ಮಂಡ್ಯ: ಶಿಕ್ಷಣ ಇಲಾಖೆ ಸುತ್ತೋಲೆ ಖಂಡಿಸಿ ಬೃಹತ್ ಪ್ರತಿಭಟನೆ

Update: 2019-11-20 18:36 GMT

ಮಂಡ್ಯ, ನ.20: ಶಿಕ್ಷಣ ಇಲಾಖೆ ಸುತ್ತೋಲೆ ಪ್ರಕರಣ ಸಂಬಂಧ ಅಧಿಕಾರಿಗಳ ವಜಾ ಹಾಗೂ ಶಿಕ್ಷಣ ಸಚಿವ ಸುರೇಶ್‍ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳು, ದಲಿತ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ ಎಂಬುದನ್ನು ತೀವ್ರವಾಗಿ ಖಂಡಿಸಿದ ಅವರು, ಈ ಸಂಬಂಧ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮುಖಂಡರು, ದೇಶದ ಶಾಸಕಾಂಗ, ನ್ಯಾಯಾಂಗ, ಆಡಳಿತಾಂಗ ಹಾಗೂ ಮಾಧ್ಯಮರಂಗದಲ್ಲಿ ನುಸಿಳಿರುವ ಉಗ್ರಜಾತಿವಾದಿಗಳು, ನಮ್ಮ ಜಾತ್ಯತೀತ ಸಂವಿಧಾವನ್ನು ಸ್ಥಾನಪಲ್ಲಟಗೊಳಿಸಿ ಹಿಂದಿನ ಅನಾಗರಿಕ ಜಾತಿ ಪ್ರಭುವವನ್ನು ಸ್ಥಾಪಿಸುವ ಮಹಾಸಂಚಿನ ಭಾಗವಾಗಿ ಈ ದುರ್ಘಟನೆ ನಡೆದಿದೆ ಎಂಬುದು ನಿಸ್ಸಂದೇಹ ವಿಚಾರ ಎಂದು ಆರೋಪಿಸಿದರು.

ಸಂವಿಧಾನ ರಚನೆಯಂತಹ ಅಚಾರಿತ್ರಿಕ ಸಂದರ್ಭದ ಹಲವು ಸವಾಲುಗಳನ್ನು ಅಂಬೇಡ್ಕರೊಬ್ಬರೆ ಯಶಸ್ವಿಯಾಗಿ ನಿರ್ವಹಿಸಿರುವುದು ಚಿರಪರಿಚಿತ ಇತಿಹಾಸವಾಗಿದೆ. ವಿಶ್ವದ ಮಹೋನ್ನತ ವ್ಯಕ್ತಿಗಳೆಲ್ಲರೂ ಅಂಬೇಡ್ಕರವರ ಆಳವಾದ ಸಮಗ್ರಜ್ಞಾನಕ್ಕೆ ತಲೆದೂಗಿದ್ದಾರೆ, ಮುಕ್ತ ಮನಸ್ಸಿನಿಂದ ಪ್ರಶಂಸಿಸಿದ್ದಾರೆ ಎಂದು ಅವರು ಹೇಳಿದರು.

ಇತಿಹಾಸವನ್ನು ತಿರುಚಿ ತಮ್ಮ ನೈತಿಕ ಹಾಗೂ ಬೌದ್ಧಿಕ ದಿವಾಳಿತನವನ್ನು ಮರೆಮಾಚಲು ಜಾತಿವಾದಿಗಳು ಮುಂದಿನ ಪೀಳಿಗೆಗೆ ಹಸಿಹಸಿಯಾದ ಸುಳ್ಳುಗಳನ್ನೇ ಇತಿಹಾಸವೆಂದು ನಂಬಿಸಲು ಯತ್ನಿಸಿರುವ ಇಂತಹ ದುಷ್ಟ ಆಲೋಚನೆ ಮತ್ತು ಅಧಿಕಾರ ದುರುಪಯೋಗದಂತಹ ವಿದ್ಯಮಾನಗಳು ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆಯನ್ನೇ ನಾಶಮಾಡಲಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ದೇಶದ ದುಡಿಮೆ ಮತ್ತು ಉತ್ಪಾದನೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿರುವ ದಲಿತರು, ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರು, ರೈತರು ಇತ್ಯಾದಿ ಜನಸಮುದಾಯಗಳು ಎಲ್ಲಿವರೆಗೆ ತಮ್ಮ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಫ್ಯಾಸಿಸ್ಟ್ ಆಡಳಿತವನ್ನು ಕೊನೆಗಾಣಿಸುವುದಿಲ್ಲವೋ ಅಲ್ಲಿಯವರೆಗೆ ಈ ಬಗೆಯ ಅಧಿಕಾರ ದುರುಪಯೋಗ ಮಹಾ ಪಾತಕಗಳು ನಡೆಯುತ್ತಿರುತ್ತವೆ. ಅದಕ್ಕಾಗಿ ಜನಪರವಾದ ಐಕ್ಯ ಹೋರಾಟಗಳನ್ನು ನಿರಂತರವಾಗಿ ನಡೆಸುವುದು ಅನಿವಾರ್ಯವಾಗಿದೆ ಎಂದು ಅವರು ಕರೆ ನೀಡಿದರು.

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅಂಬೇಡ್ಕರ್ ಕೊಡುಗೆ ಕುರಿತಂತೆ ಸಂದೇಹ ಮತ್ತು ಅನಗತ್ಯ ವಿಚಾರ ಹುಟ್ಟುಹಾಕಿರುವ ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಅವರ ಆಡಳಿತ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಬೇಕು ಹಾಗೂ ಇಲಾಖೆಯ ಸಚಿವ ಸುರೇಶ್‍ಕುಮಾರ್ ನೈತಿಕ ಹೊಣೆಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಸರಕಾರ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನಿವೃತ್ತ ಪ್ರಾಂಶುಪಾಲ ಪ್ರೊ.ಬಿ.ಎಸ್.ಚಂದ್ರಶೇಖರ್, ಜಿಪಂ ಮಾಜಿ ಅಧ್ಯಕ್ಷ ಸುರೇಶ್‍ಕಂಠಿ,  ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ, ನಗರಸಭಾ ಸದಸ್ಯರಾದ ಶಿವಪ್ರಕಾಶ್, ಎಂ.ಎನ್.ಶ್ರೀಧರ್, ಮಾಜಿ ಸದಸ್ಯರಾದ ಮಹೇಶ್‍ಕೃಷ್ಣ, ರುದ್ರಪ್ಪ, ಬಿ.ಪಿ.ಪ್ರಕಾಶ್, ದಸಂಸ, ವಿವಿಧ ಸಂಘಟನೆ, ಪಕ್ಷಗಳ ಮುಖಂಡರಾದ ಎಂ.ಬಿ.ಶ್ರೀನಿವಾಸ್, ಎಂ.ಬಿ.ನಾಗಣ್ಣಗೌಡ, ಸುಂಡಹಳ್ಳಿ ನಾಗರಾಜ್, ಡಾ.ರವೀಂದ್ರ, ಎಲ್.ಸಂದೇಶ್, ಗುರುಸಿದ್ದಯ್ಯ, ಸುಂಡಹಳ್ಳಿ ಮಂಜುನಾಥ್, ಜೆ.ರಾಮಯ್ಯ, ರಮಾನಂದ, ಸಿ.ಎಂ.ದ್ಯಾವಪ್ಪ, ಎಂ.ವಿ.ಕೃಷ್ಣ, ಎಸ್.ಡಿ.ಜಯರಾಂ, ಅನ್ನದಾನಿ ಸೋಮನಹಳ್ಳಿ, ಸಿದ್ದಲಿಂಗಯ್ಯ, ಮಹೇಶ್, ವಜ್ರಮುನಿ, ಶಿವಶಂಕರ್, ಅಮ್ಜದ್ ಪಾಷ, ಇತರರು ಪಾಲ್ಗೊಂಡಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News