ಬಸ್‌ಗೆ ಟ್ಯಾಂಕರ್ ಢಿಕ್ಕಿ: 40ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯ

Update: 2019-11-27 07:00 GMT

ವಿಜಯಪುರ, ನ.27: ಕೆಎಸ್ಸಾರ್ಟಿಸಿ ಬಸ್ ಮತ್ತು ಡೀಸೆಲ್ ಟ್ಯಾಂಕರ್ ನಡುವೆ ಸಂಭವಿಸಿದ ಅಪಘಾತದಲ್ಲಿ 40ಕ್ಕೂ ಅಧಿಕ ಕಾಲೇಜು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಸಿಂದಗಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50ರ ಯಂಕಂಚಿ ಬೈಪಾಸ್ ಬಳಿ ಬುಧವಾರ ನಡೆದಿದೆ.

 ಗಾಯಾಳುಗಳ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ. ಓರ್ವ ವಿದ್ಯಾರ್ಥಿನಿ ಶ್ರೀದೇವಿ ಬಿರಾದಾರ(21) ಬಲಗೈ ತುಂಡಾಗಿದೆ. ಜೇವರ್ಗಿ ಘಟಕದ ಬಸ್ ಯಡ್ರಾಮಿ, ನಾಗರಳ್ಳಿ, ಗೋಲಗೇರಿ, ಯಂಕಂಚಿ ಮೂಲಕ ಸಿಂಧಗಿಯತ್ತ ಬರುತ್ತಿತ್ತು. ಈ ವೇಳೆ ಕಲಬುರ್ಗಿಯತ್ತ ಹೊರಟಿದ್ದ ಟ್ಯಾಂಕರ್ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ.

ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಗಳಲ್ಲಿ ಬಹುತೇಕರು ಪದವಿ ಪರೀಕ್ಷೆಗೆ ಹೊರಟವರಾಗಿದ್ದರು. ಗಾಯಾಳುಗಳನ್ನು ಸಿಂಧಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಜಿಲ್ಲಾ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳು ವಿದ್ಯಾರ್ಥಿಗಳನ್ನು ಖಾಸಗಿ ಶಾಲಾ ವಾಹನ ಚಾಲಕರು, ಅಗ್ನಿಶಾಮಕ ಸಿಬ್ಬಂದಿ ತುರ್ತು ಸೇವೆ ಒದಗಿಸಿ ಮಾನವೀಯತೆ ಮೆರೆದರು.

ಘಟನಾ ಸ್ಥಳಕ್ಕೆ ಸಿಪಿಐ ಸತೀಶಕುಮಾರ ಕಾಂಬಳೆ, ಠಾಣಾಧಿಕಾರಿ ಎಸ್.ಎಚ್. ದೊಡ್ಡ ಮನಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News