ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ನೌಕರರ ಧರಣಿ

Update: 2019-12-04 18:32 GMT

ಮಂಡ್ಯ, ಡಿ.4: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡಗಿನಿಂದ ಆರಂಭಿಸಿರುವ ಅಂಗನವಾಡಿ ನೌಕರರ ಮೈಸೂರು ವಿಭಾಗೀಯ ಜಾಥಾ ಬುಧವಾರ ಮಂಡ್ಯಕ್ಕೆ ಆಗಮಿಸಿದಾಗ ಸಿಐಟಿಯು, ಇತರ ಸಂಘಟನೆಗಳ ಮುಖಂಡರು ಸ್ವಾಗತ ಕೋರಿದರು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ಸಮಾವೇಶಗೊಂಡು ನಂತರ, ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ನೌಕರರು, ಧರಣಿ ನಡೆಸಿ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಿದರು.

ಅಂಗನವಾಡಿ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು. ಅಂಗನವಾಡಿಗಳನ್ನು ಖಾಸಗೀಕರಣ ಮಾಡಬಾರದು, ಪೂರ್ವ ಪ್ರಾಥಮಿಕ (ಎಲ್‍ಕೆಜಿ, ಯುಕೆಜಿ) ಶಿಕ್ಷಣವನ್ನು ಅಂಗನವಾಡಿಗಳಲ್ಲೇ ಆರಂಭಿಸಬೇಕು ಎಂಬುದು ಜಾಥಾದ ಪ್ರಮುಖ ವಿಷಯಗಳಾಗಿವೆ.

ಕೇಂದ್ರ ಸರಕಾರದ ಖಾಸಗೀಕರಣ ನೀತಿಯಿಂದ ಆಹಾರ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗಾಗಿ ಇರುವ ಯೋಜನೆಗಳ ಪ್ರಮುಖ ಜವಾಬ್ಧಾರಿಗಳನ್ನು ಬೇರೆಡೆಗೆ ವಾರ್ಗಾಯಿಸುವ ಮೂಲಕ ಬಲಹೀನಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಸಂಘಟನೆಯ ಮುಖಂಡರು ಆರೋಪಿಸಿದರು. ಸರಕಾರದ ನೀತಿಯಿಂದಾಗಿ ಸಾವಿರಾರು ಮಹಿಳೆಯರು ಕೆಲಸ ಕಳೆದುಕೊಂಡು ಐಸಿಡಿಎಸ್ ಯೋಜನೆ ತನ್ನ ಉದ್ದೇಶ ಕಳೆದುಕೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸರಕಾದ ಈ ನೀತಿಯ ವಿರುದ್ಧ ಉಗ್ರವಾದ ಹೋರಾಟ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಈಗಾಗಲೇ ಹಲವು ಭಾರಿ ಸಂಬಂಧಿಸಿದವರೊಡನೆ ಚರ್ಚಿಸಿ ಮನವಿ ಕೊಟ್ಟಿದ್ದೇವೆ. ಆದರೆ, ಬೇಡಿಕೆಗೆ ಸ್ಪಂದಿಸದೆ ಇರುವುದರಿಂದ ಅನಿರ್ಧಿಷ್ಟಾವಧಿ ಹೋರಾಟಕ್ಕೆ ತೀರ್ಮಾನಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದರು.

30 ಜಿಲ್ಲೆಗಳನ್ನೊಳಗೊಂಡ 6 ಜಾಥಾಗಳನ್ನು ನಡೆಸಿ ಅಂತಿಮವಾಗಿ ಡಿ.10 ರಿಂದ ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿ ಅನಿರ್ಧಿಷ್ಟಾವಧಿ ಹೋರಾಟ ನಡೆಸಲಾಗುವುದು. ಸುಮಾರು 50 ಸಾವಿರ ನೌಕರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದ, ಜಿಲ್ಲಾಧ್ಯಕ್ಷೆ ಜಯಲಕ್ಷ್ಮಮ್ಮ, ಸಿಐಟಿಯು ಜಿಲ್ಲಾಧ್ಯಕ್ಷ ಎಂ.ಎಂ.ಶಿವಕುಮಾರ್, ಪ್ರಧಾನ  ಕಾರ್ಯದರ್ಶಿ ಸಿ.ಕುಮಾರಿ, ಕರ್ನಾಟಕ ಪ್ರಾಂತ ರೈತಸಂಘದ ಟಿ.ಯಶವಂತ್, ರೈತನಾಯಕಿ ಸುನಂದ ಜಯರಾಂ, ಲತಾ, ಮಹದೇವಮ್ಮ, ಪ್ರಮೀಳ ಕುಮಾರಿ, ಜಯಶೀಲಾ, ಪುಷ್ಪಾವತಿ, ಎಂ.ರಾಜು, ಶಿಲ್ಪಶ್ರೀ, ಧನಲಕ್ಷ್ಮಿ, ಶಿವಮ್ಮ, ಇತರ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News