ಭಾರತ ಸೇರಿದಂತೆ 10 ದೇಶಗಳಿಂದ ಜಾಗತಿಕ ತಾಪಮಾನ ಒಪ್ಪಂದ ಉಲ್ಲಂಘನೆ

Update: 2019-11-20 15:11 GMT

ಲಂಡನ್, ನ. 20: ಜಗತ್ತಿನ ಪ್ರಮುಖ ಭೂಗತ ಇಂಧನ ಉತ್ಪಾದಕ ದೇಶಗಳು ಮುಂದಿನ ದಶಕದಲ್ಲಿ ಅಧಿಕ ಪ್ರಮಾಣದಲ್ಲಿ ಕಲ್ಲಿದ್ದಲು, ತೈಲ ಮತ್ತು ಅನಿಲವನ್ನು ಉತ್ಪಾದಿಸುವ ಮೂಲಕ ಜಾಗತಿಕ ಪರಿಸರ ಗುರಿಗಳನ್ನು ಉಲ್ಲಂಘಿಸಲಿದ್ದಾರೆ ಎಂದು ವಿಶ್ವಸಂಸ್ಥೆ ಮತ್ತು ಸಂಶೋಧನಾ ಗುಂಪುಗಳು ಬುಧವಾರ ಎಚ್ಚರಿಕೆ ನೀಡಿವೆ.

ಸೂಪರ್ ‌ಪವರ್‌ಗಳಾದ ಚೀನಾ ಮತ್ತು ಅಮೆರಿಕ ಸೇರಿದಂತೆ, ಮುಖ್ಯವಾಗಿ 10 ದೇಶಗಳು 2030ರ ವೇಳೆಗೆ ಉತ್ಪಾದಿಸುವ ಇಂಧನ ಪ್ರಮಾಣವು ಪ್ಯಾರಿಸ್ ಹವಾಮಾನ ಒಪ್ಪಂದ ನಿಗದಿಪಡಿಸಿದ ಮಿತಿಗಿಂತ 50ರಿಮದ 120 ಶೇಕಡದಷ್ಟು ಹೆಚ್ಚಾಗಿರುತ್ತದೆ ಎಂದು ಅಧ್ಯಯನ ತಿಳಿಸಿದೆ.

2015ರ ಜಾಗತಿಕ ಪರಿಸರ ಒಪ್ಪಂದದ ಪ್ರಕಾರ, ಸರಾಸರಿ ತಾಪಮಾನ ಹೆಚ್ಚಳವನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 1.5-2 ಡಿಗ್ರಿ ಸೆಲ್ಸಿಯಸ್‌ಗೆ ಮಿತಿಗೊಳಿಸಲು ದೇಶಗಳು ಬದ್ಧತೆ ಹೊಂದಿವೆ.

ಆದರೆ, 2030ರ ವೇಳೆಗೆ 10 ದೇಶಗಳು ಉದ್ದೇಶಿಸಿರುವ ಇಂಧನ ಉತ್ಪಾದನೆಯು 39 ಗಿಗಾ ಟನ್ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಸೃಷ್ಟಿಸುತ್ತದೆ. ಇದು ತಾಪಮಾನ ಹೆಚ್ಚಳವನ್ನು 2 ಡಿಗ್ರಿ ಸೆಲ್ಸಿಯಸ್‌ಗೆ ಮಿತಿಗೊಳಿಸಲು ಅಗತ್ಯವಾದ 21 ಗಿಗಾ ಟನ್‌ಗಿಂತ 53 ಶೇಕಡ ಅಧಿಕವಾಗಿದೆ ಅಥವಾ ತಾಪಮಾನ ಹೆಚ್ಚಳವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಿಗೊಳಿಸಲು ಅಗತ್ಯವಾದ ಪ್ರಮಾಣಕ್ಕಿಂತ 120 ಶೇಕಡ ಅಧಿಕವಾಗಿದೆ.

ಬೃಹತ್ ಪ್ರಮಾಣದಲ್ಲಿ ಭೂಗತ ಇಂಧನ ಉತ್ಪಾದಿಸುವ ಇತರ ದೇಶಗಳೆಂದರೆ ರಶ್ಯ, ಭಾರತ, ಆಸ್ಟ್ರೇಲಿಯ, ಇಂಡೋನೇಶ್ಯ, ಕೆನಡ, ಜರ್ಮನಿ, ನಾರ್ವೆ ಮತ್ತು ಬ್ರಿಟನ್.

2050ರ ವೇಳೆಗೆ ಜಾಗತಿಕ ಆರ್ಥಿಕತೆಗೆ 560 ಲಕ್ಷ ಕೋಟಿ ರೂ. ನಷ್ಟ

ಪ್ಯಾರಿಸ್, ನ. 20: ಹವಾಮಾನ ಬದಲಾವಣೆಯು ಈ ಶತಮಾನದ ಮಧ್ಯ ಭಾಗದ ಹೊತ್ತಿಗೆ ಜಾಗತಿಕ ಆರ್ಥಿಕತೆಗೆ 7.9 ಟ್ರಿಲಿಯ ಡಾಲರ್ (ಸುಮಾರು 560 ಲಕ್ಷ ಕೋಟಿ ರೂಪಾಯಿ)ನಷ್ಟು ಹೊಡೆತ ನೀಡುತ್ತದೆ ಎಂದು ಹೊಸ ಅಧ್ಯಯನವೊಂದು ಬುಧವಾರ ತಿಳಿಸಿದೆ.

ಬರ ಮತ್ತು ಪ್ರವಾಹದಲ್ಲಿನ ಹೆಚ್ಚಳ ಹಾಗೂ ಇದರ ಪರಿಣಾಮವಾಗಿ ಉಂಟಾಗುವ ಬೆಳೆ ವೈಫಲ್ಯವು ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಹಾಗೂ ಮೂಲಸೌಕರ್ಯಗಳಿಗೆ ಅಡಚಣೆಯುಂಟು ಮಾಡುತ್ತದೆ ಎಂದು ಎಕನಾಮಿಸ್ಟ್ ಇಂಟಲಿಜನ್ಸ್ ಯೂನಿಟ್‌ನ ಕ್ಲೈಮೇಟ್ ಚೇಂಜ್ ರೆಸಿಲಿಯನ್ಸ್ ಇಂಡೆಕ್ಸ್ ಪತ್ತೆಹಚ್ಚಿದೆ.

ಜಗತ್ತಿನ ಅತಿ ದೊಡ್ಡ 82 ಆರ್ಥಿಕತೆಗಳ ಸಿದ್ಧತೆಯನ್ನು ಇಂಡೆಕ್ಸ್ ಅಂದಾಜಿಸಿದೆ ಹಾಗೂ ಪ್ರಸಕ್ತ ಪ್ರವೃತ್ತಿಗಳಂತೆ, ಹೆಚ್ಚುತ್ತಿರುವ ಉಷ್ಣತೆಯು 2050ರ ವೇಳೆಗೆ ಜಾಗತಿಕ ಒಟ್ಟು ದೇಶಿ ಉತ್ಪನ್ನ (ಜಿಡಿಪಿ)ದ 3 ಶೇಕಡವನ್ನು ನಾಶಪಡಿಸುತ್ತದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News