ವಿವಾಹ ಸಮಾರಂಭದಲ್ಲಿ ನೃತ್ಯ ಮಾಡುವುದನ್ನು ನಿಲ್ಲಿಸಿದ ಯುವತಿಗೆ ಗುಂಡೇಟು

Update: 2019-12-06 09:36 GMT

ಮುಂಬೈ: ವಿವಾಹ ಸಮಾರಂಭವೊಂದರಲ್ಲಿ ನೃತ್ಯ ಮಾಡುವುದನ್ನು ನಿಲ್ಲಿಸಿದ ಯುವತಿಯ ಮುಖಕ್ಕೆ ವ್ಯಕ್ತಿಯೊಬ್ಬ ಗುಂಡು ಹೊಡೆದ ಘಟನೆ ಉತ್ತರ ಪ್ರದೇಶದ ಚಿತ್ರಕೂಟ್ ಎಂಬಲ್ಲಿ ಕಳೆದ ವಾರ ನಡೆದಿದ್ದು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ವೀಡಿಯೋದಲ್ಲಿ ಸೆರೆಯಾಗಿದ್ದು ಯುವತಿ ಇನ್ನೊಬ್ಬರೊಂದಿಗೆ ನೃತ್ಯ ತಂಡದ ಭಾಗವಾಗಿದ್ದಳು.

ಒಂದು ನಿಮಿಷ ಅವಧಿಯ ವೀಡಿಯೋ ಕ್ಲಿಪ್ ನಲ್ಲಿ ಮದ್ಯದ ನಶೆಯಲ್ಲಿದ್ದಂತೆ ಕಾಣುವ ವ್ಯಕ್ತಿಯೊಬ್ಬ, ಮಹಿಳೆ ನೃತ್ಯ ಮಾಡುವುದನ್ನು ನಿಲ್ಲಿಸುತ್ತಿದ್ದಂತೆಯೇ "ಗೋಲಿ ಚಲ್ ಚಾಯೇಗಿ" (ಗುಂಡು ಹಾರಿಸಲಾಗುವುದು) ಎಂದು ಹೇಳುವುದು ಕೇಳಿಸುತ್ತದೆ. ಆಗ ಇನ್ನೊಬ್ಬ ವ್ಯಕ್ತಿ "ಸುಧೀರ್ ಭಯ್ಯಾ,  ಆಪ್ ಗೋಲಿ ಚಲಾ ಹೀ ದೋ" (ಅಣ್ಣಾ, ಗುಂಡು ಹಾರಿಸಿಯೇ ಬಿಡಿ) ಎಂದು ಹೇಳುತ್ತಾನೆ.

ಆ ಕ್ಷಣ ಹಿಂದಿನಿಂದ ಮಹಿಳೆಯ ಮುಖಕ್ಕೆ ಗುಂಡು ಹಾರಿಸಲಾಗುತ್ತದೆ ಹಾಗೂ ಅಲ್ಲಿದ್ದವರೆಲ್ಲರೂ ಆಘಾತಗೊಳ್ಳುತ್ತಾರೆ.

ಈ ವೀಡಿಯೋವನ್ನು ಡಿಸೆಂಬರ್ 1ರಂದು ಟಿಕ್ರಾ ಗ್ರಾಮದಲ್ಲಿ ಗ್ರಾಮದ ಮುಖ್ಯಸ್ಥ ಸುಧೀರ್ ಸಿಂಗ್ ಪಟೇಲ್ ಎಂಬಾತನ ಪುತ್ರಿಯ ವಿವಾಹದ ಸಂದರ್ಭ ಚಿತ್ರೀಕರಿಸಲಾಗಿತ್ತು. ವೇದಿಕೆಯಲ್ಲಿದ್ದ ವರನ ಮಾವಂದಿರಾದ ಅಖಿಲೇಶ್ ಹಾಗೂ ಮಿಥಿಲೇಶ್ ಕೂಡ ಗಾಯಗೊಂಡಿದ್ದಾರೆ. ಗ್ರಾಮದ ಮುಖ್ಯಸ್ಥನ ಕುಟುಂಬ ಸದಸ್ಯರೊಬ್ಬರು ಗುಂಡು ಹಾರಿಸಿದ್ದರೆಂದು ತಿಳಿದು ಬಂದಿದೆ.

ಘಟನೆ ಕುರಿತಂತೆ ವರನ ದೊಡ್ಡಪ್ಪ ರಾಮ್ ಪ್ರತಾಪ್ ದೂರು ದಾಖಲಿಸಿದ್ದಾರೆ. ಆರೋಪಿಯ ಪತ್ತೆಗಾಗಿ ಬಲೆ ಬೀಸಲಾಗಿದೆ. ಗಾಯಾಳು ಯುವತಿ ಹೀನಾ (22)  ಈಗ ಚೇತರಿಸಿಕೊಳ್ಳುತ್ತಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News