ಟೆಲಿಕಾಂ ಕಂಪೆನಿಗಳಿಗೆ ಕೇಂದ್ರದ ಆಕ್ಸಿಜನ್!

Update: 2019-11-21 11:07 GMT

ಹೊಸದಿಲ್ಲಿ, ನ.21: ತೀವ್ರ ಸಂಕಷ್ಟದಲ್ಲಿ ಸಿಲುಕಿರುವ ದೂರಸಂಪರ್ಕ ಉದ್ಯಮಕ್ಕೆ ಕೇಂದ್ರ ಸರ್ಕಾರ ದೊಡ್ಡ ಕೊಡುಗೆ ಘೋಷಿಸಿದೆ. ದೂರಸಂಪರ್ಕ ಸೇವಾ ಸಂಸ್ಥೆಗಳು ಸರ್ಕಾರಕ್ಕೆ ನೀಡಬೇಕಾಗಿರುವ ತರಂಗಗುಚ್ಛದ ಬಾಕಿ ಮೊತ್ತವಾದ 42 ಸಾವಿರ ಕೋಟಿ ರೂಪಾಯಿಗಳ ಪಾವತಿಗೆ ಎರಡು ವರ್ಷಗಳ ಕಾಲಾವಕಾಶ ನೀಡಿದೆ.

ಆದರೆ ಅಕ್ಟೋಬರ್ 24ರ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಉದ್ಭವಿಸಿದ 1.47 ಲಕ್ಷ ಕೋಟಿ ರೂಪಾಯಿಗಳ ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ (ಅಡ್ಜೆಸ್ಟೆಡ್ ಗ್ರಾಸ್ ರೆವೆನ್ಯೂ) ವಿಚಾರದಲ್ಲಿ ಯಾವುದೇ ರಿಯಾಯ್ತಿ ನೀಡಿಲ್ಲ. ಈ ವಿಚಾರದಲ್ಲಿ ಯಾವುದೇ ಪರಿಹಾರ ನೀಡುವುದಾದಲ್ಲಿ ಸುಪ್ರೀಂಕೋರ್ಟ್ ಮಾತ್ರ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ದೂರಸಂಪರ್ಕ ಕಂಪೆನಿಗಳು ಈಗಾಗಲೇ ಸುಪ್ರೀಂ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆ ಆರಂಭಿಸಿದ್ದು, ವಿನಾಯ್ತಿ ನೀಡುವುದು ಅಗತ್ಯ ಎಂದು ಸುಪ್ರೀಂಕೋರ್ಟ್‌ಗೆ ಮನವರಿಕೆಯಾದಲ್ಲಿ ನೆರವು ದೊರಕುವ ಸಾಧ್ಯತೆ ಇದೆ.

ತರಂಗಗುಚ್ಛ ಹಂಚಿಕೆ ಶುಲ್ಕ ಪಾವತಿಗೆ ಎರಡು ವರ್ಷಗಳ ಕಾಲಾವಕಾಶ ನೀಡಿರುವುದರಿಂದ ಏರ್‌ಟೆಲ್ ಕಂಪೆನಿಗೆ 11,746 ಕೋಟಿ ರೂಪಾಯಿ, ವೊಡಾಫೋನ್ ಐಡಿಯಾಗೆ 23,920 ಕೋಟಿ ಹಾಗೂ ರಿಲಯನ್ಸ್ ಜಿಯೊಗೆ 6,670 ಕೋಟಿ ರೂಪಾಯಿ ಪಾವತಿಗೆ ಕಾಲಾವಕಾಶ ದೊರಕಿದೆ. ದೂರಸಂಪರ್ಕ ಸೇವಾ ಸಂಸ್ಥೆಗಳ ಆರ್ಥಿಕ ಒತ್ತಡದಲ್ಲಿ ಸಿಕ್ಕಿಹಾಕಿಕೊಂಡಿರುವ ಕಾರಣದಿಂದ ಈ ಸೌಲಭ್ಯ ನೀಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ತೀವ್ರ ನಷ್ಟ ಅನುಭವಿಸಿರುತ್ತಿರುವ ಟೆಲಿಕಾಂ ಕಂಪೆನಿಗಳು ಕೇಂದ್ರದ ನಿರ್ಧಾರದಿಂದಾಗಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ. ಕಳೆದ ತ್ರೈಮಾಸಿಕದಲ್ಲಿ ವೊಡಾಫೋನ್ ಐಡಿಯಾ 51 ಸಾವಿರ ಕೋಟಿ ರೂಪಾಯಿ ಹಾಗೂ ಏರ್‌ಟೆಲ್ 23 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News