ಈರುಳ್ಳಿ ಹಾರ ಹಾಕಿಕೊಂಡು ವಿಧಾನಸಭೆಗೆ ಬಂದ ಶಾಸಕ!

Update: 2019-11-27 10:58 GMT

ಪಾಟ್ನಾ: ಬಿಹಾರದಲ್ಲಿ ವಿಪಕ್ಷ ಆರ್ ಜೆ ಡಿಯ ಶಾಸಕರೊಬ್ಬರು ಬುಧವಾರ ವಿಧಾನಸಭೆಗೆ ಈರುಳ್ಳಿಗಳ ಹಾರವೊಂದನ್ನು ಧರಿಸಿ ಬಂದು ಎಲ್ಲರ ಗಮನವನ್ನೂ ಏರುತ್ತಿರುವ ಈರುಳ್ಳಿ ಬೆಲೆಗಳತ್ತ ಸೆಳೆಯುವ ಯತ್ನ ನಡೆಸಿದ್ದಾರೆ.

ರಾಜ ಪಕರ್ ಕ್ಷೇತ್ರದ ಶಾಸಕ ಶಿವ ಚಂದ್ರ ರಾಮ್ ಅವರೇ ಜನಸಾಮಾನ್ಯರು ಈರುಳ್ಳಿ ಬೆಲೆಯೇರಿಕೆಯಿಂದ ಸಮಸ್ಯೆ ಎದುರಿಸುತ್ತಿರುವುದನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುವ ಉದ್ದೇಶದಿಂದ ಈರುಳ್ಳಿ ಹಾರವನ್ನು ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ.

"ಕೆಜಿಗೆ ರೂ. 50ಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯವಾಗುತ್ತಿದ್ದ ಈರುಳ್ಳಿ ಬೆಲೆ ಈಗ ರೂ. 80ರಷ್ಟಿದೆ. ನಾನು ಒಂದು ಕೆಜಿ ಈರುಳ್ಳಿಯನ್ನು ರೂ. 100 ತೆತ್ತು ಖರೀದಿಸಿದೆ,'' ಎಂದು ಅವರು ಹೇಳಿಕೊಂಡರು.

ಕೆಜಿಗೆ ರೂ. 35ಕ್ಕಿಂತಲೂ ಕಡಿಮೆ ಬೆಲೆಗೆ ಈರುಳ್ಳಿ ಲಭ್ಯವಾಗುವ ಸ್ಟಾಲುಗಳನ್ನು ಹಾಕುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಟೊಳ್ಳು ಭರವಸೆ ನೀಡಿದ್ದಾರೆಂದೂ ಅವರು ಆರೋಪಿಸಿದರು.

"ಈರುಳ್ಳಿ ಹಾರ ಹಾಕಿದ ನನ್ನನ್ನು ನೋಡಿಯಾದರೂ ಮುಖ್ಯಮಂತ್ರಿ ಜನಸಾಮಾನ್ಯರಿಗೆ ತೊಮದರೆಯಾಗದಂತೆ ಕ್ರಮ ಕೈಗೊಳ್ಳುವರೆಂದು ನಿರೀಕ್ಷಿಸುತ್ತೇನೆ. ಬಡವರಿಗೆ ಕೆಜಿಗೆ ರೂ. 10ಕ್ಕೆ ಈರುಳ್ಳಿ ದೊರೆಯುವಂತೆ ಮಾಡಬೇಕು,'' ಎಂದು ಅವರು ಹೇಳಿದರು.

ಆದರೆ ಈ ಶಾಸಕರಿಗೆ ವಿಧಾನಸಭೆಯಲ್ಲಿ ಈರುಳ್ಳಿ ವಿಚಾರ ಪ್ರಸ್ತಾಪಿಸಲು ಸಾಧ್ಯವಾಯಿತೇ ಎಂಬುದು ತಿಳಿದಿಲ್ಲ. ಪೂರ್ವಾಹ್ನದ ಅಧಿವೇಶನಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಜರಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News