ಕರಾವಳಿಯ ಮೀನುಗಾರರಲ್ಲಿ ಆತಂಕ ಸೃಷ್ಟಿಸಿದ ಮತ್ಸ್ಯ ಕ್ಷಾಮ

Update: 2019-12-06 18:29 GMT

ಕಾರವಾರ, ಡಿ.5: ಮಳೆಗಾಲದ ಅಂತ್ಯದ ಅವಧಿಯಲ್ಲಿ ಉತ್ತಮ ಮತ್ಸ್ಯ ಬೇಟೆಯ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಕರಾವಳಿಯ ಮೀನುಗಾರರಿಗೆ ಸಂಪೂರ್ಣ ನಿರಾಸೆಯಾಗಿದೆ. ಲೈಟ್ ಫೀಶಿಂಗ್ ಸೇರಿದಂತೆ ಅವೈಜ್ಞಾನಿಕವಾಗಿ ಬೇರೆ ರಾಜ್ಯದ ಮೀನುಗಾರರು ಇಲ್ಲಿನ ಸಮುದ್ರ ವ್ಯಾಪ್ತಿಯಲ್ಲಿ ಮೀನುಗಾರಿಕೆ ಮಾಡುವುದರಿಂದ ಮತ್ಸ್ಯ ಸಂತತಿ ನಾಶವಾಗಿದೆ ಎನ್ನುವುದ ಮೀನುಗಾರರಲ್ಲಿ ಆತಂಕ ಸೃಷ್ಟಿ ಮಾಡಿದೆ.

ಜಿಲ್ಲೆಯ ಕರಾವಳಿಯ ಅರಬ್ಬೀ ಸಮುದ್ರವನ್ನೇ ನಂಬಿ ಸಾವಿರಾರು ಮೀನುಗಾರರು ಜೀವನ ನಡೆಸುತ್ತಿದ್ದಾರೆ. ಆದರೆ ಮಳೆಗಾಲ, ಹಾಗೂ ನಂತರದ ಅವಧಿಯಲ್ಲಿ ವಿವಿಧ ಜಾತಿಯ ಉತ್ತಮ ಮೀನು ಲಭಿಸುವ ಸಮಯ. ಆದರೆ ಇತ್ತೀಚಿನ ದಿನದಲ್ಲಿ ಅಲ್ಪ ಸ್ವಲ್ಪವೇ ಮೀನು ಲಭಿಸುತ್ತಿದ್ದರಿಂದ ಆಳ ಸಮುದ್ರದಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಿ ಮೀನುಗಾರಿಕೆ ಮಾಡುವವರಿಗೆ ನಷ್ಟ ತಂದಿದೆ. 

ಕರಾವಳಿಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳಲ್ಲಿನ ಮೀನುಗಾರಿಕಾ ಬಂದರುಗಳಲ್ಲಿ ತೀವ್ರ ಮತ್ಸ್ಯಕ್ಷಾಮ ಸೃಷ್ಟಿಯಾಗಿದ್ದು, ಹೆಚ್ಚಿನ ನಷ್ಟ ತಪ್ಪಿಸಿಕೊಳ್ಳಲು ಇಲ್ಲಿನ ಪರ್ಸೀನ್, ಟ್ರಾಲರ್ ಬೋಟ್‍ಗಳು ಶೇ.80 ರಷ್ಟು ಮೀನುಗಾರಿಕೆಯನ್ನೇ ನಿಲ್ಲಿಸಿದೆ. ಬೆರಳೆಣಿಕೆಯಷ್ಟು ಬೋಟುಗಳು ಮಾತ್ರ ಮೀನುಗಾರಿಕೆ ಮಾಡುತ್ತಿದ್ದು, ಆದರೆ ಇದರಿಂದ ಡೀಸೆಲ್ ಹಣವೂ ಸರಿದೂಗಿಸಿಕೊಳ್ಳಲು ಪರದಾಡುತ್ತಿದ್ದಾರೆ. 

ಇಲಾಖೆ ಎಷ್ಟೇ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಬೇರೆ ರಾಜ್ಯದ ಮೀನುಗಾರರು ಇಲ್ಲಿನ ಸಮುದ್ರದಲ್ಲಿ ಅವೈಜ್ಞಾನಿಕವಾಗಿ ಬುಲ್‍ಟ್ರಾಲ್ ಹಾಗೂ ಲೈಟ್ ಫಿಶಿಂಗ್ ನಡೆಸಿ ಅನೇಕ ಮೀನಿನ ಸಂತತಿಯನ್ನೇ ನಾಶವಾಗುವಂತೆ ಮಾಡಿದ್ದಾರೆ. ಅಕ್ಟೋಬರ್, ನವೆಂಬರ್ ತಿಂಗಳ ಅವಧಿಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮೀನುಗಾರಿಕೆಗೆ ತೆರಳಲಾಗದ ಸ್ಥಿತಿಯೇ ಸೃಷ್ಟಿಯಾಗಿದ್ದವು. ಆದರೆ ಈಗ ಮೀನುಗಾರಿಕೆ ತೆರಳಿದ್ದರೂ ಮೀನು ಲಭಿಸದೆ ಮೀನುಗಾರರ ಶ್ರಮಕ್ಕೂ ವ್ಯರ್ಥವಾಗುವಂತಾಗಿದೆ. ಇದರಿಂದಾಗಿ ಕರಾವಳಿಯ ಆಳ ಸಮುದ್ರ ಮೀನುಗಾರಿಕಾ ಬೋಟುಗಳು ಹೆಚ್ಚಿನ ನಷ್ಟದಿಂದ ತಪ್ಪಿಸಿಕೊಳ್ಳಲು ಮೀನುಗಾರಿಕೆಯನ್ನೇ ಸ್ಥಗಿತಗೊಳಿಸಿದೆ. 

ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಆಳಸಮುದ್ರದಲ್ಲಿ ದೊಡ್ಡಗಾತ್ರದ ಮೀನುಗಳನ್ನು ಅವುಗಳನ್ನು ಪ್ರತ್ಯೇಕಿಸಿ ತಿಂಗಳುಗಟ್ಟಲೆ ಫ್ರೀಜಿಂಗ್ ವ್ಯವಸ್ಥೆಯಲ್ಲಿಟ್ಟು ಅತೀ ದೊಡ್ಡ ಪ್ರಮಾಣದಲ್ಲಿ ದೇಶ-ವಿದೇಶಕ್ಕೆ ರಫ್ತು ಮಾಡುವ ಕಾರ್ಯವು ಸಾಕಷ್ಟು ಪ್ರಮಾಣದಲ್ಲಿತ್ತು. ಈ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ಹಿಡಿಯುವ ಮೀನುಗಳಲ್ಲಿ ಉತ್ತಮ ತಳಿ ಹಾಗೂ ದೊಡ್ದ ಮೀನುಗಳನ್ನು ಮಾತ್ರ ಉಳಿಸಿಕೊಂಡು, ಬಲೆಗೆ ಬೀಳುವ ಬೆಳೆಯುವ ಹಂತದಲ್ಲಿರುವ ಮೃತ ಸಣ್ಣ ಮೀನುಗಳನ್ನು ಸಮುದ್ರಕ್ಕೆ ಎಸೆಯಲಾಗುತ್ತದೆ. ಇದರಿಂದಾಗಿಯೇ ಇಂದು ಮೀನಿನ ಸಂತತಿಗಳ ನಾಶದಿಂದಾಗಿ ಮತ್ಸ್ಯಕ್ಷಾಮಕ್ಕೆ ದಾರಿಯಾದಂತಾಗಿದೆ. ಈ ಸಮಸ್ಯೆಗಳ ನಿವಾರಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಧೃಢವಾದ ಹೆಜ್ಜೆ ಕೈಗೊಳ್ಳಬೇಕಾಗಿದೆ.

ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ಅವೈಜ್ಞಾನಿಕವಾಗಿ ಬುಲ್‍ಟ್ರಾಲ್, ಲೈಟ್‍ಫಿಶಿಂಗ್ ನಿಷೇಧದ ಜೊತೆಗೆ ಬಹುರಾಷ್ಟ್ರೀಯ ಕಂಪನಿಗಳು ನಿರಂತರವಾಗಿ ಮೀನುಗಾರಿಕೆ ನಡೆಸುವುದನ್ನು ಸಂಪೂರ್ಣವಾಗಿ ತಡೆಯಬೇಕಾಗಿದೆ ಎನ್ನುವುದು ಸ್ಥಳೀಯ ಮೀನುಗಾರರ ಒತ್ತಾಯವಾಗಿದೆ.

ಮೀನುಗಾರಿಕೆ ನಷ್ಟದಿಂದಾಗಿ ಇದನ್ನೇ ನಂಬಿಕೊಂಡಿರುವ ಪರ್ಯಾಯ ಉದ್ಯಮಗಳು ಕೂಡ ತಮ್ಮ ಕಾರ್ಯ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿದೆ. ಪರ್ಯಾಯ ಉದ್ಯಮಗಳಲ್ಲಿ ಶಿಥಲೀಕರಣ ಘಟಕಗಳು, ಮೀನು ಖರೀದಿ ಏಜೆಂಟರು, ಕಾರ್ಮಿಕರು, ಸಗಟು ಮತ್ತುಚಿಲ್ಲರೆ ವ್ಯಾಪಾರ ಮಾಡುವ ಮಹಿಳೆಯರು ಸೇರಿದಂತೆ ಮತ್ಸ್ಯ ಕ್ಷಾಮದಿಂದಾಗಿ ದುಡಿಮೆ ಇಲ್ಲದೆ ಖಾಲಿ ಕುಳಿತುಕೊಳ್ಳುವಂತಾಗಿದೆ. ಅಲ್ಲದೆ ಕರಾವಳಿಯ ವಿವಿಧ ಪರ್ಶೀಯನ್ ಮೀನುಗಾರಿಕಾ ಬೋಟ್‍ಗಳಲ್ಲಿ ಕಾರ್ಯ ನಿರ್ವಹಿಸುವ ಖಾಖರ್ಂಡ್, ಓರಿಸ್ಸಾ ಸೇರಿದಂತೆ ಬೇರೆ ರಾಜ್ಯದ ಕಾರ್ಮಿಕರು ದುಡಿಮೆ ಇಲ್ಲದೆ ತಮ್ಮ ರಾಜ್ಯಕ್ಕೆ ವಾಪಸ್ಸಾಗಿದ್ದಾರೆ.

ಜಿಲ್ಲೆಯ ಕರಾವಳಿಯಲ್ಲಿ ಮಾತ್ರವಲ್ಲದೇ ಬೇರೆ ಭಾಗದಲ್ಲೂ ಮತ್ಸ್ಯಕ್ಷಾಮ ಎದುರಾಗಿದೆ. ಅನೇಕ ಮೀನುಗಾರರು ಸಾಲ ಮಾಡಿ ಫರ್ಸೀಯನ್ ಬೋಟ್ ಹೊಂದಿದ್ದಾರೆ. ಆದರೆ ಮತ್ಸ್ಯಕ್ಷಾಮದಿಂದ ಸಾಲ ತುಂಬಲಾಗದ ಸ್ಥಿತಿ ನಿರ್ಮಾಣವಾಗಿದೆ. ಅನ್ಯ ರಾಜ್ಯ ಕಾರ್ಮಿಕರಿಗೆ ಇಲ್ಲಿ ದುಡಿಮೆ ಇಲ್ಲದೆ ವಾಪಸ್ಸಾಗುತ್ತಿದ್ದಾರೆ. ಈ ಬಾರಿ ಅವಧಿಗೂ ಮುನ್ನ ಮೀನುಗಾರಿಕೆ ಸ್ಥಗಿತಗೊಂಡಿದ್ದು ಬಡ ಮೀನುಗಾರರಲ್ಲಿ ಆತಂಕ ಸೃಷ್ಠಿ ಮಾಡಿದೆ. 

- ವಿನಾಯಕ ಹರಿಕಂತ್ರ, ಯುವ ಮೀನುಗಾರ ಮುಖಂಡ 

ಅವೈಜ್ಞಾನಿಕ ಮೀನುಗಾರಿಕೆಗೆ ಕ್ರಮ

ಕರ್ನಾಟಕ ಕಡಲ ಮೀನುಗಾರಿಕೆ ಅಧೀನಿಯಮ 1986ರ ಅನ್ವಯ ಕರ್ನಾಟಕ ರಾಜ್ಯದ 12 ನಾಟಿಕಲ್ ಮೈಲ್‍ವರೆಗಿನ ಪ್ರದೇಶದಲ್ಲಿ ಬುಲ್‍ಟ್ರಾಲಿಂಗ್, 12 ನಾಟಿಕಲ್ ನಂತರ ಪ್ರದೇಶದಲ್ಲಿ ಬೆಳಕು ಮೀನುಗಾರಿಕೆ, ಚೌರಿ ಹಾಕಿ ಅಸಾಂಪ್ರದಾಯಿಕ ರೀತಿಯಲ್ಲಿ ಕಪ್ಪೆ ಬಂಡಾಸ್ ಮೀನು ಹಿಡಿಯುವುದು ನಿಷೇಧಿಸಲಾಗಿದೆ. ಪ್ರಕರಣಗಳು ಕಂಡುಬಂದರೆ ಕಾನೂನು ಕ್ರಮಕ್ಕೆ ಗುರಿಯಾಪಡಿಸಲಾಗುವುದು. ಅಲ್ಲದೆ ರಾಜ್ಯ ಮಾರಾಟ ಕರ ರಿಯಾಯತಿ ಡಿಸೇಲ್ ವಿತರಣೆ ನಿಲ್ಲಿಸುವುದು ಸೇರಿದಂತೆ, ದೋಣಿಯ ಮೀನುಗಾರಿಕೆ ಪರವಾನಿಗೆ ಮತ್ತು ನೊಂದಣಿಯನ್ನು ರದ್ದು ಪಡಿಸಲಾಗುವುದು.

-ಜಿಲ್ಲಾ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರು

Writer - ಶ್ರೀನಿವಾಸ್ ಬಾಡ್ಕರ್

contributor

Editor - ಶ್ರೀನಿವಾಸ್ ಬಾಡ್ಕರ್

contributor

Similar News