ಚುನಾವಣೆ ಜಾರ್ಖಂಡ್ ನಲ್ಲಿ, ಸಿಬ್ಬಂದಿಯನ್ನು ಐಎಎಫ್ ವಿಮಾನ ಇಳಿಸಿದ್ದು ಇನ್ನೊಂದು ರಾಜ್ಯದಲ್ಲಿ !

Update: 2019-11-30 09:02 GMT

ಹೊಸದಿಲ್ಲಿ: ಜಾರ್ಖಂಡ್‍ನಲ್ಲಿ ಇಂದು ನಡೆಯುತ್ತಿರುವ ಪ್ರಥಮ ಹಂತದ ವಿಧಾನಸಭಾ ಚುನಾವಣೆಗೆಂದು ನಿಯೋಜಿಸಲಾದ 18 ಮಂದಿ ಸಿಬ್ಬಂದಿಯನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಒಂದು ಜಾರ್ಖಂಡ್‍ ನಲ್ಲಿ ಇಳಿಸುವ ಬದಲು ಗುರುವಾರ ಛತ್ತೀಸ್ ಗಢದಲ್ಲಿ ಇಳಿಸಿದ ಕುತೂಹಲಕಾರಿ ವಿದ್ಯಮಾನ ನಡೆದಿದೆ.

ಜಾರ್ಖಂಡ್‍ ನ ಲಾಟೆಹಾರ್ ಜಿಲ್ಲೆಯಿಂದ ಮಹುವಾದಂದ್ ಎಂಬಲ್ಲಿನ ಚಟಕಪುರ್ ಎಂಬಲ್ಲಿಗೆ ಸಿಬ್ಬಂದಿಯನ್ನು ಕರೆದೊಯ್ಯಬೇಕಾಗಿದ್ದ ಹೆಲಿಕಾಪ್ಟರ್ ಸಿಬ್ಬಂದಿಯನ್ನು ಛತ್ತೀಸಗಢದ ಸೂರಜಪುರ್ ಜಿಲ್ಲೆಯ ಪ್ರತಾಪ್ಪುರ್ ಭೈಸಮುಂದ ಎಂಬಲ್ಲಿನ ಗದ್ದೆ ಪ್ರದೇಶವೊಂದರಲ್ಲಿ ಇಳಿಸಿದೆ.

ಈ ಸಿಬ್ಬಂದಿ ಮಾಣಿಕ ವಿಧಾನಸಭಾ ಕ್ಷೇತ್ರದ ಮತದಾನ ಬೂತುಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದರು. ತಮ್ಮನ್ನು ಬೇರೊಂದು ರಾಜ್ಯದಲ್ಲಿ ಇಳಿಸಲಾಗಿದೆ ಎಂದು ತಿಳಿಯುತ್ತಲೇ ಅವರು ಲಾಟೆಹಾರ್ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಝೀಶನ್ ಖಮರ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದು, ಅವರು ತಕ್ಷಣ ಛತ್ತೀಸಗಢದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದರು.

ಛತ್ತೀಸಗಢದ ಅಧಿಕಾರಿಗಳು ತಕ್ಷಣ ಚುನಾವಣಾ ಸಿಬ್ಬಂದಿಯಿದ್ದ ಸ್ಥಳದತ್ತ ಧಾವಿಸಿದ್ದರು. ನಂತರ ಲಾಟೆಹಾರ್‍ನಿಂದ ಇನ್ನೊಂದು ಹೆಲಿಕಾಪ್ಟರ್ ಆಗಮಿಸಿ ಅವರನ್ನೆಲ್ಲ ಜಾರ್ಖಂಡ್‍ಗೆ ರವಾನಿಸಲಾಯಿತು.

ಹೆಲಿಕಾಪ್ಟರ್ ಪೈಲಟ್ ದಾರಿ ತಪ್ಪಿದ್ದರಿಂದ ಹೀಗಾಯಿತು ಎಂದು  ಲಾಟೆಹಾರ್ ಜಿಲ್ಲಾಧಿಕಾರಿ ನಂತರ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News