ಕಾಂಗ್ರೆಸ್-ಜೆಡಿಎಸ್ ಮುಳುಗುತ್ತಿರುವ ಹಡಗು: ಸಚಿವ ಈಶ್ವರಪ್ಪ

Update: 2019-12-03 12:34 GMT

ವಿಜಯಪುರ, ನ.3: ಜೆಡಿಎಸ್-ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಹೀಗಾಗಿ ಆ ಪಕ್ಷದ ಶಾಕಸರು ಬಿಜೆಪಿಗೆ ಬರುತ್ತಿದ್ದಾರೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಮುಳುಗುತ್ತಿರುವ ಹಡಗಾಗಿದ್ದು, ಒಬ್ಬರಿಗೊಬ್ಬರು ಅಪ್ಪಿಕೊಂಡೇ ಮುಳುಗುತ್ತಾರೆಯೇ ಹೊರತು ಯಾವುದೇ ಕಾರಣಕ್ಕೂ ಬದುಕುವುದಿಲ್ಲವೆಂದು ವ್ಯಂಗ್ಯವಾಡಿದರು.

ಮುಳುಗುತ್ತಿರುವ ಹಡಗಿನಲ್ಲಿ ಯಾರು ಇರುತ್ತಾರೆ ಎಂಬ ಕಾರಣಕ್ಕಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ಅನರ್ಹ ಶಾಸಕರು ರಾಜೀನಾಮೆ ನೀಡಿದ್ದರಿಂದಲೇ ಬಿಜೆಪಿ ಸರಕಾರ ರಚನೆಯಾಗಿದೆ. ಈ ಅನರ್ಹ ಶಾಸಕರ ಋಣ ತೀರಿಸುವ ಉದ್ದೇಶದಿಂದ ಅವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿ ಎಂದು ಅವರು ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಎಲ್ಲರನ್ನೂ ಬೈಯುವ ಚಾಳಿ ಇದೆ. ಹೀಗಾಗಿ, ಸದಾ ಪ್ರಧಾನಿ ನರೇಂದ್ರಮೋದಿಯನ್ನು ಬಯ್ಯುತ್ತಾರೆ. ಈ ರೀತಿ ಬಯುತ್ತಿರುವವರಿಗೆ ಜನರು ಮತ ಹಾಕುವುದಿಲ್ಲ. ಕೆಲಸ ಮಾಡಿದವರಿಗೆ ಆಶೀರ್ವಾದ ಮಾಡುತ್ತಾರೆ ಎಂಬುದನ್ನು ಇಲ್ಲಿನ ಜನರು ಸಾಬೀತುಪಡಿಸುವ ಘಳಿಗೆ ಬಂದಿದೆ ಎಂದು ಅವರು ಹೇಳಿದರು. 

ರಾಜಕಾರಣಿಗಳ ಹನಿಟ್ರ್ಯಾಪ್ ಪ್ರಕರಣದಲ್ಲಿ ಯಾವುದೇ ಶಾಸಕರ ಹೆಸರು ಬಹಿರಂಗವಾಗಿಲ್ಲ. ಈ ಬಗ್ಗೆ ಸರಕಾರ ಸೂಕ್ತ ಕ್ರಮಕೈಗೊಳ್ಳಲಿದೆ. ವೀಡಿಯೊ ತುಣುಕುಗಳನ್ನು ಡಿಲಿಟ್ ಮಾಡುವ ಕುರಿತು ಒತ್ತಡ ಹಾಕಲಾಗುತ್ತಿದೆ ಎಂಬುದು ಕೇವಲ ವದಂತಿಗಳಷ್ಟೆ ಎಂದು ಅವರು ಹೇಳಿದರು. ಈ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳಾಗಿದ್ದರೂ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು.

-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News