ಸಚಿವ ಮಾಧುಸ್ವಾಮಿ ಪರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಕ್ಷಮೆಯಾಚನೆ

Update: 2019-11-20 11:47 GMT

ಬೆಂಗಳೂರು, ನ. 20: ಕನಕ ಗುರುಪೀಠದ ಶ್ರೀ ಈಶ್ವರಾನಂದ ಸ್ವಾಮೀಜಿ ಅವರನ್ನು ಏಕವಚನದಲ್ಲಿ ನಿಂದನೆ ಮಾಡಿದ ಪ್ರಕರಣ ಸಂಬಂಧ ಸಚಿವ ಜೆ.ಸಿ.ಮಾಧುಸ್ವಾಮಿ ಪರವಾಗಿ ಸಿಎಂ ಯಡಿಯೂರಪ್ಪ, ಸ್ವಾಮೀಜಿ ಹಾಗೂ ಕುರುಬ ಸಮುದಾಯದ ಕ್ಷಮೆ ಕೋರಿದ್ದಾರೆ.
ಆದರೆ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ನಾನು ಕುರುಬ ಸಮುದಾಯ ಅಥವಾ ಸ್ವಾಮೀಜಿಗೆ ಅವಹೇಳನ ಮಾಡಿಲ್ಲ. ಅಂತಹ ಸಂಸ್ಕೃತಿಯೂ ನಮ್ಮದಲ್ಲ. ಸಿಎಂ ಕ್ಷಮೆ ಕೇಳುವಂತಹ ತಪ್ಪು ನನ್ನಿಂದ ಆಗಿದ್ದರೆ ಘಟನೆಯ ಬಗ್ಗೆ ‘ವಿಷಾದ ವ್ಯಕ್ತಪಡಿಸುತ್ತೇವೆ’ ಎಂದು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಿ. ಕನಕದಾಸರು ಮಹಾನ್ ಸಂತ. ಕಾಗಿನೆಲೆಯನ್ನು ನಾನು ಹೇಗೆ ಅಭಿವೃದ್ಧಿಪಡಿಸಿದ್ದೇನೆ ಎನ್ನುವುದು ಸಮುದಾಯದ ಎಲ್ಲರಿಗೂ ಗೊತ್ತಿದೆ ಎಂದರು.

ಹುಳಿಯಾರ್ ವೃತ್ತಕ್ಕೆ ಕನಕದಾಸರ ಹೆಸರು ಇಡಲು ನಮ್ಮದೇನು ತಕರಾರು ಇಲ್ಲ. ಈ ಸಂಬಂಧ ಸಚಿವ ಮಾಧುಸ್ವಾಮಿಗೂ ಯಾವುದೇ ಅಭ್ಯಂತರವಿಲ್ಲ. ಈಗಾಗಲೇ ಮಾಧುಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ. ನಾನು ಕ್ಷಮೆ ಕೇಳುತ್ತೇನೆ. ಕನಕದಾಸರ ಬಗ್ಗೆ ಗೊಂದಲ ಸೃಷ್ಟಿ ಸಲ್ಲ ಎಂದು ಬಿಎಸ್‌ವೈ ಆಕ್ಷೇಪಿಸಿದರು.

‘ಮಾಧ್ಯಮಗಳು ರಾಜಕಾರಣ ಮಾಡುವುದು ಸಲ್ಲ. ಅವರು ಮಾಡಿದ ವ್ಯಭಿಚಾಕ್ಕೆ ಇಷ್ಟೆಲ್ಲ ಗೊಂದಲ ಸೃಷ್ಟಿಯಾಗಿದೆ. ಘಟನೆ ಬಗ್ಗೆ ಮಾಧುಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ, ಉಪಚುನಾವಣೆ ಮುಗಿಯುವವರೆಗೂ ನೀವು ಈ ವಿಚಾರವನ್ನು ಬಿಡುವುದಿಲ್ಲ’ ಎಂದು ಸಚಿವ ಈಶ್ವರಪ್ಪ ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗೊಂದಲಕ್ಕೆ ತೆರೆ ಎಳೆಯಲು ಸೂಚನೆ:
ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿಯೂ ಕುರುಬ ಸಮುದಾಯದ ಸ್ವಾಮೀಜಿಗೆ ಸಚಿವ ಮಾಧುಸ್ವಾಮಿ ಅವಹೇಳನ ಮಾಡಿದ ವಿಚಾರ ಪ್ರಸ್ತಾಪವಾಗಿದ್ದು, ಉಪಚುನಾವಣೆ ಹಿನ್ನೆಲೆಯಲ್ಲಿ ಕ್ಷಮೆ ಕೋರಿ ವಿಚಾರಕ್ಕೆ ತೆರೆ ಎಳೆಯುವಂತೆ ಸಿಎಂ, ಮಾಧುಸ್ವಾಮಿಗೆ ಸೂಚಿಸಿದ್ದಾರೆಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News