ಇವಿಎಂ ದತ್ತಾಂಶಗಳಲ್ಲಿ ಅಸಮಂಜತೆಗಳ ಕುರಿತು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ ಎಡಿಆರ್

Update: 2019-11-19 18:16 GMT

ಹೊಸದಿಲ್ಲಿ, ನ.19: ಯಾವುದೇ ಚುನಾವಣೆಯ ಅಂತಿಮ ಫಲಿತಾಂಶವನ್ನು ಘೋಷಿಸುವ ಮುನ್ನ ಅಂಕಿಅಂಶಗಳ ವಾಸ್ತವಿಕ ಮತ್ತು ನಿಖರ ಸಮಂಜಸತೆಯನ್ನು ದೃಢಪಡಿಸಿಕೊಳ್ಳಲು ಚುನಾವಣಾ ಆಯೋಗಕ್ಕೆ ಆದೇಶಿಸುವಂತೆ ಕೋರಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದೆ.

2019ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಂಕಿಅಂಶಗಳಲ್ಲಿಯ ಅಸಮಂಜಸತೆಗಳ ಕುರಿತು ತನಿಖೆಗೆ ನಿರ್ದೇಶಿಸುವಂತೆಯೂ ಎಡಿಆರ್ ತನ್ನ ಅರ್ಜಿಯಲ್ಲಿ ಆಗ್ರಹಿಸಿದೆ.

ಚುನಾವಣಾ ಆಯೋಗವು ನಡೆಸುವ ಚುನಾವಣಾ ಪ್ರಕ್ರಿಯೆಯ ಬಗ್ಗೆ ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿರುವ ಅರ್ಜಿಯು,‘ಆಯೋಗವು ಅಧಿಕೃತ ಚುನಾವಣಾ ಅಂಕಿಅಂಶಗಳನ್ನು ಬಿಡುಗಡೆಗೊಳಿಸುವ ಮುನ್ನವೇ ಚುನಾವಣಾ ಫಲಿತಾಂಶಗಳನ್ನು ಘೋಷಿಸುವ ಹಾಲಿ ಚುನಾವಣಾ ವ್ಯವಸ್ಥೆಯಲ್ಲಿನ ದೌರ್ಬಲ್ಯವು ಅತ್ಯಂತ ಗಂಭೀರ ಮತ್ತು ಅಪಾಯಕಾರಿ ಪ್ರವೃತ್ತಿಯಾಗಿದೆ ಮತ್ತು ಇದನ್ನು ಕಡೆಗಣಿಸಲಾಗದು. ಇಂತಹ ಶಿಷ್ಟಾಚಾರವು ಶಂಕೆ,ಗೊಂದಲ,ಸಂಘರ್ಷ ಮತ್ತು ಅತ್ಯಂತ ಅಪಖ್ಯಾತಿಯ ಚುನಾವಣಾ ಪ್ರಕ್ರಿಯೆಯನ್ನು ಸೃಷ್ಟಿಸುವ ಸಾಧ್ಯತೆಯಿದೆ ಮತ್ತು ಆಯೋಗವು ಎಲ್ಲ ಚುನಾವಣಾಧಿಕಾರಿಗಳಿಂದ ಎಲ್ಲ ವಾಸ್ತವಿಕ ಅಂಕಿಅಂಶಗಳನ್ನು ಸ್ವೀಕರಿಸುವ ಮತ್ತು ವ್ಯವಸ್ಥಿತ ಹಾಗೂ ಪಾರದರ್ಶಕ ರೀತಿಯಲ್ಲಿ ಅದರ ನಿಖರತೆಯನ್ನು ದೃಢಪಡಿಸಿಕೊಳ್ಳುವ ಮುನ್ನವೇ ಫಲಿತಾಂಶಗಳನ್ನು ಘೋಷಿಸುವುದು ಸಂವಿಧಾನ ವಿರೋಧಿ,ಕಾನೂನು ಬಾಹಿರ,ನಿರಂಕುಶ ಮತ್ತು ಅನ್ಯಾಯಪೂರ್ಣವಾಗಿದೆ ’ಎಂದು ವಾದಿಸಿದೆ.

 2019ರ ಲೋಕಸಭಾ ಚುನಾವಣೆಗಳ ಫಲಿತಾಂಶ ಪ್ರಕಟಣೆಯ ಬಳಿಕ ಚುನಾವಣಾ ಆಯೋಗವು ಹಲವಾರು ಸಂದರ್ಭಗಳಲ್ಲಿ ತನ್ನ ವೆಬ್‌ಸೈಟ್ ಮತ್ತು ‘ಮೈ ವೋಟರ್ಸ್ ಟರ್ನ್‌ಔಟ್ ’ಆ್ಯಪ್‌ನಲ್ಲಿ ಚಲಾಯಿಸಲಾಗಿದ್ದ ಮತಗಳ ಕುರಿತು ದತ್ತಾಂಶಗಳನ್ನು ಬದಲಿಸಿದ್ದನ್ನು ಅರ್ಜಿಯಲ್ಲಿ ಬೆಟ್ಟು ಮಾಡಿರುವ ಎಡಿಆರ್,ಅಂಕಿಅಂಶದಲ್ಲಿ ಹಲವಾರು ಬಾರಿ ಬದಲಾವಣೆಗಳು ಅಸಮಂಜಸತೆಗಳನ್ನು ಮುಚ್ಚಿಹಾಕುವ ಪ್ರಯತ್ನವಾಗಿರಬಹುದು ಎಂದು ಹೇಳುವ ಮೂಲಕ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದೆ.

 ಚುನಾವಣಾ ಫಲಿತಾಂಶವು ನಿಖರವಾಗಿರುವದು ಮಾತ್ರ ಸಾಲದು,ಫಲಿತಾಂಶಗಳು ನಿಖರವಾಗಿವೆ ಎನ್ನುವುದು ಸಾರ್ವಜನಿಕರಿಗೂ ಗೊತ್ತಾಗಬೇಕು ಎಂದಿರುವ ಅದು, ವಿನ್ಯಾಸಕಾರರು, ಪ್ರೋಗ್ರಾಮರ್‌ಗಳು, ತಯಾರಕರು, ನಿರ್ವಹಣಾ ತಂತ್ರಜ್ಞರು ಇತ್ಯಾದಿ ಒಳಗಿನವರಿಂದಲೇ ದುರುದ್ದೇಶಪೂರ್ವಕ ಬದಲಾವಣೆಗಳಿಗೆ ವಿದುನ್ಮಾನ ಮತದಾನ ಯಂತ್ರ (ಇವಿಎಂ)ಗಳು ಸುಲಭಭೇದ್ಯವಾಗಿವೆ ಎನ್ನುವುದನ್ನೂ ನ್ಯಾಯಾಲಯದ ಗಮನಕ್ಕೆ ತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News