ಉಚಿತ ನೇತ್ರ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದ ಸಮಾರೋಪ: 139 ಮಂದಿಗೆ ನೇತ್ರ ಶಸ್ತ್ರ ಚಿಕಿತ್ಸೆ

Update: 2019-11-19 18:35 GMT

ಮಡಿಕೇರಿ,ನ.19 : ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ನವೆಂಬರ್, 13 ರಿಂದ 17 ರವರೆಗೆ 5 ದಿನಗಳ ಕಾಲ ಆಸ್ಪತ್ರೆಯ 43 ನೇ ವಾರ್ಷಿಕೋತ್ಸವದ ಆಚರಣೆಯ ಪ್ರಯುಕ್ತ ನಡೆದ 31 ನೇ ವರ್ಷದ ಉಚಿತ ನೇತ್ರ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದ ಸಮಾರೋಪ ಸಮಾರಂಭವು ಆಸ್ಪತ್ರೆಯಲ್ಲಿ ನಡೆಯಿತು.  

ಸಮಾರಂಭದಲ್ಲಿ ಆಸ್ಪತ್ರೆಯ ವಿಶ್ವಸ್ಥ ಟಿ.ಆರ್.ಶೆಣೈ ಅವರು ಅಧ್ಯಕ್ಷತೆ ವಹಿಸಿದ್ದರು. ಕೊಡಗು ಜಿಲ್ಲೆಯ ಅಂಧತ್ವ ನಿವಾರಣಾ ಸಂಸ್ಥೆಯ ಮುಖ್ಯಸ್ಥರಾದ ಡಾ.ಆನಂದ ಅವರು ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.  

ಅಶ್ವಿನಿ ಆಸ್ಪತ್ರೆಯ ವಿಶ್ವಸ್ಥರು ಹಾಗೂ ಖಚಾಂಜಿಯಾಗಿರುವ ಎಂ.ಸಿ.ಗೋಖಲೆ ಅವರು ನೇತ್ರ ಚಿಕಿತ್ಸಾ ವರದಿ ಮಂಡಿಸಿದರು. ಕಳೆದ 30 ವರ್ಷಗಳಿಂದ ನಡೆಯುತ್ತಿರುವ ಶಿಬಿರದ ಸಂಕ್ಷಿಪ್ತ ವರದಿ ಹಾಗೂ ಈ ಬಾರಿ ನಡೆದ 31 ನೇ ಶಿಬಿರದ ವಿಸ್ತೃತ ವರದಿ ಮಂಡಿಸಿದರು. ಕೊಡಗು ಮತ್ತು ಸುತ್ತಮುತ್ತಲಿನ 55 ಹಳ್ಳಿಗಳಲ್ಲಿ ವೈದ್ಯರ ತಂಡವು ಪ್ರಾಥಮಿಕ ಪರೀಕ್ಷೆ ಮಾಡಿ ಆಯ್ದ ರೋಗಿಗಳನ್ನು ಅಶ್ವಿನಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಅಂತಿಮವಾಗಿ 139 ರೋಗಿಗಳಿಗೆ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದರು.

ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷರಾದ ರೋ.ಜಗದೀಶ ಪ್ರಶಾಂತ್, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ.ಮೋಹನ್ ಕುಮಾರ್, ಮಡಿಕೇರಿ ರೋಟರಿ ರೋ. ಚೀಯಣ್ಣ ಅವರು ಮಾತನಾಡಿ, ತಮ್ಮ ಸಂಸ್ಥೆಯ ಸಹಾಯ ಹಸ್ತವನ್ನು ಇನ್ನು ಮುಂದೆಯೂ ಮುಂದುವರೆಸಲಾಗುವುದು ಎಂದರು.   

ಶಿಬಿರದಲ್ಲಿ ಭಾಗವಹಿಸಿದ ಫಲಾನುಭವಿಗಳು ತಮ್ಮ ಅನುಭವ ಹಂಚಿಕೊಂಡು ಅಶ್ವಿನಿ ಆಸ್ಪತ್ರೆಯ ಉಚಿತ ಶಸ್ತ್ರಚಿಕಿತ್ಸೆಯಲ್ಲಿ ಪ್ರಯಾಣ ಸೌಕರ್ಯ, ಊಟ ತಿಂಡಿ, ವಸತಿಗಳ  ಸೇವಾ ಕಾರ್ಯವನ್ನು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾದ ಡಾ.ಆನಂದ ಅವರು ಆಸ್ಪತ್ರೆಯು 31 ವರ್ಷಗಳಿಂದ ಮಾಡುತ್ತಿರುವ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಅಶ್ವಿನೀ ಆಸ್ಪತ್ರೆಯು 31  ವರ್ಷದ ಹಿಂದೆ ಪ್ರಾರಂಭ ಮಾಡಿದ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರದ ಕಾರಣಕರ್ತರಾದ ದಿ. ಡಾ.ಅಪ್ಪೂರಾವ್ ಪೈ ಹಾಗೂ ಮಡಿಕೇರಿ ಲಯನ್ಸ್ ಕ್ಲಬ್‍ನ ಸೇವೆಯನ್ನು ಹಾಗೂ ಈ ಹಿಂದಿನ ಶಿಬಿರದವರಿಗೆ ಮಾರ್ಗದರ್ಶಕರಾಗಿದ್ದ ದಿ.ಬಿ.ಜಿ.ವಸಂತ ಅವರ ಸೇವೆಯನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸಿದರು.

ಈ ವರ್ಷ ಕಡಿಮೆ ಸಂಖ್ಯೆಯ ರೋಗಿಗಳು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಬಗ್ಗೆ ವಿವರಿಸುತ್ತಾ ಬಹಳಷ್ಟು ಜನರಲ್ಲಿ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ಕಾಣಿಸಿಕೊಂಡಿರುವುದರಿಂದ ಅಂಥವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿಲ್ಲ ಎಂದರು. ಆಸ್ಪತ್ರೆಯ ವಿಶ್ವಸ್ಥರು ಮತ್ತು ಸಹಕಾರ್ಯದರ್ಶಿ ಡಿ.ಎಚ್.ತಮ್ಮಪ್ಪ ಸ್ವಾಗತಿಸಿದರು. ಡಾ.ಕುಲಕರ್ಣಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News