ಸಿ.ಟಿ.ರವಿಗೆ ಕಾಳಜಿ ಇದ್ದರೆ ಬಾಬಾಬುಡನ್‍ ಗಿರಿ ವಿವಾದ ಬಗೆಹರಿಸಲಿ: ಎಚ್.ಎಚ್.ದೇವರಾಜ್

Update: 2019-12-06 18:07 GMT

ಚಿಕ್ಕಮಗಳೂರು, ಡಿ.6: ಬಾಬಾಬುಡನ್‍ಗಿರಿ ಹಿಂದೂ ಮುಸ್ಲಿಂ ಸಮುದಾಯದವರ ಧಾರ್ಮಿಕ ಸೌಹಾರ್ದ ಕೇಂದ್ರವಾಗಿದ್ದು, ಈ ಸೌಹಾರ್ದ ಕೇಂದ್ರದ ಸಮಸ್ಯೆಯನ್ನು ಸೌಹಾರ್ದಯುತವಾಗಿಯೇ ಬಗೆಹರಿಸಬೇಕು. ಈ ಸಂಬಂಧ ದತ್ತ ಜಯಂತಿ, ಶೋಭಾಯಾತ್ರೆಗಳಂತಹ ರಾಜಕೀಯ ಪ್ರೇರಿತ ಕಾರ್ಯಕ್ರಮಗಳು ಬಿಜೆಪಿ ಸರಕಾರದ ಅವಧಿಯಲ್ಲಿ ಹೆಚ್ಚು ನಡೆಯುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹಾಗೂ ಬಿಜೆಪಿ ಸರಕಾರಕ್ಕೆ ಇಚ್ಛಾಶಕ್ತಿ ಇದ್ದಲ್ಲಿ ನ್ಯಾಯಾಲಯದ ಆದೇಶದಂತೆ ಬಾಬಾಬುಡನ್‍ಗಿರಿ ವಿವಾದವನ್ನು ನ್ಯಾಯಾಲಯದ ಹೊರಗೆ ಸೌಹಾರ್ದಯುತವಾಗಿ ಬಗೆಹರಿಸಲು ಮುಂದಾಗಬೇಕೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಆಗ್ರಹಿಸಿದ್ದಾರೆ. 

ಶುಕ್ರವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಮುಸ್ಲಿಂ ಸಮುದಾಯಗಳ ಸೌಹಾರ್ದ ಸಾಮರಸ್ಯಕ್ಕೆ ಸಾಕ್ಷಿಯಾಗಿರುವ ಧಾರ್ಮಿಕ ಕೇಂದ್ರ ಬಾಬಾಬುಡನ್‍ಗಿರಿಯಲ್ಲಿ ಡಿ.10ರಿಂದ 12ರವರೆಗೆ ಜಿಲ್ಲಾಡಳಿತ ದತ್ತಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ದಿನಗಳಂದು ಮೂರು ದಿನಗಳ ಕಾಲ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧ ಮಾಡಿರುವುದಲ್ಲದೇ ನಗರದ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆಯ ನೆಪದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆದೇಶ ನೀಡಿರುವುದು ರಾಜಕೀಯ ಪ್ರೇರಿತವಾದ ವಿದ್ಯಮಾನವಾಗಿದೆ. 

ಈ ಆದೇಶದ ಮೂಲಕ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಬಿಜೆಪಿ ಸರಕಾರ ಸುಖಾಸುಮ್ಮನೆ ನಗರದ ನಾಗರಿಕರ ಮೇಲೆ ನಿರ್ಬಂಧ ಹೇರಲು, ವ್ಯಾಪಾರ ವಹಿವಾಟಿನ ಮೇಲೆ ಕಡಿವಾಣ ಹಾಕಲು ಮುಂದಾಗಿದೆ ಎಂದು ಅವರು ಆರೋಪಿಸಿದರು.

ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದ ಅವಧಿಯಲ್ಲಿ ಹಾಗೂ ಹಿಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸಚಿವ ರವಿ ಬಾಬಾಬುಡನ್‍ಗಿರಿ ಸಮಸ್ಯೆಯನ್ನು ಮುಂದಿಟ್ಟುಕೊಂಡು ಸುಖಾಸುಮ್ಮನೆ ಆರೋಪ ಮಾಡುತ್ತಾ ಹಿಂದೂ ವಿರೋಧಿ ಸರಕಾರ ಎಂದು ಹಣೆಪಟ್ಟಿಕಟ್ಟಿದ್ದರು. ಆದರೆ ಈ ಸರಕಾರಗಳ ಅವಧಿಯಲ್ಲಿ ದತ್ತಜಯಂತಿ ಸಂದರ್ಭ ನಗರದ ಸಾರ್ವಜನಿಕರಿಗೆ ಯಾವುದೇ ನಿರ್ಬಂಧ ಹೇರಿಲ್ಲ. ಯಾವದೇ ಗಲಾಟೆಗಳೂ ನಡೆದಿಲ್ಲ. ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ದತ್ತಜಯಂತಿ ಸಂದರ್ಭ ಏನೋ ಆಗಬಾರದ್ದು ಆಗುತ್ತದೆ ಎಂದು ಜನರಲ್ಲಿ ಭೀತಿ ಮೂಡಿಸುವ ಈ ಮೂಲಕ ರಾಜಕೀಯ ಲಾಭ ಪಡೆಯುವ ಹುನ್ನಾರವನ್ನು ಸಚಿವ ರವಿ ಮಾಡುತ್ತಿದ್ದಾರೆಂದು ದೇವರಾಜ್ ಆರೋಪಿಸಿದರು.

ಸಚಿವ ರವಿಗೆ ನಿಜವಾಗಿಯೂ ಬಾಬಾಬುಡನ್‍ಗಿರಿ ಸಮಸ್ಯೆಯನ್ನು ಬಗೆಹರಿಸುವ ಇಚ್ಛಾಶಕ್ತಿ ಇದ್ದಲ್ಲಿ ಅವರದೇ ಸರಕಾರದ ಅವಧಿಯಲ್ಲಿ ಬಿಜೆಪಿಯವರ ಮನೆಯಂಗಳದಲ್ಲಿರುವ ಬಾಬಾಬುಡನ್‍ಗಿರಿ ಸಮಸ್ಯೆಯ ಚೆಂಡನ್ನು ನ್ಯಾಯಾಲಯದ ಆದೇಶದಂತೆ ಎರಡೂ ಸಮುದಾಯಗಳ ಮುಖಂಡರನ್ನೊಳಗೊಂಡ ಸೌಹಾರ್ದ ಸಮಿತಿ ರಚಿಸಿ ಪರಸ್ಪರ ಮಾತುಕತೆ ಮೂಲಕ, ಸೌಹಾರ್ದಯುವವಾಗಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಈ ಧಾರ್ಮಿಕ ಸೌಹಾರ್ದ ಕೇಂದ್ರ ಹಿಂದೂ ಮುಸ್ಲಿಮರ ಸೌಹಾರ್ದ ಕೇಂದ್ರವಾಗಿಯೇ ಉಳಿಯಬೇಕು. ಈ ನಿಟ್ಟಿನಲ್ಲಿ ಸಚಿವ ಸಿ.ಟಿ.ರವಿ ಸೇರಿದಂತೆ ಬಜರಂಗದಳ, ವಿಎಚ್‍ಪಿ ಮುಖಂಡರು ಸರಕಾರದ ಮೇಲೆ ಒತ್ತಡ ಹೇರಿ ಕೂಡಲೇ ವಿವಾದವನ್ನು ಬಗೆಹರಿಸಬೇಕೆಂದು ಅವರು ಆಗ್ರಹಿಸಿದರು.

ಬಿಜೆಪಿಯವರಿಗೆ, ಸಿ.ಟಿ.ರವಿಗೆ ಹಿಂದುಗಳ ಬಗ್ಗೆ ನಿಜವಾಗಿಯೂ ಕಾಳಜಿ ಇಲ್ಲ. ಇವರು ಕಪಟ ಹಿಂದುತ್ವವಾದಿಗಳು. ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುವುದೇ ಇವರ ಗುರಿಯಾಗಿದೆ. ಜನರನ್ನು ಭಾವನಾತ್ಮಕವಾಗಿ ಒಡೆದಾಳುತ್ತಾ ಅಧಿಕಾರಕ್ಕಾಗಿ ರಾಜಕೀಯ ಮಾಡಿ ವಂಚಿಸುತ್ತಿದ್ದಾರೆ. ದತ್ತಪೀಠ ಹೋರಾಟದಿಂದ ಜಿಲ್ಲೆಯ ಜನರಿಗೆ ಯಾವ ಲಾಭವೂ ಆಗಿಲ್ಲ, ನಷ್ಟವಾಗಿರುವುದೇ ಹೆಚ್ಚು, ಲಾಭವಾಗಿದ್ದರೇ ಸಿಟಿ ರವಿಗೆ ಮಾತ್ರ ಎಂದು ಹೇಳಿದರು.

ದತ್ತಜಯಂತಿ ವೇಳೆ ನಡೆಯುವ ಶೋಭಾಯಾತ್ರೆಗಾಗಿ ಜಿಲ್ಲಾಡಳಿತ ಮೂರು ದಿನಗಳ ಕಾಲ ಜಿಲ್ಲಾದ್ಯಂತ ಮದ್ಯಮಾರಾಟ ನಿಷೇಧಿಸಿದೆ. ಅಲ್ಲದೇ ಶೋಭಾಯಾತ್ರೆ ವೇಳೆ ನಗರದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕೆಂದು ಆದೇಶ ಮಾಡಿರುವುದು ಬಿಜೆಪಿ ಸರಕಾರದ ಹಾಗೂ ಸಚಿವ ಸಿಟಿ ರವಿ ಅವರ ರಾಜಕೀಯ ಲಾಭ ಪಡೆಯುವ ಷಡ್ಯಂತ್ರದ ಭಾಗವಾಗಿದೆ ಎಂದು ಟೀಕಿಸಿದ ಅವರು, ನಗರದ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚುವುದರಿಂದ ಭಾರೀ ನಷ್ಟ ಅನುಭವಿಸಲಿದ್ದು, ಸರಕಾರಕ್ಕೆ ತೆರಿಗೆ ಪಾವತಿಸುವ ಈ ವ್ಯಾಪಾರಿಗಳಿಗಾಗುವ ನಷ್ಟವನ್ನು ಸರಕಾರ ತುಂಬಿಕೊಡುತ್ತದೆಯೇ ಎಂದು ಅವರು ಪ್ರಶ್ನಿಸಿದ್ದು, ಜಿಲ್ಲಾಡಳಿತ ಆದೇಶವನ್ನು ಮರುಪರಿಶೀಲನೆ ಮಾಡಬೇಕೆಂದು ಅವರು ಇದೇ ವೇಳೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಹೊಲದಗದ್ದೆ ಗಿರೀಶ್, ರಂಜಿತ್ ಮತ್ತಿತರರು ಉಪಸ್ಥಿತರಿದ್ದರು. 

ಜಿಲ್ಲೆಯಲ್ಲಿ ಈ ಬಾರಿ ಅತಿವೃಷ್ಟಿಯಿಂದ ಭಾರೀ ಪ್ರಮಾಣದಲ್ಲಿ ಸಾವು ನೋವಾಗಿದೆ. ಸಂತ್ರಸ್ತರಿಗೆ ಇದುವರೆಗೂ ಸೂಕ್ತ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕಾದ ಜಿಲ್ಲಾ ಪಂಚಾಯತ್ ಸದಸ್ಯರು ಕೇವಲ ಸ್ವಾರ್ಥಕ್ಕಾಗಿ ಕಾಲಹರಣ ಮಾಡಿದ ಘಟನೆ ಗುರುವಾರ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆದಿದೆ. ಇಂತಹ ಜಿಲ್ಲಾ ಪಂಚಾಯತ್ ಸದಸ್ಯರು ಜನವಿರೋಧಿಗಳಾಗಿದ್ದಾರೆ. ಜಿಪಂ ಅಧ್ಯಕ್ಷೆ ಹಾಗೂ ಸದಸ್ಯರನ್ನು ಜನರು ಆರಿಸಿರುವುದು ಜಗಳ ಮಾಡಿಕೊಳ್ಳಲು, ಮೋಜು ಮಾಡಲು ಅಲ್ಲ ಎಂಬುದನ್ನು ಅರಿಯಬೇಕಿದೆ. ಇಂತಹ ಘಟನೆಗಳಿಗೆ ಎಲ್ಲ ಪಕ್ಷಗಳ ಜಿಪಂ ಸದಸ್ಯರು ಆಸ್ಪದ ನೀಡಬಾರದು.

-ಎಚ್.ಎಚ್.ದೇವರಾಜ್

ಹೈದರಾಬಾದ್ ಎನ್‍ಕೌಂಟರ್ ಗೆ ಸ್ವಾಗತ

ಪ್ರಿಯಾಂಕ ರೆಡ್ಡಿ ಎಂಬ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಹತ್ಯೆಗೈದಿದ್ದ ನಾಲ್ವರು ಆರೋಪಿಗಳನ್ನು ಅಲ್ಲಿನ ಪೊಲೀಸರು ಶುಕ್ರವಾರ ಮುಂಜಾನೆ ಎನ್‍ಕೌಂಟರ್ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಮೂಲಕ ಅತ್ಯಾಚಾರಿ ಮನಸ್ಥಿತಿಯವರಿಗೆ ಕಾನೂನು ವ್ಯವಸ್ಥೆ ತಕ್ಕ ಸಂದೇಶ ನೀಡಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳಿಗೆ ಕೈ ಹಾಕುವವರು ಈ ಎನ್ ಕೌಂಟರ್ ನಿಂದಾಗಿ ಸ್ವಲ್ಪವಾದರೂ ಭೀತಿಗೊಳಗಾದುವುದರಲ್ಲಿ ಸಂಶಯವಿಲ್ಲ.
- ಎಚ್.ಎಚ್.ದೇವರಾಜ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News