​ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ನೆರವು ಪಡೆದಿದ್ದ ಬಿಜೆಪಿ ನಾಯಕಿ !

Update: 2019-12-03 04:01 GMT

ಭೋಪಾಲ್ : ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಲ್ಲಿ ಮಧ್ಯಪ್ರದೇಶದ ಅಂದಿನ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಮೇಲೆ ಒತ್ತಡ ತರಲು ತಾವು ಕಾಂಗ್ರೆಸ್ ನಾಯಕರ ನೆರವು ಪಡೆಯುತ್ತಿದ್ದೆ ಎಂಬ ಸ್ಫೋಟಕ ಮಾಹಿತಿಯನ್ನು ಲೋಕಸಭೆಯ ಮಾಜಿ ಸ್ಪೀಕರ್ ಹಾಗೂ ಬಿಜೆಪಿಯ ಹಿರಿಯ ನಾಯಕಿ ಸುಮಿತ್ರಾ ಮಹಾಜನ್ ಬಹಿರಂಗಪಡಿಸಿದ್ದಾರೆ.

"ಮಧ್ಯಪ್ರದೇಶದಲ್ಲಿ ನಮ್ಮದೇ ಪಕ್ಷ ಅಧಿಕಾರದಲ್ಲಿದ್ದಾಗ, ಪಕ್ಷದ ಶಿಸ್ತು ಎಂಬ ಹಗ್ಗದಿಂದ ಕಟ್ಟಿಹಾಕಿದ ಕಾರಣದಿಂದಾಗಿ ಹಲವು ಬಾರಿ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶವಾಗಿರಲಿಲ್ಲ" ಎಂದು ಅವರು ಹೇಳಿದ್ದರು. 15 ವರ್ಷಗಳ ಬಿಜೆಪಿ ಆಡಳಿತವನ್ನು ಕೊನೆಗೊಳಿಸಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಇಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

"ಬಿಜೆಪಿ ಸರ್ಕಾರ ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದಾಗ ಹಲವು ಬಾರಿ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳನ್ನು ಪ್ರಸ್ತಾಪಿಸಲು ಅವಕಾಶವಾಗಲಿಲ್ಲ. ಬಳಿಕ ಒಳಗೊಳಗೇ ಇಂಥ ವಿಷಯಗಳ ಬಗ್ಗೆ ಧ್ವನಿ ಎತ್ತುವಂತೆ ಕಾಂಗ್ರೆಸ್ ಮುಖಂಡರಿಗೆ ಕೋರುತ್ತಿದ್ದೆ. ಅಗತ್ಯ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಅವರಿಗೆ ಮನವಿ ಮಾಡುವ ಭರವಸೆ ನೀಡುತ್ತಿದ್ದೆ" ಎಂದು ಹೇಳಿದ್ದಾರೆ.

"ಇಂಧೋರ್ ಅಭಿವೃದ್ಧಿಗಾಗಿ ನಾವು ಪಕ್ಷ ರಾಜಕೀಯ ಮೀರಿ ಕೆಲಸ ಮಾಡಿದ್ದೆವು" ಎಂದು ಎಂಟು ಬಾರಿಯ ಸಂಸದೆ ಸಮಾರಂಭವೊಂದರಲ್ಲಿ ಹೇಳಿದರು. 75 ವರ್ಷ ವಯಸ್ಸಿನ ಮಾನದಂಡದ ಅನ್ವಯ ಕಳೆದ ಬಾರಿ ಅವರಿಗೆ ಲೋಕಸಭೆ ಟಿಕೆಟ್ ನಿರಾಕರಿಸಲಾಗಿತ್ತು.

ಹಿಂದಿನ ರಾಜ್ಯ ಸರ್ಕಾರದ ವಿರುದ್ಧ ಸಾರ್ವಜನಿಕವಾಗಿ ಮಾತನಾಡದಂತೆ ಪಕ್ಷದ ಶಿಸ್ತಿನ ಕಾರಣದಿಂದ ಕಟ್ಟಿಹಾಕಲಾಗಿತ್ತು. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ನೆರವಾಗುತ್ತಿದ್ದರು ಎಂದು ತಿಳಿಸಿದ್ದಾರೆ. ಮಹಾಜನ್ ಹೇಳಿಕೆಯನ್ನು ಮಧ್ಯಪ್ರದೇಶದ ಆರೋಗ್ಯ ಸಚಿವ ತುಳಸೀರಾಮ್ ಸಿಲಾವತ್ ಸ್ವಾಗತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News