮಾಡಿದರು. ತಜಲ್ಲಿಯಾತ್ ಮದ್ರಸಾದ ಮುಖ್ಯ ಅಧ್ಯಾಪಕ ಅಶ್ರಫ್ ಮಿಸ್ಬಾಹಿ ಉದ್ಘಾಟನಾ ಬಾಷಣ ಮಾಡಿದರು. ಮಸ್ಜಿದುನ್ನೂರ್ ಆಡಳಿತ ಮಂಡಳಿ ಅಧ್ಯಕ್ಷ ಡಿ.ಎ.ಸುಲೇಮಾನ್ ಅಧ್ಯಕ್ಷತೆ ವಹಿಸಿದ್ದರು. ಝಹೀರ್ ನಿಝಾಮಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹನೀಫ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News