​ಬಿಜೆಪಿಗೆ ಜಾರ್ಖಂಡ್ ಟೆಸ್ಟ್: ಮೊದಲ ಹಂತದ ಮತದಾನ ಆರಂಭ

Update: 2019-11-30 03:28 GMT

ರಾಂಚಿ : ಜಾರ್ಖಂಡ್ ವಿಧಾನಸಭೆಗೆ ಐದು ಹಂತಗಳಲ್ಲಿ ನಡೆಯುವ ಚುನಾವಣೆಯ ಮೊದಲ ಹಂತದಲ್ಲಿ 13 ಕ್ಷೇತ್ರಗಳಿಗೆ ಮತದಾನ ಶನಿವಾರ ಬೆಳಿಗ್ಗೆ ಆರಂಭವಾಗಿದೆ. ಹಾಲಿ ಸಚಿವರು, ಎಂಟು ಮಂದಿ ಹಾಲಿ ಶಾಸಕರು ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಭವಿಷ್ಯ ಇಂದು ನಿರ್ಧಾರವಾಗಲಿದೆ.

18 ಲಕ್ಷ ಮಹಿಳೆಯರು ಸೇರಿದಂತೆ 37 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 15 ಮಂದಿ ಮಹಿಳೆಯರೂ ಸೇರಿದಂತೆ 189 ಅಭ್ಯರ್ಥಿಗಳ ಭವಿಷ್ಯ ಮೊದಲ ಹಂತದ ಚುನಾವಣೆಯಲ್ಲಿ ನಿರ್ಧಾರವಾಗಲಿದೆ. ಕಣದಲ್ಲಿರುವ ಅಭ್ಯರ್ಥಿಗಳಲ್ಲಿ 44 ಮಂದಿ ಅಪರಾಧ ಆರೋಪಗಳನ್ನು ಎದುರಿಸುತ್ತಿದ್ದಾರೆ. 59 ಕೋಟ್ಯಧಿಪತಿಗಳೂ ಕಣದಲ್ಲಿದ್ದಾರೆ.

ಇಂದು ಚುನಾವಣೆ ನಡೆಯುವ ಕ್ಷೇತ್ರಗಳ ಪೈಕಿ ಛಾತ್ರಾ, ಗುಮ್ಲಾ, ಲೋಹರ್ದಾಗ, ಲತೇಹಾರ್ ಮತ್ತು ಗಾರ್ವ್ಹಾ ನಕ್ಸಲ್‌ ಪೀಡಿತ ಕ್ಷೇತ್ರಗಳೆಂದು ಗೃಹ ಸಚಿವಾಲಯ ಪಟ್ಟಿಮಾಡಿದೆ.

ರಘುವರ ದಾಸ್ ನೇತೃತ್ವದ ಬಿಜೆಪಿ ಸರ್ಕಾರ 81 ಸದಸ್ಯ ಬಲದ ವಿಧಾನಸಭೆಯಲ್ಲಿ ಎರಡನೇ ಅವಧಿಯಲ್ಲೂ ಅಧಿಕಾರದ ಗದ್ದುಗೆ ಹಿಡಿಯುವ ಕನಸು ಕಾಣುತ್ತಿದೆ. ಐದು ಹಂತಗಳ ಚುನಾವಣೆಯ ಫಲಿತಾಂಶ ಡಿಸೆಂಬರ್ 23ರಂದು ಪ್ರಕಟವಾಗಲಿದೆ. 3,906 ಮತಗಟ್ಟೆಗಳ ಪೈಕಿ 989 ಮತಗಟ್ಟೆಗಳಲ್ಲಿ ವೆಬ್‌ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಆರೋಗ್ಯ ಸಚಿವ ರಾಮಚಂದ್ರ ಚಂದ್ರವಂಶಿ, ಜಾರ್ಖಂಡ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಖದೇವ್ ಭಗತ್ ಹಾಗೂ ಮಾಜಿ ಐಪಿಎಸ್ ಅಧಿಕಾರಿ ರಾಮೇಶ್ವರ್ ಓರಾನ್ ಕಣದಲ್ಲಿರುವ ಪ್ರಮುಖರು. ಓರಾನ್ ಅವರು ಬಿಜೆಪಿ ಸೇರಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಸ್ಪರ್ಧಿಸಿದ್ದಾರೆ.

ಛಾತ್ರಪುರ ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಮುಖ್ಯ ಸಚೇತಕ ರಾಧಾಕೃಷ್ಣ ಕಿಶೋರ್‌ಗೆ ಟಿಕೆಟ್ ನಿರಾಕರಿಸಲಾಗಿದ್ದು, ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ ಪಾರ್ಟಿ ಟಿಕೆಟ್‌ನಲ್ಲಿ ಅದೇ ಕ್ಷೇತ್ರದಿಂದ ಅವರು ಕಣಕ್ಕೆ ಇಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News