ವಿವಾದಾತ್ಮಕ ಸುತ್ತೋಲೆ: ಶಿಕ್ಷಣ ಸಚಿವರ ರಾಜೀನಾಮೆಗೆ ಸಿಪಿಐಎಂಎಲ್ ಆಗ್ರಹ

Update: 2019-11-20 18:26 GMT

ಚಿಕ್ಕಮಗಳೂರು, ನ.20: ಸಂವಿಧಾನ ರಚನೆ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಇತ್ತೀಚೆಗೆ ಹೊರಡಿಸಿರುವ ವಿವಾದಾತ್ಮಕ ಸುತ್ತೋಲೆಯ ಮೂಲಕ ಇತಿಹಾಸ ತಿರುಚುವ ಪ್ರಯತ್ನವನ್ನು ಸಿಪಿಐ (ಎಂಎಲ್) ಖಂಡಿಸಿದ್ದು, ಶಿಕ್ಷಣ ಸಚಿವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನಗರದ ಆಜಾದ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಸಂಘಪರಿವಾರದ ನಿಯಂತ್ರಣದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶದ ಸಂವಿಧಾನ, ಜಾತ್ಯಾತೀತ ನಿಲುವು, ಅಂಬೇಡ್ಕರ್ ಸೇರಿದಂತೆ ಸಮಾಜಮುಖಿ ಶಕ್ತಿಗಳನ್ನು ಮನುವಾದದ ಹಿನ್ನೆಲೆಯೊಂದಿಗೆ ಸಂಘಟಿತ ದಾಳಿಗಳು ನಡೆಯುತ್ತಿದ್ದು, ಇತ್ತೀಚೆಗೆ ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ಇದಕ್ಕೊಂದು ನಿರ್ದಶನ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡರು ಟೀಕಿಸಿದರು. 

ಕಳೆದ ಅವಧಿಯ ಕೇಂದ್ರ ಸಚಿವರ ಸಂವಿಧಾನ ಬದಲಾಯಿಸುವ ಹೇಳಿಕೆ, ದಲಿತ, ಆದಿವಾಸಿ, ಅಲ್ಪಸಂಖ್ಯಾತರ ಮೇಲಿನ ದಾಳಿ, ಮೇಲ್ಜಾತಿಯವರಿಗೆ ಶೇ.10ರಷ್ಟು ಮೀಸಲಾತಿ, ಜಮ್ಮುಕಾಶ್ಮೀರದ ಪ್ರಶ್ನೆ, ರಾಷ್ಟ್ರೀಯ ಪೌರತ್ವ ಕಾಯ್ದೆ, ವಿಎಪಿಎ ಕಾಯ್ದೆ, ಆಸ್ಪಾ ಕಾಯ್ದೆ, ಒಂದೇ ಚುನಾವಣೆ, ನೋಟು ಅಮಾನ್ಯೀಕರಣ, ಜಿಎಸ್‍ಟಿ, ಒಂದೇ ದೇಶ, ಒಂದೇ ಭಾಷೆ,  ಹಿಂದಿ ಭಾಷಾ ಹೇರಿಕೆ ಮೂಲಕ ಸಂವಿಧಾನದ ಆಶಯ ಮತ್ತು ಅದರ ರಚನೆಯನ್ನು ಛಿದ್ರಗೊಳಿಸಿ ಆ ಜಾಗದಲ್ಲಿ ಮನುಧರ್ಮವನ್ನು ಜಾರಿಗೊಳಿಸುವ ಕುಟಿಲತೆ ಅಡಗಿದೆ ಎಂದು ಆರೋಪಿಸಿದರು. 

ನರೇಂದ್ರ ಮೋದಿಯವರು 2ನೇ ಅವಧಿಗೆ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಸಂವಿಧಾನ ಮತ್ತು ಅಂಬೇಡ್ಕರ್ ಗೆ ನಮಸ್ಕರಿಸುವ ಮೂಲಕ ದಾಳಿಯ ಮುನ್ಸೂಚನೆ ನೀಡಿದ್ದರು ಎಂದು ಹೇಳಿರುವ ಸಂಘಟನೆ ಇಂತಹ ವೈಚಾರಿಕ ದಾಳಿಗಳ ಹಿಂದೆ ಹಣಕಾಸು, ಬಂಡವಾಳಶಾಹಿಗಳ ಬೆಂಬಲವಿದ್ದು, ಸ್ವಾತಂತ್ರ್ಯ ಹೋರಾಟಗಾರರ ಆಶಯಕ್ಕೆ ವಿರುದ್ದವಾಗಿ ವರ್ತಿಸುವ ರಾಜ್ಯ ಸರಕಾರದ ನಡೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕೆಂದು ಮುಖಂಡರು ಆಗ್ರಹಿಸಿದರು. 

ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಎಸ್.ವಿಜಯ್, ಬಸವರಾಜು, ಶೇಖರ್, ನಾರಾಯಣ್, ಉಮೇಶ್, ಸಂದೀಪ್, ಕೆ.ಎಂ.ರಮೇಶ್, ಪರಮೇಶ್ ಸೇರಿದಂತೆ ಹಲವರಿದ್ದರು.ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News