ಬಾದಾಮಿ: ಆಸ್ಟ್ರೇಲಿಯದ ಪ್ರವಾಸಿಗನಿಗೆ ಗ್ರಾಮಸ್ಥರಿಂದ ಹಲ್ಲೆ

Update: 2019-11-20 05:43 GMT

ಬಾದಾಮಿ, ನ.20: ಹಳ್ಳಿಯೊಂದರ ಮಹಿಳೆಯರೊಂದಿಗೆ ಕುಡಿದ ಮತ್ತಿನಲ್ಲಿ ಅಸಭ್ಯವಾಗಿ ವರ್ತಿಸಿದ ಆಸ್ಟ್ರೇಲಿಯದ ಪ್ರಜೆಯನ್ನು ಗ್ರಾಮಸ್ಥರು ಒಟ್ಟಾಗಿ ಥಳಿಸಿದ ಘಟನೆ ಮಂಗಳವಾರ ನಡೆದಿದೆ. ಥಳಿತದಿಂದ ಗಾಯಗೊಂಡಿರುವ ಆಸ್ಟ್ರೇಲಿಯ ಪ್ರಜೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 30ರ ವಯಸ್ಸಿನ ಜೇಮ್ಸ್ ವಿಲಿಯಮ್ಸ್ ಆಸ್ಟ್ರೇಲಿಯದ ಮೆಲ್ಬೋರ್ನ್ ನಿವಾಸಿಯಾಗಿದ್ದಾನೆ. ಕೇರಳದ ಕೊಚ್ಚಿಯಿಂದ ಬಾಗಲಕೋಟೆಗೆ ಬಂದಿದ್ದು, ಅಲ್ಲಿಂದ ಬಸ್‌ನಲ್ಲಿ ಬಾದಾಮಿಗೆ ಬಂದಿದ್ದ. ಬಾದಾಮಿ ತಲುಪಿದಾಗ ಕತ್ತಲಾದ ಕಾರಣ ಅಲ್ಲಿಯೇ ಸಮೀಪವಿದ್ದ ಹಳ್ಳಿಯ ಮನೆಯೊಂದರಲ್ಲಿ ಅವಿತು ಕುಳಿತ್ತಿದ್ದ. ಈತನನ್ನು ಕಂಡ ಗ್ರಾಮಸ್ಥರು ಮೊದಲಿಗೆ ಕಳ್ಳನೆಂದು ಭಾವಿಸಿದ್ದರು. ಅಜಾನುಬಾಹು ವಿಲಿಯಮ್ಸ್ ಕುಡಿತ ಮತ್ತಿನಲ್ಲಿದ್ದ. ಆತನನ್ನು ಹಳ್ಳಿಯಿಂದ ಸಾಗ ಹಾಕಲು ಗ್ರಾಮಸ್ಥರು ಯತ್ನಿಸಿದಾಗ ಅವರ ಮೇಲೆಯೇ ಹಲ್ಲೆಗೆ ಮುಂದಾದ. ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಆಗ ಗ್ರಾಮಸ್ಥರು ಆತನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಸ್ಟ್ರೇಲಿಯ ಪ್ರಜೆಯನ್ನು ಬಾಗಲಕೋಟೆಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಪೊಲೀಸರು ಘಟನೆಯ ಬಗ್ಗೆ ಕೇಸ್ ದಾಖಲಿಸಿಕೊಂಡಿದ್ದು, ಕೆಲವು ಶಂಕಿತರನ್ನು ಬಂಧಿಸಿದ್ದಾರೆ.

ಬಾದಾಮಿ ರಾಜ್ಯದ ಖ್ಯಾತ ಪ್ರವಾಸಿ ತಾಣವಾಗಿದ್ದು, ಇದಲ್ಲಿ ಹಲವು ಗುಹೆ ದೇವಾಲಯಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News