ಅತ್ಯಾಚಾರ, ಕೊಲೆ ಆರೋಪಿಗಳ ಎನ್‍ಕೌಂಟರ್: ತನಿಖೆಗೆ ಜನವಾದಿ ಮಹಿಳಾ ಸಂಘಟನೆ ಒತ್ತಾಯ

Update: 2019-12-06 18:17 GMT
ಅತ್ಯಾಚಾರ, ಕೊಲೆ ಆರೋಪಿಗಳ ಎನ್‍ಕೌಂಟರ್ ನಡೆದ ಸ್ಥಳ

ಮಂಡ್ಯ, ಡಿ.6: ತೆಲಂಗಾಣ ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ವಿಚಾರಣೆ, ನ್ಯಾಯಲಯದ ಕಲಾಪಗಳು ಪ್ರಾರಂಭವಾಗುವ ಮುನ್ನವೇ ಎಲ್ಲಾ ಆರೋಪಿಗಳನ್ನು ಎನ್‍ಕೌಂಟರ್ ಮಾಡಿರುವುದಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದ್ದು, ಇಂತಹ ಪ್ರಕರಣಗಳಲ್ಲಿ ಪೊಲೀಸರನ್ನು ಹೊಣೆಗಾರರನ್ನಾಗಿಸುವ ಹಾಗೂ ಈ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸುವಂತೆ ಆಗ್ರಹಿಸಿದೆ.

ಈ ಸಂಬಂಧ ಸಂಘಟನೆ ರಾಜ್ಯಾಧ್ಯಕ್ಷೆ ದೇವಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಾರಂಭದಲ್ಲೇ ಆರೋಪಿಗಳು ಕಾಣೆಯಾಗಿದ್ದಾರೆಂದು ದೂರು ಬಂದಾಗಲೇ ಸ್ವೀಕರಿಸಲು ಪೊಲೀಸರು ತಕರಾರು ಮಾಡಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು ಎಂದಿದ್ದಾರೆ. ಒಂದೆಡೆ ಸಮಾಜದ ಪ್ರತಿಷ್ಠಿತ ವಲಯದಿಂದ ಆರೋಪಿಗಳನ್ನು ಹೊಡೆದು ಸಾಯಿಸಬೇಕು ಎಂಬ ಕೂಗು, ಇನ್ನೊಂದೆಡೆ ಕಾನೂನಿನ ಕೆಲಸಗಳು ಪ್ರಾರಂಭವಾಗುವ ಮೊದಲೇ ಆರೋಪಿಗಳನ್ನೇ ಮುಗಿಸಿಬಿಟ್ಟಿದ್ದು, ಆ ಮೂಲಕ ಕಪಟತನದಿಂದ ವ್ಯವಸ್ಥೆಯ ದೋಷ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಹಾಗೂ ಜನರ ದಿಕ್ಕುತಪ್ಪಿಸುವುದೇ ಎನ್‍ಕೌಂಟರ್ ಉದ್ದೇಶವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದೇ ಮುಂದುವರಿದರೆ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ವಿಕೃತಿಗಳು ಹಾಗೂ ಶಿಕ್ಷೆಯ ಪ್ರಮಾಣದ ಇಳಿಕೆಯಲ್ಲಿ ಯಾವುದೇ ಬದಲಾವಣೆ ಕಾಣುವುದು ಸಾಧ್ಯವಿಲ್ಲ. ಆದ್ದರಿಂದ ನ್ಯಾಯಾದಾನ ವ್ಯವಸ್ಥೆಯಲ್ಲಿ ತೀವ್ರ ಸುಧಾರಣೆಯನ್ನು ಮತ್ತು ಅತ್ಯಾಚಾರ ಸಂತ್ರಸ್ತರಿಗೆ ಸೂಕ್ತ ರಕ್ಷಣೆಯನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇತ್ತೀಚಿನ ಅತ್ಯಾಚಾರ, ಕೊಲೆ, ಕೊಲೆ ಯತ್ನದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರ ಕ್ರಿಯೆ ಮತ್ತು ನಿಷ್ಕ್ರಿಯೆ, ಆಡಳಿತ ವ್ಯವಸ್ಥೆಯ ಹಾಗೂ ನ್ಯಾಯ ವ್ಯವಸ್ಥೆಯ ಸಂಪೂರ್ಣ ವೈಫಲ್ಯವನ್ನು ತಮ್ಮ ಸಂಘಟನೆ ಖಂಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಧೈರ್ಯ ಮಾಡಿ ದೂರು ದಾಖಲಿಸಿದ ಉತ್ತರಪ್ರದೇಶದ ಉನ್ನಾವ್‍ನ ಅತ್ಯಾಚಾರ ಸಂತ್ರೆಸ್ತೆಯನ್ನು ಕೊಲೆ ಮಾಡುವ ಪ್ರಯತ್ನ ನಡೆದಿದೆ. ಹಾಗೆಯೇ ಎರಡನೇ ಪ್ರಕರಣದ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು ಸಂತ್ರಸ್ತೆಯ ಮೇಲೆ ಆಸಿಡ್ ಸುರಿದು ಕೊಲೆಗೆ ಯತ್ನಿಸಿದ ಘಟನೆಯೂ ವರದಿಯಾಗಿದೆ. ಅಲ್ಲಿ ಸಾಕ್ಷಿಯೂ ಆದ ಸಂತ್ರಸ್ತೆಯ ರಕ್ಷಣೆ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News