ಯುವಜನರ ಆರ್ಥಿಕ ಅಭದ್ರತೆಯು ಭಾರತದ ರಾಜಕೀಯವನ್ನು ರೂಪಿಸಲಿದೆ: ವರದಿ

Update: 2019-11-22 15:35 GMT

ಹೊಸದಿಲ್ಲಿ, ನ.22: ಆರ್ಥಿಕ ಮಂದಗತಿ ಮತ್ತು ನಿರುದ್ಯೋಗ ಸಮಸ್ಯೆಗಳ ನಡುವೆಯೇ ಇಕನಾಮಿಸ್ಟ್ ಇಂಟಲಿಜೆನ್ಸ್ ಯುನಿಟ್ (ಇಐಎಚ್),ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸದೃಢ ನಾಯಕತ್ವ ಮತ್ತು ಸಾಮಾಜಿಕ ಹಾಗೂ ಭದ್ರತಾ ವಿಷಯಗಳಿಗೆ ಒತ್ತು ನೀಡುವ ಪ್ರಣಾಳಿಕೆಯೊಂದಿಗೆ ಬಿಜೆಪಿ ಅಧಿಕಾರಕ್ಕೆ ಮರಳಿದೆಯಾದರೂ ಭಾರತದ ರಾಜಕೀಯವು ಹೆಚ್ಚಾಗಿ ಅದರ ಅಗಾಧ ಸಂಖ್ಯೆಯ ಯುವಜನತೆಯ ಆಥಿಕ ಅಭದ್ರತೆಯಿಂದ ರೂಪುಗೊಳ್ಳಲಿದೆ ಎಂದು ಶುಕ್ರವಾರ ತನ್ನ ಸಂಶೋಧನಾ ವರದಿಯಲ್ಲಿ ತಿಳಿಸಿದೆ.

ನಿರುದ್ಯೋಗ ಮತ್ತು ಅರ್ಹತೆಗಳಿಗೆ ಸೂಕ್ತ ಹುದ್ದೆಗಳ ಕೊರತೆ ಭಾರತದ ರಾಜಕೀಯದಲ್ಲಿ ಅನಿವಾರ್ಯ ಅಧ್ಯಾಯವಾಗಿದೆ ಮತ್ತು ಮಂದಗತಿಯ ಆರ್ಥಿಕ ಬೆಳವಣಿಗೆಯು ನೇಮಕಾತಿಗಳ ಪ್ರಮಾಣ ಕುಸಿಯಲು ಕಾರಣವಾಗಿದೆ.

 2019,ಸೆಪ್ಟಂಬರ್‌ನಲ್ಲಿ ಶೇ.7.2ರಷ್ಟಿದ್ದ ನಿರುದ್ಯೋಗ ದರವು ಅಕ್ಟೋಬರ್‌ನಲ್ಲಿ ಮೂರು ವರ್ಷಗಳ ಗರಿಷ್ಠ ಮಟ್ಟವಾದ ಶೇ.8.5ಕ್ಕೇರಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ ಡಾಟಾವನ್ನು ಉಲ್ಲೇಖಿಸಿ ಹೇಳಿರುವ ಇಐಯು,ಮುಂದಿನ ಕೆಲವು ದಶಕಗಳಲ್ಲಿ ಜನಸಂಖ್ಯಾ ಲಾಭಾಂಶದ ಪ್ರಯೋಜನ ದೇಶಕ್ಕೆ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆಯಾದರೂ ಉದ್ಯೋಗ ಸೃಷ್ಟಿಯ ದರವು ಕಾರ್ಮಿಕ ವೃಂದದ ಬೆಳವಣಿಗೆಯ ದರಕ್ಕಿಂತ ಹಿಂದುಳಿದಿದೆ ಎಂದಿದೆ.

ಭಾರತವು ತನ್ನ ಉದ್ಯೋಗ ದರವನ್ನು ಕಾಯ್ದುಕೊಳ್ಳಲು ವಾರ್ಷಿಕ 81 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವಿದೆ ಎಂದು ವಿಶ್ವಬ್ಯಾಂಕ್ 2018ರಲ್ಲಿ ಅಂದಾಜಿಸಿತ್ತು.

ಉದ್ಯೋಗ ಸೃಷ್ಟಿ ಸಮಸ್ಯೆಯ ಅಗಾಧತೆಯನ್ನು ಪರಿಗಣಿಸಿದರೆ ಸರಕಾರದ ಅಲ್ಪಾವಧಿಯ ಉತ್ತೇಜಕ ಕ್ರಮಗಳು ಯಾವುದಕ್ಕೂ ಸಾಲದು ಮತ್ತು ಈ ಸಮಸ್ಯೆಯನ್ನು ಬಗೆಹರಿಸಲು ರಚನಾತ್ಮಕ ಸುಧಾರಣೆಗಳು ಅಗತ್ಯವಾಗಿವೆ ಎಂದು ಇಐಯು ವರದಿಯಲ್ಲಿ ಹೇಳಿದೆ.

ಹಿಂದು ರಾಷ್ಟ್ರವಾದದ ಅಜೆಂಡಾದಲ್ಲಿಯ ಹೆಚ್ಚಿನ ಭರವಸೆಗಳನ್ನು ಈಡೇರಿಸಿರುವ ಮೋದಿ ಅವರಿಗೆ ಈಗ ಆರ್ಥಿಕ ಕ್ಷೇತ್ರದಲ್ಲಿ ಬೆಳವಣಿಗೆಯ ಕೊರತೆಯಿಂದಾಗಿ ಮತದಾರರಲ್ಲಿ ನಿರಾಶೆ ಹೆಚ್ಚುತ್ತಿರುವುದರಿಂದ ತನ್ನ ಜನಪ್ರಿಯತೆಯನ್ನು ಉಳಿಸಿಕೊಳ್ಳುವ ಸವಾಲು ಎದುರಾಗುವ ಸಾಧ್ಯತೆಯಿದೆ ಎಂದಿದೆ.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂದೆಗೆತ ಮತ್ತು ಅಯೋಧ್ಯೆಯ ವಿವಾದಿತ ನಿವೇಶನದಲ್ಲಿ ಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿರುವ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪನ್ನು ವರದಿಯು ಉಲ್ಲೇಖಿಸಿದೆ.

 2021ರ ವೇಳೆಗೆ ಬಿಜೆಪಿಯು ರಾಜ್ಯಸಭೆಯಲ್ಲಿ ಸರಳ ಬಹುಮತವನ್ನು ಹೊಂದುವ ನಿರೀಕ್ಷೆಯಿದ್ದು,ಇದು ಕಾರ್ಮಿಕ ಮಾರುಕಟ್ಟೆಯನ್ನು ಪುನಃಶ್ಚೇತನಗೊಳಿಸಲು ಇನ್ನಷ್ಟು ವಿವಾದಾತ್ಮಕ ಮಸೂದೆಗಳನ್ನು ಅಂಗೀಕರಿಸಲು ಸರಕಾರಕ್ಕೆ ಹೆಚ್ಚಿನ ಅವಕಾಶವನ್ನೊದಗಿಸಲಿದೆ ಎಂದೂ ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News