​ಜಾರ್ಖಂಡ್ ಸಿಎಂ ಭವಿಷ್ಯ ಇಂದು ನಿರ್ಧಾರ

Update: 2019-12-07 04:06 GMT

ರಾಂಚಿ: ಜಾರ್ಖಂಡ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಶನಿವಾರ ಆರಂಭವಾಗಿದ್ದು, ಮುಖ್ಯಮಂತ್ರಿ ರಘುವರದಾಸ್ ಸೇರಿದಂತೆ 260 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.

20 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಸಿಎಂ ಹೊರತಾಗಿ ಸ್ಪೀಕರ್ ದಿನೇಶ್ ಓರಾನ್, ಆಹಾರ ಪೂರೈಕೆ ಖಾತೆ ಮಾಜಿ ಸಚಿವ ಸರಯು ರಾಯ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮಣ್ ಗಿಲೂವಾ, ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವರು ಕಣದಲ್ಲಿರುವ ಇತರ ಪ್ರಮುಖರು. 48,25,038 ಮತದಾರರು ಎರಡನೇ ಹಂತದಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಮತದಾನ ಮಧ್ಯಾಹ್ನ 3ರವರೆಗೆ ನಡೆಯಲಿದ್ದು, ಜೆಮ್‌ಶೆಡ್‌ಪುರ ಪೂರ್ವ ಹಾಗೂ ಜೆಮ್‌ಶೆಡ್‌ಪುರ ಪಶ್ಚಿಮ ಕ್ಷೇತ್ರಗಳಲ್ಲಿ ಮಾತ್ರ ಸಂಜೆ 5ರವರೆಗೆ ಮತದಾನ ಇರುತ್ತದೆ. ಈ ಕ್ಷೇತ್ರಗಳಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಕ್ಯೂಆರ್ ಕೋಡ್ ಇರುವ ಮತದಾರರ ಚೀಟಿ ಹಾಗೂ ಬೂತ್ ಆ್ಯಪ್ ಬಳಸಲಾಗುತ್ತಿದೆ.

ಮುಖ್ಯಮಂತ್ರಿ ರಘುವರದಾಸ್ ಅವರು ಮಾಜಿ ಸಂಪುಟ ಸಹೋದ್ಯೋಗಿ ಹಾಗೂ ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಸರಯೂ ರಾಯ್ ಅವರಿಂದ ಜೆಮ್‌ಶೆಡ್‌ಪುರ ಪೂರ್ವ ಕ್ಷೇತ್ರದಲ್ಲಿ ಸ್ಪರ್ಧೆ ಎದುರಿಸುತ್ತಿದ್ದಾರೆ. ಸ್ಪೀಕರ್ ದಿನೇಶ್ ಓರಾನ್ ಅವರು ಸಿಸಾಯಿ ಕ್ಷೇತ್ರದಲ್ಲಿ ಜೆಎಂಎಂನ ಜಿಗ್ಗಾ ಸುಸರಣ್ ಹೊರೊ ಅವರಿಂದ ನೇರ ಸ್ಪರ್ಧೆ ಎದುರಿಸುತ್ತಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಲಕ್ಷ್ಮಣ್ ಗಿಲೂವಾ ಅವರಿಗೆ ಚಕ್ರಧಾರಪುರ ಕ್ಷೇತ್ರದಲ್ಲಿ ಜೆಎಂಎಂನ ಮಾಜಿ ಶಾಸಕ ಸುಖರಾಂ ಓರನ್ ಅವರಿಂದ ಕಠಿಣ ಸ್ಪರ್ಧೆ ಎದುರಾಗಿದೆ. ಹಾಲಿ ಬಿಜೆಪಿ ಶಾಸಕ ಶಶಿ ಭೂಷಣ್ ಸಮದ್ ಅವರು ಇಲ್ಲಿ ಈ ಬಾರಿ ಜೆವಿಎಂ-ಪಿ ಹುರಿಯಾಳು. ಎಜೆಎಸ್‌ಯು ಪಾರ್ಟಿ ಅಭ್ಯರ್ಥಿ ರಾಮ್‌ಲಾಲ್ ಮುಂಡಾ ಅವರ ಸ್ಪರ್ಧೆ ಕುತೂಹಲಕ್ಕೆ ಕಾರಣವಾಗಿದೆ. ಮತ್ತೆ ಅಧಿಕಾರಕ್ಕೆ ಬಂದರೆ ಚಕ್ರಧಾರಪುರವನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News