ಕೊಡಗು ವಿದ್ಯಾಲಯ ಹಾಕಿ ತಂಡಕ್ಕೆ ರಾಷ್ಟ್ರೀಯ ಪ್ರಶಸ್ತಿ: ಮಡಿಕೇರಿಯಲ್ಲಿ ವಿದ್ಯಾರ್ಥಿಗಳ ವಿಜಯೋತ್ಸವ

Update: 2019-11-22 18:39 GMT

ಮಡಿಕೇರಿ, ನ.22: ಕರ್ನಾಟಕದ ಸಿಬಿಎಸ್ ಸಿ ಶಾಲೆಗಳ 25 ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದಕ್ಷಿಣ ಭಾರತದ ಸಿಬಿಎಸ್ ಸಿ ಶಾಲೆಗೆ ಪ್ರಶಸ್ತಿ ದೊರಕಿದೆ. ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಹಾಕಿ ತಂಡವು ರಾಷ್ಟ್ರೀಯ ಹಾಕಿ ಪಂದ್ಯಾಟದಲ್ಲಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದ ಈ ಸಂತಸವನ್ನು ಕ್ರೀಡಾಪಟುಗಳು ನಗರದಲ್ಲಿ ಸಂಭ್ರಮದಿಂದ ವಿಜಯೋತ್ಸವದ ಮೆರವಣಿಗೆ ಮೂಲಕ ಆಚರಿಸಿಕೊಂಡರು.

ನಗರದ ಮುಖ್ಯ ರಸ್ತೆಯಲ್ಲಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಹಾಕಿ ಆಟಗಾರರು ಶಾಲಾ ವಾದ್ಯತಂಡದ ಮುಂಚೂಣಿಯಲ್ಲಿ ಅಲಂಕೃತ ತೆರೆದ ವಾಹನದಲ್ಲಿ ಹರ್ಷೋದ್ಘಾರಗಳೊಂದಿಗೆ ಮೆರವಣಿಗೆ ಸಾಗಿದರು. ಮಡಿಕೇರಿಯ ಜನತೆ ಕೂಡ ಕೊಡಗಿಗೆ ಹಿರಿಮೆ ತಂದ ಶಾಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಹಾಕಿ ತಂಡವು ವಾರಣಾಸಿಯಲ್ಲಿ ಜರುಗಿದ 17 ವರ್ಷ ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ 25 ನೇ ಸಿಬಿಎಸ್ ಸಿ ರಾಷ್ಟ್ರೀಯ ಹಾಕಿ ಪಂದ್ಯಾಟದಲ್ಲಿ ಪ್ರಥಮ ಬಹುಮನವಾಗಿ ಚಿನ್ನದ ಟ್ರೋಫಿ ಮತ್ತು ಬಾಲಕಿಯರ ತಂಡವು  ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಟ್ರೋಫಿ ಪಡೆದುಕೊಂಡಿತ್ತು. ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಸಿಬಿಎಸ್ ಸಿ ಶಾಲೆಯೊಂದು ಬಾಲಕರ ವಿಭಾಗದಲ್ಲಿ ಚಿನ್ನದ ಟ್ರೋಫಿಯ ಪ್ರಥಮ ಬಹುಮಾನ ಪಡೆದಿದ್ದು ಎರಡನೇ ಬಾರಿಗೆ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದಿದ್ದು ದಾಖಲೆಯಾಗಿದೆ. ಬಾಲಕರ ವಿಭಾಗದಲ್ಲಿ ತಂಡದ ನಾಯಕ ಸಿ.ಪಿ. ಲಿವಿನ್ ಉತ್ತಮ ಫುಲ್ ಬ್ಯಾಕ್ ಆಟಗಾರ ಹಾಗೂ ಬಾಲಕಿಯರ ವಿಭಾಗದಲ್ಲಿ ತಂಡದ ನಾಯಕಿ ತೇಜಸ್ವಿ ದೇವಯ್ಯ ಉತ್ತಮ ಹಾಫ್ ಆಟಗಾರ್ತಿ ಪ್ರಶಸ್ತಿ ಪಡೆದಿದ್ದರು.   

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೆ.ಪಿ.ಉತ್ತಪ್ಪ ವಿಜೇತ ವಿದ್ಯಾರ್ಥಿ ತಂಡವನ್ನು ಅಭಿನಂದಿಸಿದರು. ಕೊಡಗಿಗೇ ಈ ಯುವ ಹಾಕಿ ಪಟುಗಳು ಕೀರ್ತಿ ತಂದಿದ್ದು ಶ್ಲಾಘನೀಯ ಎಂದೂ ಅವರು ಹೇಳಿದರು.

ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಎಸ್.ದೇವಯ್ಯ ಮಾತನಾಡಿದರು. ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಆಡಳಿತ ಮಂಡಳಿಯ ಕ್ರೀಡಾ ಸಮಿತಿ ಅಧ್ಯಕ್ಷ ರಘುಮಾದಪ್ಪ, ಭಾರತೀಯ ವಿದ್ಯಾಭವನ ಕೊಡಗು ಘಟಕದ ಕಾರ್ಯದರ್ಶಿ ಬಾಲಾಜಿಕಶ್ಯಪ್, ಶಾಲೆಯ ಮುಖ್ಯ ಆಡಳಿತಾಧಿಕಾರಿ ವಿದ್ಯಾಹರೀಶ್, ಉಪಪ್ರಾಂಶುಪಾಲೆ ವನಿತಾ, ವ್ಯವಸ್ಥಾಪಕ ರವಿ, ಟ್ರಾವಲ್  ಕೂರ್ಗ್ ಮಾಲಕ ಚೆಯ್ಯಂಡ ಸತ್ಯ ಹಾಜರಿದ್ದರು.

ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಜಯಗಳಿಸಿದ ಬಾಲಕರ ಹಾಕಿ ತಂಡದ ನಾಯಕ ಲೆವಿನ್ ಮತ್ತು ಬಾಲಕಿಯರ ತಂಡದ ನಾಯಕಿ ತೇಜಸ್ವಿ ಅವರನ್ನು ಗೌರವಿಸಲಾಯಿತು. ಹಾಗೆಯೇ ಬಾಲಕ, ಬಾಲಕಿಯರ ತಂಡದ ಆಟಗಾರರು, ತಂಡದ ಕೋಚ್ ಅವರಿಗೂ ಗೌರವ ಸನ್ಮಾನ ನೆರವೇರಿತು. ತಂಡದ ತರಬೇತುದಾರ ಎಚ್.ಈ.ದಿನೇಶ್, ಸ್ವಪ್ನ, ತಂಡದ ವ್ಯವಸ್ಥಾಪಕ ಲೋಹಿತ್ ಚಂಗಪ್ಪ, ಶಾಲಾ ಕ್ರೀಡಾ ತಂಡದ ಮುಖ್ಯಸ್ಥ  ಮೇಜರ್ ದಾಮೋದರ್,  ದೈಹಿಕ ತರಬೇತುದಾರರಾದ ವಿನಯ್, ಫಲ್ಗುಣ್ , ರೇಷ್ಮಾ ದೇವಯ್ಯ ಅವರನ್ನೂ ಶಾಲಾ ಆಡಳಿತ ಮಂಡಳಿಯು ಸನ್ಮಾನಿಸಿ ಗೌರವಿಸಿತು. ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿ ಪೋಷಕರು ಹಾಜರಿದ್ದು ಸಾಧಕ ಹಾಕಿ ಪಟುಗಳನ್ನು ಅಭಿನಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News