ಅಂಬೇಡ್ಕರ್ ಬದುಕಿದ್ದಿದ್ದರೆ ಜೈಲಲ್ಲಿರುತ್ತಿದ್ದರು!

Update: 2019-11-28 05:14 GMT

‘‘ಸಂವಿಧಾನ ಅದೆಷ್ಟೇ ಸಮರ್ಥವಾಗಿದ್ದರೂ, ಕೆಟ್ಟ ಆಡಳಿತಗಾರನ ಕೈಯಲ್ಲಿ ಅದು ದುರ್ಬಲವಾಗುತ್ತದೆ. ಸಮರ್ಥ ಆಡಳಿತಗಾರನ ಕೈಯಲ್ಲಿ ದುರ್ಬಲ ಸಂವಿಧಾನವೂ ಯಶಸ್ವೀ ಸಂವಿಧಾನವಾಗುತ್ತದೆ’’ ಇದು ಸಂವಿಧಾನದ ಭವಿಷ್ಯದ ಕುರಿತಂತೆ ಅಂಬೇಡ್ಕರ್ ಹೇಳಿದ ಮಾತು. ಸಂವಿಧಾನ ನೇರವಾಗಿ ಆಡಳಿತ ನಡೆಸುವುದಿಲ್ಲ. ಅಂತಿಮವಾಗಿ ಸರಕಾರದ ಮೂಲಕವೇ ಸಂವಿಧಾನದ ಆಶಯಗಳು ಜಾರಿಗೆ ಬರುತ್ತವೆ. ಆದುದರಿಂದ, ನಾವು ಎಂತಹ ಶಕ್ತಿಯನ್ನು ಅಧಿಕಾರಕ್ಕೆ ತಂದಿದ್ದೇವೆ ಎನ್ನುವುದರ ಆಧಾರದಲ್ಲೇ ಸಂವಿಧಾನದ ಯಶಸ್ಸಿದೆ. ಸಂವಿಧಾನದ ಆಶಯಗಳನ್ನು ತಲೆ ತಲಾಂತರಗಳಿಂದ ವಿರೋಧಿಸುತ್ತಾ ಬಂದ ಶಕ್ತಿಗಳ ಕೈಯಲ್ಲಿ ಅಧಿಕಾರ ಕೊಟ್ಟು ಸಂವಿಧಾನ ವಿಫಲವಾಗಿದೆ ಎನ್ನುವುದರಲ್ಲಿ ಯಾವ ಅರ್ಥವೂ ಇಲ್ಲ. ಹಾಗೆಂದು ಆ ಶಕ್ತಿಗಳು ಸಂವಿಧಾನವನ್ನು ಕಸದಬುಟ್ಟಿಗೆ ಎಸೆಯುವುದಿಲ್ಲ. ಸಂವಿಧಾನ ಮತ್ತು ಅಂಬೇಡ್ಕರ್ ಹೆಸರುಗಳನ್ನು ಬಳಸಿಕೊಂಡೇ ತಮ್ಮ ಸಿದ್ಧಾಂತಗಳನ್ನು ದೇಶದ ಮೇಲೆ ಹೇರುತ್ತಾ ಹೋಗುತ್ತಾರೆ.

ವರ್ಷವಿಡೀ ಸಂವಿಧಾನದ ಉದ್ದೇಶಗಳಿಗೆ ದ್ರೋಹ ಬಗೆಯುತ್ತಾ, ‘ಸಂವಿಧಾನ ದಿನಾಚರಣೆ’ಯ ಸಂದರ್ಭದಲ್ಲಿ ಅದನ್ನು ಹಾಡಿ ಹೊಗಳುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರೂ ಸಂವಿಧಾನ ದಿನಾಚರಣೆಯಲ್ಲಿ ಭಾಗವಹಿಸಿ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಹಾಡಿ ಹೊಗಳಿದ್ದಾರೆ. ‘‘ಅಂಬೇಡ್ಕರ್ ಏನಾದರೂ ಬದುಕಿದ್ದಿದ್ದರೆ ತಮ್ಮ ಆಡಳಿತಾವಧಿಯಲ್ಲಿ ಸಂವಿಧಾನದ ಘನತೆ ಎತ್ತರವಾಗಿರುವುದನ್ನು ನೋಡಿ ತುಂಬಾ ಖುಷಿ ಪಡುತ್ತಿದ್ದರು’’ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ‘ನಮ್ಮ ಸಂವಿಧಾನವನ್ನು ಒಂದು ಪವಿತ್ರ ಗ್ರಂಥ, ಒಂದು ದಾರಿದೀಪವೆಂದು ನಾನು ಯಾವತ್ತೂ ಪರಿಗಣಿಸಿದ್ದೇನೆ’’ ಎಂದೂ ಅವರು ಹೇಳಿಕೊಂಡಿದ್ದಾರೆ. ದೇಶದ ಬೀದಿದೀಪಗಳ ಸ್ಥಿತಿಗತಿ ಗೊತ್ತಿದ್ದವರು ನರೇಂದ್ರ ಮೋದಿ ಸಂವಿಧಾನವನ್ನು ‘ದಾರಿದೀಪ’ ಎಂದು ವ್ಯಂಗ್ಯ ಮಾಡಿದರೋ ಎಂದು ಅನುಮಾನಪಡಬೇಕಾಗುತ್ತದೆ. ಈ ದೇಶದ ಬೀದಿ ದೀಪಗಳು ಹೆಸರಿಗಷ್ಟೇ ಇವೆ. ಬೀದಿದೀಪಗಳು ಬೀದಿಯನ್ನು ಬೆಳಗಿದ್ದು, ಮಧ್ಯರಾತ್ರಿಯಲ್ಲಿ ಪ್ರಯಾಣಿಕರಿಗೆ ಬೆಳಕು ತೋರಿಸಿದ್ದು ಕಡಿಮೆ. ಬೀದಿ ದೀಪದ ಹೆಸರಲ್ಲಿ ಕಂಬವೊಂದನ್ನಷ್ಟೇ ನೆಟ್ಟು, ಅದಕ್ಕೆ ಬಲ್ಬ್ ಅನ್ನು ಜೋಡಿಸದಿದ್ದಲ್ಲಿ ಇನ್ನೇನಾದೀತು? ಅಥವಾ ಒಂದು ವಾರ ಉರಿದು ಕೆಟ್ಟು ನಿಂತ ಬೀದಿದೀಪಗಳಿಗೆ ಹೊಸ ಬಲ್ಬ್‌ಗಳನ್ನು ಜೋಡಿಸದಿದ್ದರೆ ಅದು ಬೆಳಕು ನೀಡುವುದಾದರೂ ಹೇಗೆ? ಆದರೆ ಪ್ರತಿ ವಾರ ಹೊಸ ಬಲ್ಬ್‌ಗಳನ್ನು ಹಾಕಿದ ಹಣದ ಲೆಕ್ಕಗಳು ಮಾತ್ರ ಪುಸ್ತಕದಲ್ಲಿರುತ್ತವೆ. ಹೆಸರಿಗೆ ಬೀದಿ ದೀಪವೂ ಇರಬೇಕು. ಆದರೆ ಅದು ಕೆಲಸ ಮಾಡಬಾರದು ಎನ್ನುವುದು ವ್ಯವಸ್ಥೆಯ ಹೊಸ ನೀತಿ. ಸಂವಿಧಾನವನ್ನು ‘ದಾರಿ ದೀಪ’ ಎಂದು ಈ ಅರ್ಥದಲ್ಲಿ ಮೋದಿಯವರು ಬಣ್ಣಿಸಿರುವ ಸಾಧ್ಯತೆಯೇ ಅಧಿಕ.

ಇನ್ನು ನರೇಂದ್ರ ಮೋದಿಯವರು ಸಂವಿಧಾನವನ್ನು ಪವಿತ್ರಗ್ರಂಥಕ್ಕೆ ಹೋಲಿಸಿದರು. ಈ ದೇಶದಲ್ಲಿ ಪವಿತ್ರಗ್ರಂಥಗಳನ್ನು ಮುಂದಿಟ್ಟುಕೊಂಡು ಬಡವರನು,್ನ ದಲಿತರನ್ನು ಹೇಗೆಲ್ಲ ಶೋಷಿಸಲಾಗಿದೆ ಎನ್ನುವುದು ನೋಡುತ್ತಲೇ ಇದ್ದೇವೆ. ಬಹುಶಃ ಪವಿತ್ರ ಗ್ರಂಥಗಳು ಈ ದೇಶದ ತಳಸ್ತರದ ಜನರಿಗೆ ಮಾಡಿದ ಅನ್ಯಾಯಗಳನ್ನು ಸರಿಪಡಿಸುವುದಕ್ಕಾಗಿಯೇ ಸಂವಿಧಾನವನ್ನು ರಚಿಸಲಾಯಿತು. ಆದುದರಿಂದ ಸಂವಿಧಾನ ಎಂದಿಗೂ ಎತ್ತರದಲ್ಲಿಟ್ಟು ಪೂಜಿಸುವ ಪವಿತ್ರಗ್ರಂಥ ಅಲ್ಲ. ಅದು ಪ್ರಜೆಗಳ ಆಶಯಗಳನ್ನು ಎತ್ತಿ ಹಿಡಿಯುವ, ಅವರಿಗಾದ ಅನ್ಯಾಯಗಳನ್ನು ಸರಿಪಡಿಸುವ ಶ್ರೀಸಾಮಾನ್ಯರ ಗ್ರಂಥ. ಸಂವಿಧಾನದ ಆಶಯಗಳನ್ನು ಜಾರಿಗೆ ತರದೆ, ಅದನ್ನು ಹಾಡಿ, ಹೊಗಳಿ, ಪೂಜಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಅಂಬೇಡ್ಕರ್ ಬದುಕಿದ್ದಿದ್ದರೆ ಸಂತೋಷ ಪಡುವುದಕ್ಕೆ ಇಂದು ಏನು ಉಳಿದಿದೆ? ಬ್ರಿಟಿಷರು ಈ ದೇಶವನ್ನು ಬಿಟ್ಟು ಹೋಗುವ ಮೂಲಕ ರಾಜಕೀಯವಾಗಿ ಭಾರತ ಸ್ವತಂತ್ರಗೊಂಡಿತೇನೋ ನಿಜ. ಆದರೆ ದಲಿತರು, ಶೂದ್ರರು, ಮಹಿಳೆಯರು ಈ ದೇಶದಲ್ಲಿ ಬ್ರಿಟಿಷರು ಬರುವ ಮೊದಲೇ ಮೇಲ್‌ವರ್ಣೀಯರ ಗುಲಾಮರಾಗಿದ್ದರು. ಈ ನಿಟ್ಟಿನಲ್ಲಿ ಸ್ವಾತಂತ್ರದ ಪರಿಕಲ್ಪನೆ ನಿಜವಾದ ಅರ್ಥದಲ್ಲಿ ಪರಿಪೂರ್ಣವಾದುದು ಸಂವಿಧಾನ ರಚನೆಯ ಬಳಿಕ. ದಲಿತರನ್ನು ಮೇಲೆತ್ತುವಲ್ಲಿ ಸಂವಿಧಾನ ಮೀಸಲಾತಿಯನ್ನು ಜಾರಿಗೊಳಿಸಿತು. ಆದರೆ ಅದು ದಲಿತರನ್ನು ಮೇಲೆತ್ತುವಲ್ಲಿ ಭಾಗಶಃ ವಿಫಲವಾಯಿತು. ಅದನ್ನು ಸರಿಯಾಗಿ ಅನುಷ್ಠಾನಗೊಳಿಸದೇ ವಿಫಲಗೊಳಿಸಿದ ಜನರೇ ಇಂದು ಅದೇ ಮೀಸಲಾತಿಯ ವಿರುದ್ಧ ಮುಗಿ ಬಿದ್ದಿದ್ದಾರೆ. ಮೀಸಲಾತಿ ಚರ್ಚೆಯಾಗಬೇಕು ಎಂದು ಆರೆಸ್ಸೆಸ್ ಬಯಸುತ್ತಿದೆ.

ಜೊತೆಗೆ ಮೀಸಲಾತಿಯ ಉದ್ದೇಶವನ್ನೇ ವಿರೂಪಗೊಳಿಸುವಂತೆ ಮೇಲ್‌ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿಯನ್ನು ನೀಡಲಾಯಿತು. ಇಂದು ದಲಿತ ಹೋರಾಟ ಸಂಪೂರ್ಣ ನೆಲಕಚ್ಚಿದೆ. ದಲಿತರ ಪರವಾಗಿ, ಆದಿವಾಸಿಗಳ ಪರವಾಗಿ ಸಂಘಟಿತರಾಗುವವರನ್ನು ವಿವಿಧ ಆರೋಪಗಳಲ್ಲಿ ಸರಕಾರ ಜೈಲಿಗೆ ತಳ್ಳುತ್ತಿದೆ. ಬಹುಶಃ ಅಂಬೇಡ್ಕರ್ ಜೀವಂತವಾಗಿರುತ್ತಿದ್ದರೆ ಅವರು ‘ಅರ್ಬನ್ ನಕ್ಸಲ್’ ಎಂದು ಗುರುತಿಸಲ್ಪಟ್ಟು ಯಾವುದಾದರೂ ಜೈಲಿನಲ್ಲಿರುತ್ತಿದ್ದರು. ಸಂವಿಧಾನದ ಬಗ್ಗೆ ಅಸಮಾಧಾನ ಹೊಂದಿರುವ ಶಕ್ತಿಗಳ ಕೈಯಲ್ಲಿ ಸರಕಾರವಿದೆ. ಮಹಾತ್ಮಾಗಾಂಧೀಜಿಯನ್ನು ಕೊಂದ ಭಯೋತ್ಪಾದಕನನ್ನು ಸಂಸತ್‌ನಲ್ಲಿ ಇನ್ನೊಬ್ಬ ಶಂಕಿತ ಭಯೋತ್ಪಾದಕಿ ‘ದೇಶಭಕ್ತ’ ಎಂದು ಕರೆಯುತ್ತಾರೆ. ಪ್ರಜಾಸತ್ತೆ ಮತ್ತು ಜಾತ್ಯತೀತ ವ್ಯವಸ್ಥೆಯ ವಿರುದ್ಧವೇ ಅಸಮಾಧಾನವನ್ನು ಹೊಂದಿರುವ ಶಂಕಿತ ಭಯೋತ್ಪಾದಕಿಯೊಬ್ಬಳಿಗೆ ಟಿಕೆಟ್ ನೀಡಿ, ಆಕೆಯನ್ನು ಸಂಸತ್‌ನಲ್ಲಿ ಕುಳ್ಳಿರಿಸಿ, ದೇಶದ ರಕ್ಷಣಾ ಸಲಹಾ ಸಮಿತಿಯಲ್ಲಿ ಸ್ಥಾನಕೊಟ್ಟಿರುವುದನ್ನು ನೋಡಿ ಅಂಬೇಡ್ಕರ್ ಸಂತೋಷ ಪಡುತ್ತಿದ್ದರೇ? ಅಥವಾ ದುಃಖ ಪಡುತ್ತಿದ್ದರೇ? ಬಹುಮತವಿಲ್ಲದಿದ್ದರೂ, ರಾತ್ರೋ ರಾತ್ರಿ ಶಾಸಕರನ್ನು ಅಪಹರಿಸಿ ಅವರನ್ನು ಹಣದ ಮೂಲಕ ಕೊಂಡು ರಾಜೀನಾಮೆ ಕೊಡಿಸಿ ರಚಿಸುವ ಸರಕಾರ ಸಂವಿಧಾನ ಬದ್ಧ ಸರಕಾರವೇ? ಕಾಶ್ಮೀರದ ಜನರ ಎಲ್ಲ ಹಕ್ಕುಗಳನ್ನು ದಮನಿಸಿ ಸಂವಿಧಾನಬದ್ಧವಾಗಿ ಆಯ್ಕೆಯಾದ ಜನಪ್ರತಿನಿಧಿಗಳನ್ನು ರಾತ್ರೋರಾತ್ರಿ ಕಾರಣವಿಲ್ಲದೆ ಜೈಲಿಗೆ ತಳ್ಳಿ ಇಡೀ ರಾಜ್ಯವನ್ನೇ ಜೈಲಾಗಿ ಪರಿವರ್ತಿಸಿರುವ ಈ ದಿನಗಳಲ್ಲಿ ಅಂಬೇಡ್ಕರ್ ಸಂತೋಷ ಪಡುವುದಕ್ಕೆ ಯಾವ ಕಾರಣಗಳಿವೆ?

  ಎಲ್ಲ ತನಿಖಾ ಸಂಸ್ಥೆಗಳನ್ನು ತನ್ನ ಅಂಕೆಯಲ್ಲಿಟ್ಟುಕೊಂಡು ಅದನ್ನು ರಾಜಕೀಯ ವಿರೋಧಿಗಳ ಮೇಲೆ ಬಳಸುವುದು ಸಂವಿಧಾನ ಮಾರ್ಗವೇ? ಅಂತಿಮವಾಗಿ ಸುಪ್ರೀಂಕೋರ್ಟ್ ಕೂಡ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ಅದು ನೀಡುತ್ತಿರುವ ತೀರ್ಪಿನಲ್ಲಿರುವ ವಿರೋಧಾಭಾಸಗಳು ಬಹಿರಂಗವಾಗಿ ಚರ್ಚೆಗೊಳಗಾಗುತ್ತಿವೆೆ. ನ್ಯಾಯಾಲಯ, ಸಂಸತ್, ಸೇನೆ, ಪೊಲೀಸ್ ಇಲಾಖೆ ಎಲ್ಲ ವಿಭಾಗಗಳಲ್ಲೂ ಸಂವಿಧಾನ ವಿರೋಧಿ ಶಕ್ತಿಗಳು ನುಸುಳಿದ್ದಾರೆ. ದಲಿತರು ನ್ಯಾಯ ಕೇಳಿದರೆ ಅವರನ್ನು ಉಗ್ರರನ್ನಾಗಿಸಿ ಜೈಲಿಗೆ ತಳ್ಳಲಾಗುತ್ತದೆ. ರೈತರು ಅವಸಾನದ ಅಂಚಿನಲ್ಲಿರುವ ಜೀವಿಗಳಾಗಿದ್ದಾರೆ. ಅಂಬಾನಿ, ಅದಾನಿಗಳೇ ಪ್ರಜಾಸತ್ತೆಯ ಫಲಾನುಭವಿಗಳಾಗಿದ್ದಾರೆ. ಬಡವರು, ದಲಿತರು, ಅಲ್ಪಸಂಖ್ಯಾತರ ವಿದ್ಯಾದೇಗುಲವಾಗಿರುವ ಜೆಎನ್‌ಯುವನ್ನು ಮುಚ್ಚಿಸುವ ಸಂಚು ನಡೆಯುತ್ತಿದೆ. ಸಂವಿಧಾನದ ಹೆಸರಿನಲ್ಲೇ ಸಂವಿಧಾನ ವಿರೋಧಿ ನೀತಿಗಳು ಜಾರಿಯಾಗುತ್ತಿವೆ. ಅಂಬೇಡ್ಕರ್ ಬರೆದಿರುವ ಸಂವಿಧಾನದ ಹೊರಕವಚವನ್ನು ಬಳಸಿಕೊಂಡು, ಒಳಗಿಂದೊಳಗೆ ಮನುಸಂವಿಧಾನವನ್ನು ಜಾರಿಗೊಳಿಸುವ ಪ್ರಯತ್ನ ನಡೆಯುತ್ತಿದ್ದೆ. ಹಿಂದೊಮ್ಮೆ ‘ತಳಸ್ತರ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಂವಿಧಾನ ವಿಫಲವಾದರೆ ಆ ಗ್ರಂಥಕ್ಕೆ ನಾನೇ ಬೆಂಕಿ ಹಚ್ಚುತ್ತೇನೆ’ ಎಂದು ಅಂಬೇಡ್ಕರ್ ಹೇಳಿದ್ದರು. ಮನುವಾದಿಗಳು ಸಂವಿಧಾನವನ್ನೇ ಬಳಸಿಕೊಂಡು ಪ್ರಜಾಸತ್ತೆಯ ಮೇಲೆ ನಡೆಸುತ್ತಿರುವ ದಾಳಿಯನ್ನು ನೋಡಲು ಅಂಬೇಡ್ಕರ್ ಏನಾದರೂ ಬದುಕಿದ್ದಿದ್ದರೆ, ತಾನೇ ಬರೆದ ಸಂವಿಧಾನಕ್ಕೆ ತಾನೇ ಬೆಂಕಿ ಹಚ್ಚಿಬಿಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News