ಭದ್ರತೆಯ ಹೆಸರಿನಲ್ಲಿ ಸಂವಿಧಾನಕ್ಕೆ ಆಪತ್ತು

Update: 2019-11-19 18:03 GMT

ಅಯೋಧ್ಯೆ ಮತ್ತು ಶಬರಿಮಲೆ ಕುರಿತಾದ ತೀರ್ಪುಗಳ ಬಳಿಕ, ಈಗ ಗಮನ ಸುಪ್ರೀಂಕೋರ್ಟಿನಿಂದ ಪಾರ್ಲಿಮೆಂಟ್ ಕಡೆಗೆ ಕೇಂದ್ರಿತವಾಗುತ್ತಿದೆ. ಬಿಜೆಪಿಯು ತನ್ನ ಸೈದ್ಧಾಂತಿಕ ಕಾರ್ಯಸೂಚಿಯನ್ನು (ಅಜೆಂಡಾ) ಕೇಂದ್ರ ಸರಕಾರದ ಅಂಗಗಳ ಮೂಲಕ ಅನುಷ್ಠಾನಗೊಳಿಸಲು ಆರಂಭಿಸಿದೆ. ಅಮಿತ್ ಶಾ ಅವರು ಕೇಂದ್ರ ಗೃಹ ಸಚಿವರಾಗಿ ಹಾಗೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಎರಡು ಮಹತ್ವಪೂರ್ಣ ಹುದ್ದೆಗಳನ್ನು ಹೊಂದಿದ್ದಾರೆ. ಹಾಗಾಗಿ ನೀತಿ ರೂಪಿಸುವುದರಲ್ಲಿ ಹಾಗೂ ರಾಜಕೀಯ ತಂತ್ರಗಾರಿಕೆಯಲ್ಲಿ ಸಮನ್ವಯ ಹಾಗೂ ಸೂತ್ರ ಬದ್ಧತೆ ಎಷ್ಟು ಸುಲಭವಾಗಲಿದೆ ಎಂಬುದು ಸ್ಪಷ್ಟವಾಗಿದೆ.

ನೆರೆಯ ದೇಶಗಳ ಕಿರುಕುಳದಿಂದ ಅಲ್ಲಿಂದ ತಪ್ಪಿಸಿಕೊಂಡು ಬರುವ ಅಲ್ಪಸಂಖ್ಯಾತರಿಗೆ ನಾಗರಿಕತ್ವ ನೀಡುವ ಕುರಿತು ಬಿಜೆಪಿಯ 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಆಶ್ವಾಸನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪೌರತ್ವ (ತಿದ್ದುಪಡಿ) ಮಸೂದೆ ಮಂಡನೆಯಾಗಲಿದೆ. ಪೌರತ್ವ ಕಾಯ್ದೆಗೆ ತರಲು ಉದ್ದೇಶಿಸಲಾಗಿರುವ ಬದಲಾವಣೆಗಳು ಸಂಸತ್ತಿನಲ್ಲಿ ಅನುಮೋದನೆಗೊಂಡು ಕಾರ್ಯರೂಪಕ್ಕೆ ಬಂದಲ್ಲಿ ಅದು ಭಾರತದ ಸೆಕ್ಯುಲರ್ ಸ್ವರೂಪದಿಂದ ದೇಶವನ್ನು ಬಹಳ ದೂರ ಕೊಂಡೊಯ್ಯುತ್ತದೆ.

ಯಾಕೆಂದರೆ ಕಳೆದ ತಿಂಗಳು ಕೋಲ್ಕತಾದಲ್ಲಿ ನಡೆದ ವಿಚಾರಗೋಷ್ಠಿಯೊಂದರಲ್ಲಿ ಮಾತನಾಡುತ್ತ ಶಾ ಅವರು ‘‘ಎಲ್ಲ ಹಿಂದೂ, ಬೌದ್ಧ, ಸಿಖ್, ಜೈನ ಧರ್ಮೀಯ ನಿರಾಶ್ರಿತರನ್ನು ದೇಶದಿಂದ ಹೊರಕ್ಕೆ ಕಳುಹಿಸಲಾಗುವುದಿಲ್ಲ’’ ಎಂದು ಒತ್ತಿ ಹೇಳಿದರು. ಈಗಿನ ಸರಕಾರದ ಪ್ರಕಾರ ‘ನಿರಾಶ್ರಿತರು’ ಎಂಬ ಶಬ್ದದ ವ್ಯಾಖ್ಯಾನದಲ್ಲಿ ಎಲ್ಲ ಧರ್ಮೀಯರು ಸೇರುವುದಿಲ್ಲ.

ಬೇರೆ ಮಾತಿನಲ್ಲಿ ಹೇಳುವುದಾದರೆ ಸರಕಾರ ಈ ಕ್ರಮಗಳನ್ನು ಜಾರಿಗೊಳಿಸಿದಲ್ಲಿ ಇವುಗಳು ಭಾರತವನ್ನು ಒಂದು ಹಿಂದೂ ರಾಷ್ಟ್ರವಾಗಿ ಮಾಡುತ್ತವೆ. ಸಹಜವಾಗಿಯೇ ಇದು ದೇಶದ ಹಾಗೂ ಸಂವಿಧಾನದ ಮೂಲಾಧಾರವಾಗಿರುವ ಸೆಕ್ಯುಲರ್ ತಳಪಾಯವನ್ನೇ ಅಲುಗಾಡಿಸುತ್ತದೆ. ಸಂವಿಧಾನಕ್ಕೆ ಆಪತ್ತು ತರುತ್ತದೆ. ಇತ್ತೀಚೆಗೆ ಕೇಂದ್ರ ಸರಕಾರದ ಸಚಿವರೊಬ್ಬರು ನಮ್ಮ ಸಂವಿಧಾನದ ಪೀಠಿಕೆಯಲ್ಲಿರುವ ‘ಸೆಕ್ಯುಲರ್’ ಎಂಬ ಶಬ್ದವನ್ನೇ ಕಿತ್ತು ಹಾಕುವ ಬಗ್ಗೆ ಮಾತಾಡಿ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡರು. ಹೀಗೆ ‘ಸೆಕ್ಯುಲರ್’ ಎಂಬುದನ್ನೇ ಬಿಟ್ಟುಬಿಡಬೇಕೆಂಬ ಬೇಡಿಕೆ ಹಿಂದುತ್ವ ಅಜೆಂಡಾದ ಬಹಳ ಸಮಯದ ಆಶಯವಾಗಿದೆ. ಅದೇನಿದ್ದರೂ, ಇಂತಹ ಯಾವುದೇ ಒಂದು ಬೇಡಿಕೆಯನ್ನು ಅನುಷ್ಠಾನಗೊಳಿಸಲು ಯಾವುದೇ ತಿದ್ದುಪಡಿಯನ್ನು ತರಲು ಹೊರಟಲ್ಲಿ ಅದನ್ನು ಸಾಂವಿಧಾನಿಕ ನ್ಯಾಯಾಲಯಗಳು ಸಂವಿಧಾನದ ಮೂಲ ಚೌಕಟ್ಟಿಗೇ ಒಂದು ಬೆದರಿಕೆ ಎಂದು ಪರಿಗಣಿಸದೆ ಇರುವುದಿಲ್ಲ.

ಕೇಶವಾನಂದ ಭಾರತಿ ವರ್ಸಸ್ ಕೇರಳ ರಾಜ್ಯ ಸರಕಾರದ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ಜಾತ್ಯತೀತತೆಯು ‘ಸೆಕ್ಯುಲರಿಸಂ’ ಸಂವಿಧಾನದ ಮೂಲ ಚೌಕಟ್ಟಿನ ಒಂದು ಭಾಗ ಮತ್ತು ಆ ಮೂಲ ಚೌಕಟ್ಟನ್ನು ರದ್ದುಪಡಿಸಲು ಸಾಧ್ಯವೇ ಇಲ್ಲ ಎಂದು ಹೇಳಿತ್ತು. ಆದ್ದರಿಂದ ರಾಷ್ಟ್ರ ಅಥವಾ ಸರಕಾರ ಸೆಕ್ಯುಲರ್ ಆಗಿರಲೇಬೇಕು ಮತ್ತು ನಿರ್ಧಾರ ತೆಗೆದುಕೊಳ್ಳುವ ಯಾವುದೇ ಕ್ರಮಗಳು ದೇಶದ ಸೆಕ್ಯುಲರ್ ಎಳೆಗಳನ್ನು ಕಡಿಯುವಂತಿಲ್ಲ. ಅಲ್ಲದೆ ಸರಕಾರ ತರಲು ಉದ್ದೇಶಿಸಿರುವ ತಿದ್ದುಪಡಿಗಳಿಗೆ ಇನ್ನೊಂದು ಕಾನೂನಾತ್ಮಕವಾದ ತಡೆಯಿದೆ. ಅಂತರ್‌ರಾಷ್ಟ್ರೀಯ ಕಾನೂನು ಮತ್ತು ಮಾನವೀಯ ತತ್ವಗಳು ಧರ್ಮದ ನೆಲೆಯಲ್ಲಿ ನಿರಾಶ್ರಿತರ ನಡುವೆ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ.

ಇತ್ತೀಚೆಗೆ ಟರ್ಕಿಯಲ್ಲಿ ಅಲ್ಲಿನ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಅವರು ಆಡಳಿತದಲ್ಲಿ ಆ ದೇಶದ ಸೆಕ್ಯುಲರ್ ತಳಹದಿಗಳನ್ನು ಪುನರ್‌ರೂಪಿಸುವ, ಬದಲಿಸುವ ಪ್ರಯತ್ನಗಳು ನಡೆದವು. ಆದರೆ ಈ ಮಾದರಿಯನ್ನು ಭಾರತದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವೇ ಎಂಬುದು ನಮ್ಮ ದೇಶದ ನ್ಯಾಯಾಂಗವು ಸೆಕ್ಯುಲರಿಸಂಗೆ ಒಡ್ಡಲಾಗುವ ಈ ಸವಾಲನ್ನು ಹೇಗೆ, ಯಾವ ದೃಷ್ಟಿಯಿಂದ ನೋಡುತ್ತದೆ, ಹೇಗೆ ಎದುರಿಸುತ್ತದೆ, ಹೇಗೆ ಪ್ರತಿಭಟಿಸುತ್ತದೆ ಎಂಬುದನ್ನು ಅವಲಂಬಿಸಿದೆ.

ನ್ಯಾಯಾಂಗದ ಇಂತಹ ಪ್ರತಿಭಟನೆಯನ್ನು, ವಿರೋಧವನ್ನು ಪ್ರಾಯಶಃ ನಿರೀಕ್ಷಿಸಿಯೇ ಇತ್ತೀಚೆಗೆ ಶಾ ಅವರು ‘ರಾಷ್ಟ್ರೀಯ ಭದ್ರತೆ’ಯ ಕುರಿತು ತುಂಬಾ ಮಾತನಾಡಿದರು. ‘‘ಬಹಳಷ್ಟು ಮಂದಿ ನುಸುಳುಕೋರರ, ಅತಿಕ್ರಮಿಗಳ ಭಾರ ಹೊತ್ತ ಯಾವ ದೇಶವೂ ಸುಗಮವಾಗಿ ಸಾಗಲಾರದು’’ ಎಂಬ ಮಾತನ್ನು ಅವರು ಒತ್ತಿ ಹೇಳಿದರು. ಭದ್ರತೆಯ ಹೆಸರಿನಲ್ಲಿ, ಭದ್ರತೆಯ ಆತಂಕ ಮತ್ತು ಭಯದಲ್ಲಿ ಬಿಜೆಪಿಗೆ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಲು ಮತ್ತು ಭಾರತವನ್ನು ಒಂದು ‘ಹಿಂದೂ ರಾಷ್ಟ್ರ’ವಾಗಿ ಬದಲಿಸಲು ಸಾಧ್ಯವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

(ಲೇಖಕರು ಮದ್ರಾಸ್ ಹೈಕೋರ್ಟ್‌ನಲ್ಲಿ ನ್ಯಾಯವಾದಿ ಹಾಗೂ ಡಿಎಂಕೆ ಪಕ್ಷದ ವಕ್ತಾರ)
ಕೃಪೆ: ದಿ ಹಿಂದೂ        

Writer - ಮನುರಾಜ್ ಷಣ್ಮುಗ ಸುಂದರಂ

contributor

Editor - ಮನುರಾಜ್ ಷಣ್ಮುಗ ಸುಂದರಂ

contributor

Similar News