ಪೊಲೀಸ್ ಲಾಂಛನದ ಕಾರಿನಲ್ಲೇ ಶಾಲಾ ವಿದ್ಯಾರ್ಥಿನಿಯ ಅಪಹರಣ, ಅತ್ಯಾಚಾರ

Update: 2019-12-04 03:53 GMT

ವಾರಣಾಸಿ, ಡಿ.4: ಪೊಲೀಸ್ ಲಾಂಛನವಿದ್ದ ಕಾರಿನಲ್ಲೇ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಹಾಗೂ ನಿವೃತ್ತ ಜೈಲು ಅಧಿಕಾರಿಯ ಪುತ್ರ ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಈ ಘಟನೆ ನಡೆದಿದೆ.

ಎಲ್ಲ ನಾಲ್ವರು ಆರೋಪಿಗಳ ವಿರುದ್ಧ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ ಎಂದು ಹಲಿಯಾ ಠಾಣೆಯ ಇನ್‌ಸ್ಪೆಕ್ಟರ್ ದೇವೇಂದ್ರ ಶುಕ್ಲಾ ಹೇಳಿದ್ದಾರೆ.

ಮಿರ್ಝಾಪುರದಿಂದ 50 ಕಿಲೋಮೀಟರ್ ದೂರದ ಹಲಿಯಾ ಎಂಬಲ್ಲಿನ ನಿರ್ಜನ ಪ್ರದೇಶಕ್ಕೆ 15 ವರ್ಷದ ವಿದ್ಯಾರ್ಥಿನಿಯನ್ನು ಸೋಮವಾರ ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಎಸಗಲಾಗಿದೆ. ನವೆಂಬರ್ 28ರಂದು ಹೈದರಾಬಾದ್‌ನಲ್ಲಿ ಪಶು ವೈದ್ಯೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣ ಸೇರಿದಂತೆ ಇತ್ತೀಚಿನ ವಾರಗಳಲ್ಲಿ ಮಕ್ಕಳು ಹಾಗೂ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿರುವ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ ಇಂಥ ಮತ್ತೊಂದು ಪ್ರಕರಣ ವರದಿಯಾಗಿದೆ.

ಆರೋಪಿಗಳ ಪೈಕಿ ಜೈಪ್ರಕಾಶ್ ಮೌರ್ಯ ಎಂಬಾತ ನಿವೃತ್ತ ಜೈಲು ಅಧಿಕಾರಿ ಬ್ರಿಜ್‌ಲಾಲ್ ಮೌರ್ಯ ಎಂಬುವವರ ಪುತ್ರ. ಜೈಪ್ರಕಾಶ್‌ನ ಸಹೋದರಿ ವಿವಾಹದ ಬಳಿಕ ಹಲಿಯಾ ಗ್ರಾಮದಲ್ಲಿ ಇದ್ದಳು. ಆರೋಪಿ ಅಲ್ಲಿಗೆ ಹೋಗಿದ್ದಾಗ ಹದಿಹರೆಯದ ವಿದ್ಯಾರ್ಥಿನಿಯ ಸ್ನೇಹ ಬೆಳೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಜೈಪ್ರಕಾಶ್ ವಿದ್ಯಾರ್ಥಿನಿಗೆ ಕರೆ ಮಾಡಿ, ಗ್ರಾಮದ ಹೊರವಲಯದಲ್ಲಿ ಕಾಯುತ್ತಿದ್ದು, ಮನೆಯಿಂದ ಹೊರಟು ಬರುವಂತೆ ಕೇಳಿದ್ದಾನೆ. ಅಲ್ಲಿ ಮೂವರು ಸ್ನೇಹಿತರ ಜತೆ ಕಾರಿನಲ್ಲಿ ಕಾಯುತ್ತಿದ್ದ. ಕಾರಿಗೆ ವಿದ್ಯಾರ್ಥಿನಿಯನ್ನು ಬಲವಂತವಾಗಿ ಸೆಳೆದುಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಾಲ್ವರೂ ಅತ್ಯಾಚಾರ ನಡೆಸಿದರು ಎಂದು ಸಂತ್ರಸ್ತೆಯ ತಂದೆ ದೂರು ನೀಡಿದ್ದಾರೆ.

ವಿದ್ಯಾರ್ಥಿನಿ ಹಾಗೂ ನಾಲ್ವರು ಆರೋಪಿಗಳು ಪ್ರಯಾಣಿಸುತ್ತಿದ್ದ ಕಾರನ್ನು ಕರ್ತವ್ಯದಲ್ಲಿದ್ದ ಪೊಲೀಸ್ ತಪಾಸಣೆಗಾಗಿ ನಿಲ್ಲಿಸಿದ್ದ. ಈ ಕಾರು ಜೈಪ್ರಕಾಶ್ ಮೌರ್ಯನಿಗೆ ಸೇರಿದ್ದು, ಇದರಲ್ಲಿ ಪೊಲೀಸ್ ಲಾಂಛನವನ್ನು ಹೇಗೆ ಮುದ್ರಿಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಕಾರು ತಡೆದಾಗ ಬಾಲಕಿ ಅಳುತ್ತಿದ್ದಳು. ತಕ್ಷಣ ಪೊಲೀಸ್‌ ಪೇದೆ ಎಲ್ಲ ಐದು ಮಂದಿಯನ್ನೂ ಠಾಣೆಗೆ ಕರೆತಂದ ಎಂದು ಹೇಳಲಾಗಿದೆ. ಬಾಲಕಿಯ ಹೇಳಿಕೆ ಮೇರೆಗೆ ಜೈಪ್ರಕಾಶ್, ಲವಕುಮಾರ್ ಮಾಲ್, ಗಣೇಶ್ ಪ್ರಸಾದ್ ಮತ್ತು ಸುಲ್ತಾನಪುರದಲ್ಲಿ ಕರ್ತವ್ಯದಲ್ಲಿದ್ದ ಸಿಆರ್‌ಪಿಎಫ್ ಪೇದೆ ಮಹೇಂದ್ರ ಕುಮಾರ್ ಯಾದವ್ ಎಂಬುವವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News