ಮಹಾರಾಷ್ಟ್ರ: ಆಟ ಮುಗಿದಿಲ್ಲ....

Update: 2019-11-29 05:13 GMT

ಕೌಟಿಲ್ಯನಿಗೆ ಕುಟಿಲತೆಯ ವ್ಯಕ್ತಿತ್ವವನ್ನು ಅಂಟಿಸುವಲ್ಲಿ ಸದ್ಯದ ರಾಜಕೀಯ ಯಶಸ್ವಿಯಾಗಿದೆ. ಮೋಸ, ವಂಚನೆಯಲ್ಲಿ ಯಶಸ್ವಿಯಾಗುವಾತನೇ ಚಾಣಕ್ಯ ಎನ್ನುವುದನ್ನು ನಮ್ಮ ಮಾಧ್ಯಮಗಳು ಜನ ಸಮೂಹದ ನಡುವೆ ಬಿತ್ತಿ ಬಿಟ್ಟಿವೆ. ಒಂದು ಕಾಲದಲ್ಲಿ ಹಣ, ಹೆಂಡ, ಬೆದರಿಕೆಗಳನ್ನು ಬಳಸಿ ಮತದಾರನಿಂದ ಮತಗಳನ್ನು ಪಡೆಯುವುದು ಚರ್ಚೆಯಲ್ಲಿತ್ತು. ಇಂದು ಆ ಚರ್ಚೆ ಬದಿಗೆ ಸರಿದಿದೆ. ನೇರವಾಗಿ ಶಾಸಕರನ್ನೇ ಹಣದ ಮೂಲಕ ಕೊಂಡುಕೊಳ್ಳುವ ಹೊಸ ಚುನಾವಣಾ ಅಕ್ರಮ ಮುನ್ನೆಲೆಗೆ ಬಂದಿದೆ. ಬಿಡಿಬಿಡಿಯಾಗಿ ಮತದಾರರನ್ನು ಕೊಂಡುಕೊಳ್ಳುವ ಬದಲು, ಒಂದೇ ಹಿಡಿಗಂಟಿನಲ್ಲಿ ಶಾಸಕರನ್ನು ಕೊಳ್ಳುವುದೇ ಸುಲಭದ ಮಾರ್ಗ ಎನ್ನುವುದನ್ನು ದಿಲ್ಲಿಯಲ್ಲಿರುವ ನಾಯಕರು ಅರಿತಿದ್ದಾರೆ. ಆದುದರಿಂದಲೇ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದ ಬೆನ್ನಿಗೇ ಅನಧಿಕೃತವಾಗಿ ಶಾಸಕರ ಹರಾಜು ನಡೆಯ ತೊಡಗುತ್ತದೆ. ‘ಪಕ್ಷಾಂತರ ಕಾಯ್ದೆ’ಯನ್ನು ಹೆಸರಿಗಷ್ಟೇ ಬೆರ್ಚಪ್ಪನಂತೆ ನಿಲ್ಲಿಸಲಾಗಿದೆ. ಒಂದು ಪಕ್ಷದಿಂದ ಆರಿಸಲ್ಪಟ್ಟ ಶಾಸಕ ನಾಳೆ ಅದೇ ಪಕ್ಷಕ್ಕೆ ಬೆಂಬಲ ನೀಡುತ್ತಾನೆ ಎನ್ನುವ ಭರವಸೆ ಆ ಪಕ್ಷದ ಮುಖಂಡರಿಗೇ ಇಲ್ಲದಂತಾಗಿದೆ. ಹೀಗಾಗಿ ಚುನಾವಣಾ ಆಯೋಗ ಸರಕಾರ ರಚನೆಗೆ ಹೊಸ ಮಾದರಿಯೊಂದನ್ನು ಆರಿಸಿಕೊಳ್ಳಬಹುದು. ಐಪಿಎಲ್ ಕ್ರಿಕೆಟ್ ಹರಾಜು ಕೂಗುವಂತೆ ಜನಪ್ರತಿನಿಧಿಗಳನ್ನು ಬಹಿರಂಗವಾಗಿ ಹರಾಜು ಕೂಗುವ ಪದ್ಧತಿಯನ್ನು ಆರಂಭಿಸಬಹುದು. ಬೆಟ್ಟಿಂಗ್, ಜೂಜು, ವೇಶ್ಯಾವಾಟಿಕೆಗಳನ್ನು ಕಾನೂನುಬದ್ಧಗೊಳಿಸುವ ಕುರಿತಂತೆ ಮಾಧ್ಯಮಗಳಲ್ಲಿ ಆಗಾಗ ಒತ್ತಾಯಗಳು ಕೇಳಿ ಬರುತ್ತವೆ. ಹಾಗೆಯೇ ರಾಜಕೀಯದಲ್ಲೂ ಶಾಸಕರ ಹರಾಜನ್ನು ಕಾನೂನು ಬದ್ಧಗೊಳಿಸಬೇಕು. ಎಲ್ಲ ಶಾಸಕರು ತಮ್ಮ ಸ್ವಯಂ ಬಲದಿಂದ ಚುನಾವಣೆಗೆ ನಿಲ್ಲಬೇಕು. ಬಳಿಕ ಅವರನ್ನು ವಿವಿಧ ಪಕ್ಷಗಳು ಹರಾಜಿಗೆ ಕೂಗಬೇಕು. ಬೇಕಾದರೆ ಗುಪ್ತ ಟೆಂಡರ್ ಪದ್ಧತಿಯನ್ನು ಇದಕ್ಕೂ ಅನ್ವಯಗೊಳಿಸಬಹುದು. ವಿವಿಧ ಪಕ್ಷಗಳ ಮುಖಂಡರು ಶಾಸಕರು ಅಥವಾ ಸಂಸದರ ವಿವಿಧ ಬೆಲೆಯನ್ನು ಗುಪ್ತ ಲಕೋಟೆಯೊಳಗೆ ಇಟ್ಟು ಅದನ್ನು ಆಯೋಗಕ್ಕೆ ನೀಡಬೇಕು. ಯಾರು ಅತಿ ಹೆಚ್ಚು ದರಕ್ಕೆ ಶಾಸಕರನ್ನು ಕೂಗಿದ ಪಕ್ಷಕ್ಕೆ ಶಾಸಕರನ್ನು ಐದು ವರ್ಷಗಳ ಕಾಲ ಗುತ್ತಿಯಾಗಿ ನೀಡಬೇಕು. ಕಡ್ಡಾಯವಾಗಿ ಐದು ವರ್ಷ ಶಾಸಕರು ಆ ಸರಕಾರದ ಜೊತೆಗಿರಬೇಕು. ಹರಾಜು ಕೂಗಲು ಇಂತಿಷ್ಟು ಠೇವಣಿಯನ್ನಿಟ್ಟರೆ ಅಥವಾ ಹರಾಜಿನ ಹಣದಲ್ಲಿ ಇಂತಿಷ್ಟು ಶೇಕಡ ಸರಕಾರಕ್ಕೆ ಸೇರಬೇಕು ಎಂಬ ನಿಯಮ ಅಳವಡಿಸಿದರೆ ಖಜಾನೆಗೂ ಒಂದಿಷ್ಟು ದುಡ್ಡಾಯಿತು. ಒಮ್ಮೆ ಹರಾಜಾಗಿರುವ ಶಾಸಕನ ಸಂಪೂರ್ಣ ನಿಯಂತ್ರಣ ಆಯಾ ಪಕ್ಷಕ್ಕೆ ಸೇರಿದ್ದು ಎಂದಾಗಬೇಕು. ಬಹುಶಃ ಪ್ರಜಾಸತ್ತೆಯ ಮುಖವಾಡದಲ್ಲಿ ನಡೆಯುವ ಅನೈತಿಕ ರಾಜಕಾರಣಕ್ಕಿಂತ ಇದು ಎಷ್ಟೋ ವಾಸಿ.

ಕಳೆದ ಐದಾರು ವರ್ಷಗಳಿಂದ ಸಂವಿಧಾನದ ಎಲ್ಲ ವೌಲ್ಯಗಳನ್ನು ಗಾಳಿಗೆ ತೂರಿ, ಅಂಬೇಡ್ಕರ್ ಜಾಗದಲ್ಲಿ ‘ಚಾಣಕ್ಯ’ನೆಂಬ ಕುಟಿಲನನ್ನು ಕೂರಿಸಿ ರಚನೆಯಾಗುತ್ತಿರುವ ಸರಕಾರಗಳನ್ನು ಗಮನಿಸಿದಾಗ ಈ ದೇಶ, ಅಧಿಕೃತವಾಗಿಯೇ ಅನೈತಿಕತೆಯನ್ನು ವೌಲ್ಯವಾಗಿ ಸ್ವೀಕರಿಸಿದೆಯೆನ್ನುವುದು ಸ್ಪಷ್ಟವಾಗುತ್ತದೆ. ಮಹಾರಾಷ್ಟ್ರದ ಬೆಳವಣಿಗೆಯಂತೂ ಪ್ರಜಾಸತ್ತೆಯ ಬಹುದೊಡ್ಡ ಅಣಕವಾಗಿದೆ. ಸಂವಿಧಾನದ ದೌರ್ಬಲ್ಯಗಳನ್ನು ಬಳಸಿಕೊಂಡು ಹಣ ಮತ್ತು ಬೆದರಿಕೆಯ ಮೂಲಕ ಇತರ ಶಾಸಕರನ್ನು ಹಾಡಹಗಲೇ ಕೊಂಡು ಕೊಳ್ಳಲು ಹೊರಟ ಅಮಿತ್ ಶಾ ದೇಶದ ಮುಂದೆ ಬೆತ್ತಲಾಗಿದೆ.

 ಅಮಿತ್ ಶಾ ಅವರ ಗುಜರಾತಿ ತಂತ್ರಕ್ಕ್ಕೆ ಮಹಾರಾಷ್ಟ್ರ ಅಷ್ಟೇ ಬಲವಾಗಿ ತಿರುಗೇಟು ನೀಡಿದೆ. ಬಿಜೆಪಿ ತಾನೇ ತೋಡಿದ ಹಳ್ಳಕ್ಕೆ ಬಿದ್ದು ದೇಶದ ಮುಂದೆ ನಗೆಪಾಟಲಿಗೀಡಾಗಿದೆ. ಕರ್ನಾಟಕದಲ್ಲಿ ಸರಕಾರ ರಚಿಸಿದಂತೆಯೇ ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಬಿಜೆಪಿ ರಾತ್ರೋರಾತ್ರಿ ಮುಂದಾಯಿತು. ರಾಷ್ಟ್ರಪತಿ, ರಾಜ್ಯಪಾಲರು ಸೇರಿದಂತೆ ಸಾಂವಿಧಾನಿಕವಾದ ಎಲ್ಲ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ದೇವೇಂದ್ರ ಫಡ್ನವೀಸ್ ಅವರನ್ನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ಮಾಡಿತು. ಅಜಿತ್ ಪವಾರ್ ಎಂಬ ಪರಮ ಭ್ರಷ್ಟನನ್ನು ಜೈಲಿಗೆ ತಳ್ಳುತ್ತೇನೆ ಎಂದು ಚುನಾವಣಾ ಪ್ರಚಾರದುದ್ದಕ್ಕೂ ಹೇಳಿಕೊಂಡು ಓಡಾಡಿದ ಬಿಜೆಪಿ, ಅಜಿತ್ ಪವಾರ್‌ನ ಬೆಂಬಲದಿಂದ ಸರಕಾರ ರಚಿಸಿದ್ದು ಮಾತ್ರವಲ್ಲ, ಜೈಲಿಗೆ ತಳ್ಳುತ್ತೇನೆ ಎಂಬ ತನ್ನ ಭರವಸೆಯನ್ನೇ ಮರೆತು ಅವರನ್ನು ಉಪಮುಖ್ಯಮಂತ್ರಿಯನ್ನಾಗಿಸಿತು. ಇಷ್ಟೇ ಅಲ್ಲ, ಆತನ ಮೇಲಿರುವ ಪ್ರಮುಖ ಭ್ರಷ್ಟಾಚಾರ ಪ್ರಕರಣಗಳ ತನಿಖೆಯನ್ನೇ ಕೈ ಬಿಟ್ಟಿತು. ಒಂದು ರಾತ್ರಿಯಲ್ಲಿ ಬಿಜೆಪಿ ತನ್ನ ಅಳಿದುಳಿದ ಲಂಗೋಟಿಯನ್ನೂ ಎಸೆದು ದೇಶದ ಮುಂದೆ ನಗ್ನವಾಯಿತು. ಆದರೆ ಬಿಜೆಪಿಯ ಕುತಂತ್ರವನ್ನು ಎನ್‌ಸಿಪಿ ಪೂರಕವಾಗಿ ಬಳಸಿಕೊಂಡಿತು. ತನ್ನ ಮೇಲಿದ್ದ ಕಳಂಕವನ್ನು ಬಿಜೆಪಿಯ ಮುಖಕ್ಕೆ ಮೆತ್ತಿದ ಅಜಿತ್ ಪವಾರ್ ಮೆಲ್ಲಗೆ ಸ್ವಪಕ್ಷಕ್ಕೆ ವಾಪಸಾದರು. ಇದು ಅಜಿತ್ ಪವಾರ್ ಮತ್ತು ಶರದ್‌ಪವಾರ್ ಪ್ರಜ್ಞಾಪೂರ್ವಕವಾಗಿ ಆಡಿದ ಆಟವೋ, ಅಜಿತ್ ಪವಾರ್ ಅವರ ಯತ್ನ ಕೊನೆಯ ಕ್ಷಣದಲ್ಲಿ ವಿಫಲವಾಯಿತೋ ಎನ್ನುವುದು ಇನ್ನಷ್ಟೇ ಬಯಲಾಗಬೇಕಾಗಿದೆ. ಇದೀಗ ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರ ಅಧಿಕಾರ ಹಿಡಿದಿದೆ. ಬಹುಕಾಲದ ಬಳಿಕ ಠಾಕ್ರೆ ‘ಸರ್ಕಾರ್’ ಅಸ್ತಿತ್ವಕ್ಕೆ ಬಂದಿದೆ.

ಆದರೆ ಇಷ್ಟಕ್ಕೇ ಆಟ ಮುಗಿಯಿತು ಎನ್ನುವಂತಿಲ್ಲ. ಬಿಜೆಪಿ ಬಾಲ ತುಳಿಯಲ್ಪಟ್ಟ ಹಾವಿನಂತಾಡುತ್ತಿದೆ. ಆದುದರಿಂದ ಈ ಮೈತ್ರಿ ಸರಕಾರವನ್ನು ಸುಲಲಿತವಾಗಿ ಮುಂದುವರಿಯಲು ಅದು ಬಿಡಲಾರದು. ಮುಖ್ಯವಾಗಿ ಮುಖ್ಯಮಂತ್ರಿ ಪದವಿಯನ್ನು ಎರಡೂವರೆ ವರ್ಷಗಳಂತೆ ಹಂಚಿಕೊಳ್ಳಲಾಗಿದೆಯೋ ಅಥವಾ ಪೂರ್ಣಾವಧಿಗೆ ಮುಖ್ಯಮಂತ್ರಿ ಹುದ್ದೆಯನ್ನು ಶಿವಸೇನೆಗೆ ಬಿಟ್ಟುಕೊಡಲಾಗಿದೆಯೋ ಎನ್ನುವುದು ಇನ್ನೂ ಸ್ಪಷ್ಟವಿಲ್ಲ. ಎರಡು ವರ್ಷಗಳ ಬಳಿಕ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಹುದ್ದೆಯನ್ನು ಮಿತ್ರ ಪಕ್ಷಗಳಿಗೆ ಬಿಟ್ಟುಕೊಡಲಿದ್ದಾರೆಯೆ? ಒಂದು ವೇಳೆ ಹಾಗೆ ಬಿಟ್ಟುಕೊಟ್ಟದ್ದೇ ಆದರೆ ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಯಾರು ಮುಖ್ಯಮಂತ್ರಿಯಾಗಲಿದ್ದಾರೆ? ಇದು ಮೈತ್ರಿಯ ಬಿರುಕಿಗೆ ಕಾರಣವಾಗುವುದಿಲ್ಲವೇ? ಈ ಸಂದರ್ಭದ ಲಾಭ ಪಡೆದು ಮತ್ತೆ ಬಿಜೆಪಿಯು ಸರಕಾರ ರಚಿಸುವ ಯತ್ನವನ್ನು ಮಾಡದೇ ಇರುವುದಿಲ್ಲ. ಬಿಜೆಪಿಗೆ ಮುಖಭಂಗವಾಗಿರುವುದೇನೋ ನಿಜ. ಆದರೆ ಮಹಾರಾಷ್ಟ್ರದ ರಾಜಕೀಯ ಆಟ ಮುಗಿದಿಲ್ಲ. ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಈ ಮೂರು ಪಕ್ಷಗಳು ‘ಬಿಜೆಪಿಯನ್ನು ಹೊರಗಿಡುವುದಕ್ಕಾಗಿ’ ನಿರ್ಮಾಣವಾದ ಮೈತ್ರಿ ಎಂದು ಹೇಳುತ್ತಿದೆ. ಆದರೆ ಶಿವಸೇನೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ ಎನ್ನುವ ಒಂದೇ ಕಾರಣಕ್ಕಾಗಿ ಎನ್‌ಸಿಪಿಯೊಂದಿಗೆ ಕೈ ಜೋಡಿಸಿದೆ. ಇದೇ ಸಂದರ್ಭದಲ್ಲಿ ರಾಮಮಂದಿರ, ಎನ್‌ಆರ್‌ಸಿ, ಪ್ರಾದೇಶಿಕವಾದಗಳು ಮೈತ್ರಿ ಸರಕಾರಕ್ಕೆ ಬಹುದೊಡ್ಡ ಸವಾಲಾಗಲಿವೆ. ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳುವ ಸಂದರ್ಭ ಬಂದಾಗ ಶಿವಸೇನೆಯು ಮೈತ್ರಿಗೆ ತಿಲಾಂಜಲಿಯಿಟ್ಟು ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸುವ ಸಾಧ್ಯತೆಳೂ ಇವೆ. ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು, ಆದಿತ್ಯ ಠಾಕ್ರೆಯನ್ನು ಉಪಮುಖ್ಯಮಂತ್ರಿ ಮಾಡುವ ಅವಕಾಶ ಸಿಕ್ಕಿದರೆ ಶಿವಸೇನೆ ಅದನ್ನು ಕೈ ಚೆಲ್ಲದು. ಈ ಮೂಲಕ ಶಿವಸೇನೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸ್ಥಾನಗಳೆರಡನ್ನೂ ಬಾಚಿಕೊಂಡಂತಾಯಿತು. ಮಹಾರಾಷ್ಟ್ರದಲ್ಲಿ ಪ್ರಾದೇಶಿಕವಾದ ಸಂಪೂರ್ಣ ತಣ್ಣಗಾಗಿದೆ. ಪ್ರಖರ ಹಿಂದುತ್ವದ ಅಡಿಯಲ್ಲಿ ಮತಯಾಚಿಸಿದರೆ ಮಾತ್ರ ಅದು ಚುನಾವಣೆಯಲ್ಲಿ ಸ್ಥಾನಗಳನ್ನು ಪಡೆದುಕೊಳ್ಳಬಹುದು. ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆಗೆ ಚುನಾವಣೆ ಎದುರಿಸಿದರೆ ಅದರಿಂದ ಶಿವಸೇನೆಗೆ ನಷ್ಟವೇ ಅಧಿಕ. ಆದುದರಿಂದ ಚುನಾವಣೆಯ ಹೊತ್ತಿಗೆ ಮತ್ತೆ ಬಿಜೆಪಿಯ ಗೆಳೆತನ ಶಿವಸೇನೆಗೆ ಅಗತ್ಯವಿದೆ. ಬಿಜೆಪಿಗೆ ಶಿವಸೇನೆಯ ಅಗತ್ಯವೂ ಇದೆ. ಈ ನಿಟ್ಟಿನಲ್ಲಿ, ಸದ್ಯದ ಸರಕಾರವೂ ಅನೈತಿಕತೆಯ ಮೂಲಕವೇ ಹುಟ್ಟಿದೆ ಮತ್ತು ಅನೈತಿಕ ದಾರಿಯಲ್ಲೇ ಅದು ಅಂತ್ಯ ಕಾಣಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News