​ಅಮೆರಿಕ ಅಧ್ಯಕ್ಷೀಯ ಚುನಾವಣೆ ರೇಸ್‌ನಿಂದ ಭಾರತೀಯ ಮೂಲದ ಮಹಿಳೆ ಔಟ್!

Update: 2019-12-04 03:48 GMT

ವಾಷಿಂಗ್ಟನ್, ಡಿ.4: ಅಮೆರಿಕದ ಅಧ್ಯಕ್ಷೀಯ ಚುನಾವಣೆ ರೇಸ್‌ನ ಮುಂಚೂಣಿಯಲ್ಲಿದ್ದ ಭಾರತೀಯ ಮೂಲದ ಕಮಲಾ ಹ್ಯಾರೀಸ್ ದಿಢೀರನೇ ಕಣದಿಂದ ಹಿಂದೆ ಸರಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸೋಲುಣಿಸುವ ಸಾಮರ್ಥ್ಯವಿರುವ ಮಹಿಳಾ ಅಭ್ಯರ್ಥಿ ಎಂದೇ ಕ್ಯಾಲಿಫೋರ್ನಿಯಾ ಸೆನೆಟರ್ ಕಮಲಾ ಹ್ಯಾರೀಸ್ ಅವರನ್ನು ಬಿಂಬಿಸಲಾಗಿತ್ತು.

ಅಧ್ಯಕ್ಷೀಯ ಚುನಾವಣೆ ಪ್ರಚಾರಕ್ಕೆ ಬೇಕಾದ ಸಂಪನ್ಮೂಲ ಕ್ರೋಢೀಕರಿಸಲು ಸಾಧ್ಯವಾಗಿಲ್ಲ ಎಂಬ ಕಾರಣ ನೀಡಿ ಸ್ಪರ್ಧೆಯ ರೇಸ್‌ನಿಂದ ಹ್ಯಾರೀಸ್ ಹಿಂದೆ ಸರಿದಿದ್ದಾರೆ. "ಕಳೆದ ಕೆಲ ದಿನಗಳಿಂದ ಎಲ್ಲ ಕೋನಗಳಿಂದಲೂ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇನೆ. ಆದರೆ ಕೊನೆಗೆ ನನ್ನ ಜೀವನದ ಅತ್ಯಂತ ಕಠಿಣ ನಿರ್ಧಾರ ಕೈಗೊಳ್ಳುತ್ತಿದ್ದೇನೆ" ಎಂದು ಹ್ಯಾರಿಸ್ ಹೇಳಿಕೆ ನೀಡಿದ್ದಾರೆ.

"ಅಧ್ಯಕ್ಷ ಚುನಾವಣೆಯ ರೇಸ್‌ನಲ್ಲಿ ಮುಂದುವರಿಯಲು ಬೇಕಾದ ಅಗತ್ಯ ಹಣಕಾಸು ಸಂಪನ್ಮೂಲ ನನ್ನಲ್ಲಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೂ ಮುನ್ನ ನ್ಯೂಯಾರ್ಕ್‌ನಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ನಿಧಿ ಸಂಗ್ರಹ ಕಾರ್ಯಕ್ರಮವನ್ನು ಹ್ಯಾರೀಸ್ ದಿಢೀರ್ ರದ್ದು ಮಾಡಿದ್ದಾಗಿ ಸಿಎನ್‌ಬಿಸಿ ವರದಿ ಮಾಡಿತ್ತು. ಮಂಗಳವಾರ ದಿಢೀರನೇ ಪ್ರಚಾರ ಕಾರ್ಯಕ್ರಮಗಳನ್ನು ರದ್ದುಪಡಿಸಿರುವುದಾಗಿ ಹ್ಯಾರೀಸ್ ತಮ್ಮ ಸಿಬ್ಬಂದಿಗೆ ಹೇಳಿದರು.

55 ವರ್ಷ ವಯಸ್ಸಿನ ಭಾರತೀಯ ಮೂಲದ ಹ್ಯಾರೀಸ್, 2020ರ ಚುನಾವಣೆಗೆ ರಾಷ್ಟ್ರಮಟ್ಟದಲ್ಲಿ ಮಾಧ್ಯಮದ ಗಮನ ಸೆಳೆದ ಏಕೈಕ ಕಪ್ಪು ಮಹಿಳೆ ಎನಿಸಿಕೊಂಡಿದ್ದರು. ಕಳೆದ ಜನವರಿಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗುವ ಇಂಗಿತ ವ್ಯಕ್ತಪಡಿಸಿದಾಗ ಪಕ್ಷದ ಸಹೋದ್ಯೋಗಿಗಳಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿತ್ತು. ಸ್ವತಃ ಅಧ್ಯಕ್ಷ ಟ್ರಂಪ್ ಇವರನ್ನು ಅಭಿನಂದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News