ಅಜಿತ್ ಪವಾರ್ ಗೆ ನೀರಾವರಿ ಹಗರಣಗಳಲ್ಲಿ ಕ್ಲೀನ್ ಚಿಟ್

Update: 2019-12-06 07:12 GMT

ಮುಂಬೈ: ಎನ್‍ಸಿಪಿ ನಾಯಕ ಹಾಗೂ ಮಾಜಿ ಜಲಸಂಪನ್ಮೂಲ ಸಚಿವ ಅಜಿತ್ ಪವಾರ್ ಅವರಿಗೆ ರಾಜ್ಯದ ನೀರಾವರಿ ಯೋಜನೆಗಳಲ್ಲಿ ನಡೆದಿದೆಯೆಂದು ಆರೋಪಿಸಲಾದ ಹಗರಣಗಳಲ್ಲಿ  ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳ ಕ್ಲೀನ್ ಚಿಟ್  ನೀಡಿದೆ.

ವಿದರ್ಭ ನೀರಾವರಿ ಹಗರಣ ಕುರಿತಾದ ಎಲ್ಲಾ ಆರೋಪಗಳಿಂದಲೂ ಪವಾರ್ ಅವರನ್ನು ಎಸಿಬಿ ಮುಕ್ತಗೊಳಿಸಿದೆ ಎಂಬುದು ನವೆಂಬರ್ 27ರಂದು ಅದು ಬಾಂಬೆ ಹೈಕೋರ್ಟಿಗೆ ಸಲ್ಲಿಸಿರುವ 16 ಪುಟಗಳ ಅಫಿಡವಿಟ್‍ನಲ್ಲಿ ಹೇಳಲಾಗಿದೆ.

ರಾಜ್ಯದಲ್ಲಿ ಶಿವಸೇನೆ, ಎನ್‍ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಭಾಗವಾಗಿರುವ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರಕಾರ ಅಧಿಕಾರ ವಹಿಸಿಕೊಳ್ಳುವ ಹಿಂದಿನ ದಿನ ಈ ಅಫಿಡವಿಟ್ ಸಲ್ಲಿಕೆಯಾಗಿದೆ.

ಅಜಿತ್ ಪವಾರ್ ಅವರು ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಕೈಕೊಟ್ಟು ಬಿಜೆಪಿಯ ದೇವೇಂದ್ರ ಫಡ್ನವೀಸ್ ಜತೆ ಕೈಜೋಡಿಸಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಿಗೇ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತೆಂದು ಈ ಹಿಂದೆ ವರದಿಯಾಗಿತ್ತು.

ಸಚಿವರಾಗಿದ್ದ ವೇಳೆ ವಿದರ್ಭ ನೀರಾವರಿ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿದ್ದ ಅಜಿತ್ ಪವಾರ್ ಅವರನ್ನು ಜಾರಿ ಏಜನ್ಸಿಗಳ ಕೃತ್ಯಗಳಿಗೆ ಜವಾಬ್ದಾರರನ್ನಾಗಿಸಲು ಸಾಧ್ಯವಿಲ್ಲ ಎಂದು ಅಫಿಡವಿಟ್‍ನಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News