ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ಕೆಎಸ್ ಸಿಎ ಸದಸ್ಯ ಸುಧೀಂಧ್ರ ಶಿಂಧೆ ಬಂಧನ

Update: 2019-12-04 12:45 GMT

ಬೆಂಗಳೂರು, ಡಿ.4: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಬೆಟ್ಟಿಂಗ್ ಪ್ರಕರಣ ಸಂಬಂಧ ಮಾಜಿ ರಣಜಿ ಆಟಗಾರ, ಬೆಳಗಾವಿ ಪ್ಯಾಂಥರ್ಸ್ ತಂಡದ ಕೋಚ್ ಸುಧೀಂದ್ರ ಶಿಂಧೆಯನ್ನು ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ನಗರದ ದೊಮ್ಮಲೂರು ಮುಖ್ಯ ರಸ್ತೆಯಲ್ಲಿರುವ ಸುಧೀಂದ್ರ ಶಿಂಧೆ ಅವರ ಮನೆಯ ಮೇಲೆ ಮಂಗಳವಾರ ಸಿಸಿಬಿ ಪೊಲೀಸರು ದಾಳಿ ನಡೆಸಿ, ಕೆಲ ದಾಖಲೆಗಳನ್ನು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದ್ದರು. ಬಳಿಕ, ಆರೋಪಿಯ ಹೇಳಿಕೆಗಳನ್ನು ಆಧರಿಸಿ ಬುಧವಾರ ಬಂಧಿಸಲಾಗಿದೆ.

ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಪ್ರಮುಖ ಆರೋಪಿ ‘ಬೆಳಗಾವಿ ಪ್ಯಾಂಥರ್ಸ್’ ತಂಡದ ಮಾಲಕ ಅಲಿ ಅಶ್ಫಕ್ ತಾಹಿರ್ ಹೇಳಿಕೆ ಮೇಲೆ ಶಿಂಧೆಯನ್ನು ಬಂಧಿಸಲಾಗಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಆಡಳಿತ ಮಂಡಳಿ ಸದಸ್ಯರೂ ಆಗಿರುವ ಶಿಂಧೆ, ಹಲವು ಆಟಗಾರರ ಜೊತೆ ಉತ್ತಮ ಒಡನಾಟ ಹೊಂದಿದ್ದ. ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಮ್ಯಾಚ್ ಫಿಕ್ಸಿಂಗ್‌ಗೆ ಆಟಗಾರರನ್ನು ಸೆಳೆಯಲು ಯತ್ನಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಕೆಪಿಎಲ್ ಟೂರ್ನಿಗೆ ಆಟಗಾರರ ಆಯ್ಕೆ ಮಾಡಲು ಶಿಂಧೆ ಹಣ ಪಡೆಯುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ. ತನಗೆ ಹಣ ನೀಡಿದವರನ್ನಷ್ಟೇ ಕೆಪಿಎಲ್ ಪಂದ್ಯಗಳಿಗೆ ಅವಕಾಶ ನೀಡುತ್ತಿದ್ದ. ಅಷ್ಟೇ ಅಲ್ಲದೆ, ಆರೋಪಿಯು ನಗರದಲ್ಲಿ ರಾಕೆಟ್ ಕ್ಲಬ್ ನಡೆಸುತ್ತಿದ್ದು, 2017ರಿಂದ ಮ್ಯಾಚ್ ಫಿಕ್ಸಿಂಗ್‌ನಲ್ಲಿ ತೊಡಗಿದ್ದು, ಪ್ರಮುಖ ಬುಕ್ಕಿ ಆಲಿ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಸಿಸಿಬಿ ತಿಳಿಸಿದೆ.

ಕೆಪಿಎಲ್ ಕ್ರಿಕೆಟ್‌ನಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಶಿಂಧೆ ಸೇರಿ ಇದುವರೆಗೆ 9 ಮಂದಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.

ಕೆಪಿಎಲ್ ಟಿ-20 ರದ್ದು

ಕೆಪಿಎಲ್ ಬೆಟ್ಟಿಂಗ್ ಆರೋಪ ಪ್ರಕರಣ ಬೆಳಕಿಗೆ ಬಂದಿದ್ದು, ಇದುವರೆಗೂ ಕೋಚ್‌ಗಳು ಸೇರಿದಂತೆ ಆಟಗಾರರನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಹಿನ್ನೆಲೆಯಲ್ಲಿ 2020ನೇ ಸಾಲಿನ ಕೆಪಿಎಲ್ ಟಿ-20 ಪಂದ್ಯಾವಳಿಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ.

‘ತಪ್ಪಿತಸ್ಥರ ಮೇಲೆ ಕಠಿಣ ಕ್ರಮ’

ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಸಿಸಿಬಿ ತನಿಖೆಗೆ ನಾವು ಸಂಪೂರ್ಣವಾಗಿ ಬೆಂಬಲ ನೀಡುತ್ತೇವೆ. ಸ್ವಚ್ಛ ಮತ್ತು ಪಾರದರ್ಶಕ ಕ್ರಿಕೆಟ್ ನಡೆಸುವುದು ನಮ್ಮ ಧ್ಯೇಯ

-ರೋಜರ್ ಬಿನ್ನಿ, ಅಧ್ಯಕ್ಷ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News