ಲಂಚ ಪಡೆದ ಆರೋಪ: ಹೈಕೋರ್ಟ್ ನ್ಯಾಯಾಧೀಶರ ಕಚೇರಿಗಳ ಮೇಲೆ ಸಿಬಿಐ ದಾಳಿ

Update: 2019-12-07 10:06 GMT

ಹೊಸದಿಲ್ಲಿ: ಲಕ್ನೋದ ಪ್ರಸಾದ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ ಪರ ತೀರ್ಪು ನೀಡುವ ಸಲುವಾಗಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಅಲಹಾಬಾದ್ ಹೈಕೋರ್ಟಿನ ಹಾಲಿ ನ್ಯಾಯಾಧೀಶ ನಾರಾಯಣ ಶುಕ್ಲಾ ಅವರ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿದೆ.

ಈ ಪ್ರಕರಣದಲ್ಲಿ ಜಸ್ಟಿಸ್ ಶುಕ್ಲಾ ಅವರನ್ನು ಪ್ರಮುಖ ಆರೋಪಿಯನ್ನಾಗಿ ಸಿಬಿಐ ಹೆಸರಿಸಿದ್ದರೆ, ಸೆಪ್ಟಂಬರ್ 2017ರಲ್ಲಿ ಬಂಧಿತರಾಗಿದ್ದ ಒಡಿಶಾ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಐ ಎಂ ಖುದ್ದುಸಿ ಹಾಗೂ ಭಾವನಾ ಪಾಂಡೆ, ಭಗವಾನ್ ಪ್ರಸಾದ್ ಸಹಿತ ನಾಲ್ಕು ಮಂದಿ ಇತರ ದಲ್ಲಾಳಿಗಳು ಇತರ ಆರೋಪಿಗಳಾಗಿದ್ದಾರೆ.

ಗುಣಮಟ್ಟದ ಸೌಲಭ್ಯಗಳ ಕೊರತೆ ಹಾಗೂ ಇತರ ಮಾನದಂಡಗಳನ್ನು ಪಾಲಿಸದ ಪ್ರಸಾದ್ ಇನ್‍ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಬಾರದು ಎಂದು ಕೇಂದ್ರ ಸರಕಾರ ಮೇ 2017ರಲ್ಲಿಯೇ ಸೂಚಿಸಿದ್ದರೂ  ಜಸ್ಟಿಸ್ ಶುಕ್ಲಾ ಅವರಿಗೆ ಲಂಚ ನೀಡಿ ಅನುಕೂಲಕರ ತೀರ್ಪು ಪಡೆದಿದೆ ಎಂಬ ಆರೋಪವಿದೆ.

ಜಸ್ಟಿಸ್ ಶುಕ್ಲಾ ಅವರ ಲಕ್ನೋ ನಿವಾಸ, ಖುದ್ದುಸಿ ಅವರ ದಿಲ್ಲಿ ನಿವಾಸ ಹಾಗೂ ಮೀರತ್‍ ನ ಒಂದು ಸ್ಥಳ ಸಹಿತ ಐದು ಇತರ ಕಡೆಗಳಲ್ಲಿ ಸಿಬಿಐ ದಾಳಿ ನಡೆಸಿ ಆರೋಪಿಗಳು ಮಾಡಿರುವ ಹೂಡಿಕೆಗಳಿಗೆ ಸಂಬಂಧಿಸಿದ ದಾಖಲೆಗಳ  ಸಹಿತ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ. ಭ್ರಷ್ಟಾಚಾರ ನಿಗ್ರಹ ಕಾಯಿದೆಯನ್ವಯ ಜಸ್ಟಿಸ್ ಶುಕ್ಲಾ ಹಾಗೂ ಖುದ್ದುಸಿ ವಿರುದ್ಧ  ಕ್ರಿಮಿನಲ್ ಸಂಚು ಆರೋಪ ಹೊರಿಸಲಾಗಿದೆ.

ಶುಕ್ಲಾ ಅವರನ್ನು ಸದ್ಯದಲ್ಲಿಯೇ ಬಂಧಿಸುವ ಸಾಧ್ಯತೆಯಿದ್ದು, ಹಾಲಿ ನ್ಯಾಯಾಧೀಶರೊಬ್ಬರು ಬಂಧನಕ್ಕೊಳಗಾಗುವ ಅಪರೂಪದ ಪ್ರಕರಣ ಇದಾಗಲಿದೆ. ಶುಕ್ಲಾ ವಿರುದ್ಧ ಕ್ರಮ ಕೈಗೊಳ್ಳಲು ಈ ವರ್ಷದ ಜುಲೈ ತಿಂಗಳಲ್ಲಿ ಅಂದಿನ ಸಿಜೆಐ ರಂಜನ್ ಗೊಗೊಯಿ ಸಿಬಿಐಗೆ ಹಸಿರು ನಿಶಾನೆ ನೀಡಿದ್ದರು. ಶುಕ್ಲಾ ಅವರನ್ನು ಹುದ್ದೆಯಿಂದ ಕೈಬಿಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೂ ಗೊಗೊಯಿ ಪತ್ರ ಬರೆದಿದ್ದರು,. ಜನವರಿ 2018ರಲ್ಲಿ ನ್ಯಾಯಾಲಯದ  ಆಂತರಿಕ ಸಮಿತಿಯೊಂದು ಜಸ್ಟಿಸ್ ಶುಕ್ಲಾ ಅವರನ್ನು ತಪ್ಪಿತಸ್ಥರೆಂದು ಗುರುತಿಸಿದ ನಂತರ ಈ ಬೆಳವಣಿಗೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News