ನನ್ನ ಅಧಿಕಾರವಧಿಯಲ್ಲಿ 150 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್

Update: 2019-11-21 18:40 GMT

ಚಿಕ್ಕಮಗಳೂರು, ನ.21: ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷದ ಹಿರಿಯರು ನಂಬಿಕೆಯಿಂದ ನೀಡಿರುವ ರಾಜ್ಯಾಧ್ಯಕ್ಷ ಹುದ್ದೆಯನ್ನು ಭಯ ಮತ್ತು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ. ಹುದ್ದೆಯ ಘನತೆಗೆ ಚ್ಯುತಿ ಬಾರದಂತೆ ಕಾರ್ಯಕರ್ತರ ನಿರೀಕ್ಷೆಗಳು ಹುಸಿಯಾಗದಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ಪಕ್ಷದ ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ

ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನಗರದಲ್ಲಿ ಬುಧವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಿಜೆಪಿಯ ವಿಚಾರಧಾರೆಗೆ ವಿರುದ್ಧವಾಗಿ ಯಾವುದೇ ರಾಜೀ ಮಾಡಿಕೊಳ್ಳದೇ ಪಕ್ಷ ಸಂಘಟನೆಗೆ ಶ್ರಮಿಸಲು ತಾನು ಸದಾ ಸಿದ್ಧವಾಗಿದ್ದೇನೆ. ಪಕ್ಷದ ಹಿರಿಯರ ಶ್ರಮದ ಫಲವಾಗಿ ಬಿಜೆಪಿ ಪ್ರಪಂಚದ ಅತೀ ದೊಡ್ಡ ಪಕ್ಷವಾಗಿ ಬೆಳೆದು ನಿಂತಿದೆ. ವಿಚಾರಧಾರೆ, ಕಾರ್ಯಬದ್ಧತೆ ಹಾಗೂ ಪರಿಶ್ರಮದ ತಳಹದಿಯಲ್ಲಿ ಪಕ್ಷವನ್ನು ಇನ್ನಷ್ಟು ಸದೃಢವಾಗಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದರು.

ಬಿಜೆಪಿಯ ಹಿರಿಯರು ಕೊಟ್ಟ ಮಾತಿನಂತೆ  ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ್ದಾರೆ ಎಂದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಇದೇ ವೇಳೆ ಕಟೀಲ್ ಹೇಳಿದರು.

ಆಂತರಿಕ ಪ್ರಜಾಪ್ರಭುತ್ವ ಅನುಷ್ಠಾನಗೊಂಡಿದ್ದರೆ ಅದು ಬಿಜೆಪಿಯಲ್ಲಿ ಮಾತ್ರ. ಅದರಂತೆ ಪಕ್ಷ ಪ್ರತಿಯೊಬ್ಬ ಕಾರ್ಯಕರ್ತನಿಗೂ ಅರ್ಹತೆಯನ್ನು ಒದಗಿಸಿದೆ. ಕಾಂಗ್ರೆಸ್‍ನಲ್ಲಿ ವಂಶಪಾರ್ಯವಾಗಿ ಅಧಿಕಾರ ಹಂಚಿಕೆ ಇಂದಿಗೂ ಚಾಲ್ತಿಯಲ್ಲಿದೆ ಎಂದು ದೂರಿದ ಅವರು, ನನ್ನ ರಾಜ್ಯಾಧ್ಯಕ್ಷ ಅಧಿಕಾರಾವಧಿಯಲ್ಲಿ 150 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಿಸುವ ಮೂಲಕ ಸದೃಢ ಸರಕಾರ ರಚನೆಗೆ ಶ್ರಮಿಸುವುದಾಗಿ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಭಾನುಪ್ರಕಾಶ್ ಮಾತನಾಡಿ, ಪಕ್ಷ ಸಂಘಟನೆಗಾಗಿ ಪಕ್ಷದ ಹಿರಿಯರು ರಕ್ತ ಹರಿಸಿದ ಪರಿಣಾಮವಾಗಿ ದೇಶಾದ್ಯಂತ ಪಕ್ಷ ಸದೃಢಗೊಂಡಿದೆ. ದೇಶದ ಜನ ಸರಕಾರವನ್ನು ಸ್ವಯಂ ಸ್ವೀಕರಿಸುವ ಮಟ್ಟಕ್ಕೆ ಜನ ಬದಲಾಗಿದ್ದಾರೆ. ಈ ಹಂತದಲ್ಲಿ ಪಕ್ಷದ ಜವಾಬ್ದಾರಿ ಹೆಚ್ಚಿದ್ದು, ರಾಷ್ಟ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿರುವ ಈ ಸಂದರ್ಭದಲ್ಲಿ ಗೆಲುವಿನ ಸಮಯದಲ್ಲಿ ಸಂಭ್ರಮಿಸಿ ಮೈಮರೆಯದೇ ಪಕ್ಷದ ಹಿರಿಯರ ಕನಸುಗಳನ್ನು ನನಸು ಮಾಡಲು ಶ್ರಮಿಸಬೇಕಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್.ಜೀವರಾಜ್ ಮಾತನಾಡಿ, ಜಿಲ್ಲೆಯ ಪ್ರಮುಖ ಮುಖಂಡರಿಗೆ ರಾಜಕಾರಣದ ಹಿನ್ನೆಲೆ ಇಲ್ಲದಿದ್ದರೂ ಸ್ವಯಾರ್ಜಿತವಾಗಿ ಹೋರಾಟದ ಮೂಲಕ ರಾಜಕಾರಣದ ಮುಂಚೂಣಿಗೆ ಬಂದವರು, ಆಂತರಿಕ ಪ್ರಜಾಪ್ರಭುತ್ವ ಚಾಲ್ತಿಯಲ್ಲಿರುವುದು ಬಿಜೆಪಿಯಲ್ಲಿ ಮಾತ್ರ ಎಂದು ಹೇಳಿದರು.

ನೂತನ ರಾಜ್ಯಾಧ್ಯಕ್ಷರನ್ನು ಅಭಿನಂದಿಸಿದ ಬಳಿಕ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ, ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವ ಉದ್ದೇಶದಿಂದ ಬೇರು ಮಟ್ಟದ ನಾಯಕತ್ವವನ್ನು ಮನಗಂಡು ಪಕ್ಷದ ಹಿರಿಯರು ನಳಿನ್‍ ಕುಮಾರ್ ಕಟೀಲ್‍ರವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಪ್ರಜಾಪ್ರಭುತ್ವದ ಆಶಯವಿರುವುದೇ ವಂಶಪಾರಂಪರ್ಯದ ಅಧಿಕಾರದಲ್ಲಿ ಎಂದು ನಂಬಿಕೊಂಡಿರುವ ಕೆಲವು ಪಕ್ಷಗಳು ಬಹುಪರಾಕ್ ಹೇಳುವ ಜನಕ್ಕೆ ಆದ್ಯತೆ ನೀಡುತ್ತದೆ. ಆದರೆ ಬಿಜೆಪಿಯಲ್ಲಿ ಬಹುಪರಾಕ್ ಹೇಳುವವರಿಗೆ ಆದ್ಯತೆ ಇಲ್ಲ, ಇಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಮನ್ನಣೆ ಇದೆ ಎಂದು ಹೇಳಿದರು.

ಗಾಂಧೀಜಿಯವರ ಆಶಯದಂತೆ ರಾಜಕಾರಣವೆಂದರೆ ಸೇವೆಯ ಮಾಧ್ಯಮ, ಅವರು ಅಸ್ಪ್ರಶ್ಯತೆಯ ನಿವಾರಣೆ, ಶಾಲಾ ಆಸ್ಪತ್ರೆಗಳನ್ನು ಕಟ್ಟುವ ಮೂಲಕ ಸೇವೆಗೆ ಪ್ರೇರಣೆ ನೀಡಿದ್ದಾರೆ. ಆದರೆ ಗಾಂಧಿಯ ವಾರಸುದಾರರು ಎಂದು ಹೇಳಿಕೊಳ್ಳುವವರು ರಾಜಕಾರಣವನ್ನು ಭ್ರಷ್ಟಚಾರದ ಕೂಪವನ್ನಾಗಿಸಿದ್ದಾರೆ. ಬಿಜೆಪಿಯ ಕಾರ್ಯಕರ್ತರು ಮತ್ತೆ ಗಾಂಧಿಯ ಆಶಯದಂತೆ ರಾಜಕಾರಣವನ್ನು ಸೇವೆಯನ್ನಾಗಿಸುವಲ್ಲಿ ಆದ್ಯತೆಯನ್ನಾಗಿಸಲು ಶ್ರಮಿಸಬೇಕಿದೆ ಎಂದು ಹೇಳಿದರು.

ಇದೇ ವೇದಿಕೆಯಲ್ಲಿ ನೂತನವಾಗಿ ಆಯ್ಕೆಗೊಂಡಿರುವ 8 ಮಂಡಲದ ಅಧ್ಯಕ್ಷರು ಮತ್ತು ಬೀರೂರು ಪುರಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜಯಶೀಲರಾದ ಸದಸ್ಯರನ್ನು ಅಭಿನಂದಿಸಲಾಯಿತು. ವಿಧಾನಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್, ಬಿಜೆಪಿ ಪ್ರಭಾರ ಗಿರೀಶ್‍ಪಟೇಲ್, ಜಿ.ಪಂ. ಅಧ್ಯಕ್ಷೆ ಸುಜಾತಕೃಷ್ಣಪ್ಪ, ಶಾಸಕರಾದ ಎಂ.ಪಿ ಕುಮಾರಸ್ವಾಮಿ, ಡಿ.ಕೆ ಸುರೇಶ್, ಬೆಳ್ಳಿಪ್ರಕಾಶ್, ಜಿ.ಪಂ. ಉಪಾಧ್ಯಕ್ಷ ವಿಜಯಕುಮಾರ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News