ಯೆಮನ್‌ನಿಂದ ತಪ್ಪಿಸಿಕೊಂಡು ಬಂದ ಇವರ ರೋಚಕ ಕಥೆ ಓದಲೇಬೇಕು...

Update: 2019-11-30 04:41 GMT
ಫೋಟೊ : timesofindia

ಕೊಚ್ಚಿನ್: ಕೊಚ್ಚಿಯ ನೆಲಕ್ಕೆ ಶುಕ್ರವಾರ ಮಧ್ಯಾಹ್ನ ಪದಾರ್ಪಣೆ ಮಾಡಿದ ಆ ಒಂಬತ್ತು ಮಂದಿ ಮೊಣಕಾಲೂರಿ ತಾಯ್ನೆಲವನ್ನು ಚುಂಬಿಸಿದ ಭಾವಸ್ಪರ್ಶಿ ಕ್ಷಣ ಅದು..

ಅವರನ್ನು ಕರೆತಂದದ್ದು ಕರಾವಳಿ ಕಾವಲು ಪಡೆ ಸಿಬ್ಬಂದಿ. ಅವರ ದೋಣಿಯಲ್ಲಿ ಉಳಿದಿದ್ದು ಕೇವಲ 500 ಲೀಟರ್ ಇಂಧನ. ಅರ್ಧ ಚೀಲ ಈರುಳ್ಳಿ. ಆದರೆ ಅದೃಷ್ಟ ಅವರ ಕಡೆಗಿತ್ತು.. ಸಮುದ್ರ ಅವರನ್ನು ಕ್ಷಮಿಸಿತ್ತು !

ಕೇರಳದ ಇಬ್ಬರು ಹಾಗೂ ತಮಿಳುನಾಡಿನ ಏಳು ಮಂದಿ ಮೀನುಗಾರರು ಯೆಮನ್‌ನಿಂದ ಪವಾಡ ಸದೃಶವಾಗಿ ತಪ್ಪಿಸಿಕೊಂಡು ಬಂದ ಕಥೆ ರೋಚಕ. ಮಾಲಿಕನ ಕಿರುಕುಳ ತಡೆಯದೇ, ಸೂಕ್ತ ವೇತನವನ್ನೂ ನೀಡದೇ ಸತಾಯಿಸುತ್ತಿದ್ದ ಕಾರಣ ಮಾಲಿಕನ ದೋಣಿಯನ್ನೇ ಕಳ್ಳತನ ಮಾಡಿ ಅದರಲ್ಲಿ 10 ದಿನಗಳ ಕಾಲ 3000 ಕಿಲೋಮೀಟರ್ ಸಮುದ್ರಯಾನ ಮಾಡಿ ತಾಯ್ನಿಡಿಗೆ ವಾಪಸ್ಸಾಗಿದ್ದರು. ಅದೂ ಸಾಗರ ಯಾನಕ್ಕೆ ಇದ್ದ ನಾವೆಯಲ್ಲ; ಮೀನುಗಾರಿಕಾ ದೋಣಿಯಲ್ಲಿ ಈ ಸಾಹಸ ಮಾಡಿದ್ದರು.

ಎಎಲ್ ತಿರಯ-3 ಹೆಸರಿನ ದೋಣಿಯನ್ನು ಭಾರತೀಯ ಕರಾವಳಿ ಕಾವಲು ಪಡೆಯ ಸಶಸ್ತ್ರ ಯೋಧರು ಕೊಚ್ಚಿ ಕಡಲ ಕಿನಾರೆಯಿಂದ 75 ನಾಟಿಕಲ್ ಮೈಲು ದೂರದಲ್ಲಿ ವಶಕ್ಕೆ ಪಡೆದಿದ್ದರು. ಮಧ್ಯಾಹ್ನ 1.15ರ ಸುಮಾರಿಗೆ ಕೊಚ್ಚಿಯ ಕಸ್ಟಮ್ಸ್ ಜೆಟ್ಟಿಯಲ್ಲಿ ಬಂದಿಳಿಯಿತಿ. ಕೊಚ್ಚಿ ಬಂದರಿನಿಂದ ಸುಮಾರು 218 ಕಿಲೋಮೀಟರ್ ದೂರದಲ್ಲಿ (117 ನಾಟಿಕಲ್ ಮೈಲು) ಕರಾವಳಿ ಕಾವಲು ಪಡೆಯ ಡೋರ್ನಿಯರ್ ವಿಮಾನ ಇವರನ್ನು ಪತ್ತೆ ಮಾಡಿತ್ತು.

ಇವರ ಬಗೆಗೆ ತನಿಖೆಗಾಗಿ ಐಸಿಜಿಎಸ್ ಆರ್ಯಮನ್ ಹಡಗನ್ನು ಕಳುಹಿಸಿಕೊಡಲಾಗಿತ್ತು. "ಈ ಮೀನುಗಾರರು 2018ರ ಡಿಸೆಂಬರ್ 13ರಂದು "ಹುಲುಸು ಹುಲ್ಲುಗಾವಲು" ಅರಸಿ ತಿರುವನಂತಪುರದಿಂದ ಹೊರಟಿದ್ದರು. ಅದರೆ ಯೆಮನ್ ಉದ್ಯೋಗದಾತ ವಿಶ್ವಾಸದ್ರೋಹ ಎಸಗಿದ್ದ. 10 ತಿಂಗಳ ಕಾಲ ಅವರನ್ನು ಶೋಷಿಸಿ, ದೋಣಿಯಲ್ಲೇ ಉಳಿಯುವಂತೆ ಮಾಡಿದ್ದ. ಇವರಿಗೆ ವೇತನವನ್ನೂ ಸರಿಯಾಗಿ ನೀಡುತ್ತಿರಲಿಲ್ಲ ಎನ್ನಲಾಗಿದೆ.

ರಾತ್ರಿ ಕರಾವಳಿ ಪೊಲೀಸ್ ಠಾಣೆ ಆವರಣದಲ್ಲಿ ಕಳೆದ ಇವರನ್ನು ನಂತರ ಇಮಿಗ್ರೇಶನ್ ವಿಧಿವಿಧಾನಗಳಿಗಾಗಿ ಕರೆದೊಯ್ಯಲಾಗುತ್ತದೆ. ಈಗಾಗಲೇ ಇವರು ತಮ್ಮ ಸಂಬಂಧಿಕರ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಅವರೆಲ್ಲರೂ ಇಲ್ಲಿಗೆ ಆಗಮಿಸುವ ನಿರಿಕ್ಷೆ ಇದೆ. ಯಾವುದೇ ಸಂಕೀರ್ಣತೆಗಳು ಇಲ್ಲದಿದ್ದರೆ ಅವರನ್ನು ಕಳುಹಿಸಿಕೊಡಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಾಲಕನ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ಹಲವು ದಿನಗಳಿಂದ ಯೋಜನೆ ರೂಪಿಸಿದ್ದ ಅವರು ಸಾಕಷ್ಟು ಇಂಧನ ಹಾಗೂ ಆಹಾರ ದಾಸ್ತಾನು ಮಾಡಿದ್ದರು. ಯೆಮನ್‌ನ ಅಶ್ ಶಿಹ್ರ್ ಮೀನುಗಾರಿಕಾ ಬಂದರಿನಿಂದ ನವೆಂನರ್ 19ರಂದು ಹೊರಟಿದ್ದರು. ಶುಕ್ರವಾರ ಮಧ್ಯಾಹ್ನ ಕೊಚ್ಚಿನ್ ತಲುಪಿದಾಗ ಅವರ ಅದೃಷ್ಟವನ್ನು ಅವರಿಗೇ ನಂಬಲಾಗಲಿಲ್ಲ.

"ನಮಗೆ ಗಲ್ಫ್ ಉದ್ಯೋಗದ ಆಮಿಷ ಒಡ್ಡಿ ಒಮನ್‌ಗೆ ಕರೆದೊಯ್ಯಲಾಗಿತ್ತು. ಆದರೆ ಕೊನೆಗೆ ಯೆಮನ್‌ಗೆ ಕಳುಹಿಸಿದರು. ನಮ್ಮಲ್ಲಿ ಐದು ಮಂದಿ ಕಳೆದ ವರ್ಷದ ಡಿಸೆಂಬರ್ 13ರಂದು ತಿರುವನಂತಪುರದಿಂದ ಶಾರ್ಜಾಗೆ ಹೋದೆವು. ಅಜ್ಮನ್‌ನಲ್ಲಿ ಒಂದು ದೋಣಿಯಲ್ಲಿ ಒಂದು ತಿಂಗಳು ಕಳೆದೆವು. ಬಳಿಕ ಒಮನ್‌ಗೆ ಕರೆದೊಯ್ಯುವುದಾಗಿ ನಂಬಿಸಿ ಯೆಮನ್‌ಗೆ ಕರೆದೊಯ್ಯಲಾಗಿತ್ತು" ಎಂದು ಸಹಾಯ ರವಿಕುಮಾರ್ ಅನುಭವ ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News