​ಚಂದ್ರಯಾನದ ವಿಕ್ರಮ್ ಲ್ಯಾಂಡರ್ ಅವಶೇಷ ಕೊನೆಗೂ ಪತ್ತೆ !

Update: 2019-12-03 04:06 GMT
ಫೋಟೊ : NASA

ಬೆಂಗಳೂರು : ನಾಸಾದ ಲೂನಾರ್ ರೆಕೊನಸೆನ್ಸ್ ಆರ್ಬಿಟರ್ (ಎಲ್‌ಆರ್‌ಓ) ಕ್ಯಾಮೆರಾ ಸೆರೆ ಹಿಡಿದ ಚಿತ್ರವನ್ನು ಮಂಗಳವಾರ ಮುಂಜಾನೆ ಬಿಡುಗಡೆ ಮಾಡಲಾಗಿದ್ದು, ಇದರ ವಿಶ್ಲೇಷಣೆ ನಡೆಸಿದಾಗ ಸೆಪ್ಟೆಂಬರ್ 7ರಂದು ಚಂದ್ರನ ಮೇಲ್ಮೈನಲ್ಲಿ ಇಳಿಯುವ ಪ್ರಯತ್ನದಲ್ಲಿ ಧ್ವಂಸವಾದ ವಿಕ್ರಮ್ ಲ್ಯಾಂಡರ್‌ನ ಅವಶೇಷಗಳು ಪತ್ತೆಯಾಗಿವೆ.

"ವಿಕ್ಯಮ್ ಲ್ಯಾಂಡರ್ ಪತ್ತೆಯಾಗಿದೆ. ನೀಲಿ ಮತ್ತು ಹಸಿರು ಚುಕ್ಕೆಗಳಿರುವ ಚಂದ್ರನ ಚಿತ್ರವು ವಿಕ್ರಮ್‌ನ ಪರಿಣಾಮ ಬೀರಿದ ಬಿಂದುವನ್ನು ಮತ್ತು ಸಂಬಂಧಿತ ಅವಶೇಷಗಳನ್ನು ತೋರಿಸುತ್ತದೆ" ಎಂದು ನಾಸಾ ಹೇಳಿದೆ.

ಹಸಿರು ಚುಕ್ಕೆಗಳು ಬಾಹ್ಯಾಕಾಶ ನೌಕೆಯ ಅವಶೇಷಗಳು. ನೀಲಿ ಚುಕ್ಕೆಗಳು ಚಂದ್ರನ ಮಣ್ಣಿಗೆ ಆಗಿರುವ ಹಾನಿಯನ್ನು ಸೂಚಿಸುತ್ತವೆ. ಬಾಹ್ಯಾಕಾಶನೌಕೆಯ ಸಣ್ಣ ಚೂರುಗಳು ಮೇಲ್ಮೈಗೆ ಅಂಟಿಕೊಂಡಿರುವ ಸಾಧ್ಯತೆ ಇದೆ. ಷಣ್ಮುಗ ಸುಬ್ರಹ್ಮಣ್ಯನ್ ಅವರು ಪತ್ತೆ ಮಾಡಿರುವ ಅವಶೇಷಗಳು ಚಿತ್ರದಲ್ಲಿ "ಎಸ್" ಸಂಕೇತದಲ್ಲಿ ಬಿಂಬಿತವಾಗಿದೆ ಎಂದು ವಿವರಿಸಿದೆ.

ಸುಬ್ರಹ್ಮಣ್ಯನ್ ಯಾರು ಎನ್ನುವುದನ್ನು ನಾಸಾ ವಿವರಿಸಿಲ್ಲ. ಆದರೆ ಅವಶೇಷಗಳ ಪತ್ತೆ ನಿಟ್ಟಿನಲ್ಲಿ ಧನಾತ್ಮಕ ಅಂಶಗಳೊಂದಿಗೆ ಅವರು ಎಲ್‌ಆರ್‌ಓ ಪ್ರಾಜೆಕ್ಟ್ ಸಂಪರ್ಕಿಸಿದ್ದರು. ಈ ಸುಳಿವು ಪಡೆದ ಬಳಿಕ ಎಲ್‌ಆರ್‌ಓಸಿ ತಂಡ, ಲ್ಯಾಂಡರ್ ಪತನದ ಪೂರ್ವ ಹಾಗೂ ಬಳಿಕದ ಚಿತ್ರಗಳನ್ನು ವಿಶ್ಲೇಷಿಸುವ ಮೂಲಕ ಪತ್ತೆಯಾದ ಈ ಅಂಶವನ್ನು ದೃಢಪಡಿಸಿದೆ ಎಂದು ಹೇಳಿದೆ.

ಎಲ್‌ಆರ್‌ಓ ಕ್ಯಾಮೆರಾ ತಂಡ ಸೆಪ್ಟೆಂಬರ್ 17ರಂದು ಸೆರೆಹಿಡಿದ ಮೊದಲ ಮೊಸಾಯಿಕ್ ಚಿತ್ರವನ್ನು ಸೆಪ್ಟೆಂಬರ್ 26ರಂದು ಬಿಡುಗಡೆ ಮಾಡಿದೆ. ಸುಬ್ರಹ್ಮಣ್ಯನ್ ಸೇರಿದಂತೆ ಹಲವು ಮಂದಿ ಇದನ್ನು ಡೌನ್‌ಲೋಡ್ ಮಾಡಿಕೊಂಡು ವಿಕ್ರಮ್ ಅವಶೇಷಗಳಿಗಾಗಿ ಹುಡುಕಾಡಿದ್ದರು. ಅಕ್ಟೋಬರ್ 14, 15 ಹಾಗೂ ನವೆಂಬರ್ 11ರಂದು ಸೆರೆಹಿಡಿದ ಚಿತ್ರಗಳನ್ನೂ ವಿಶ್ಲೇಷಿಸಿದ್ದಾರೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News