ಎನ್‌ಕೌಂಟರ್ ಪರಿಶೀಲನೆಗೆ ಹೈದರಾಬಾದ್‌ಗೆ ಆಗಮಿಸಿದ ಎನ್‌ಎಚ್‌ಆರ್‌ಸಿ

Update: 2019-12-07 18:35 GMT
Photo: PTI

ಹೈದರಾಬಾದ್, ಡಿ. 7: ತೆಲಂಗಾಣದಲ್ಲಿ ಪಶುವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತರಾದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ರಾಷ್ಟ್ರೀಯ ಮಾನವ ಹಕ್ಕು ಆಯೋಗ (ಎನ್‌ಎಚ್‌ಆರ್‌ಸಿ) ದ ತಂಡ ಶನಿವಾರ ಇಲ್ಲಿಗೆ ಆಗಮಿಸಿದೆ.

ಎನ್‌ಎಚ್‌ಆರ್‌ಸಿ ತಂಡ ಮೊದಲು ಎನ್‌ಕೌಂಟರ್ ನಡೆದ ಸ್ಥಳ ಚಟ್ನಾಪಳ್ಳಿಗೆ ಭೇಟಿ ನೀಡಿ ಪರಿಶೀಲಿಸಿತು. ಅನಂತರ ನಾಲ್ವರು ಆರೋಪಿಗಳ ಮೃತದೇಹಗಳನ್ನು ಇರಿಸಲಾದ ಮೆಹಬೂಬ್‌ನಗರ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿತು.

ಪ್ರಕರಣದ ಬಗ್ಗೆ ಸ್ಥಳ ಪರಿಶೀಲನೆಗೆ ಸತ್ಯ ಶೋಧನ ತಂಡ ಕಳುಹಿಸುವಂತೆ ಎನ್‌ಎಚ್‌ಆರ್‌ಸಿ ತನ್ನ ಪ್ರಧಾನ ನಿರ್ದೇಶಕ (ತನಿಖೆ)ರಲ್ಲಿ ವಿನಂತಿಸಿತ್ತು. ಆರೋಪಿಗಳನ್ನು ಘಟನಾ ಸ್ಥಳಕ್ಕೆ ಪರಿಶೀಲನೆಗೆ ಕರೆದೊಯ್ಯುವ ಸಂದರ್ಭ ಪೊಲೀಸ್ ಸಿಬ್ಬಂದಿ ಸೂಕ್ತ ಎಚ್ಚರಿಕೆ ವಹಿಸಿಲ್ಲ ಹಾಗೂ ಅಹಿತಕರ ಘಟನೆಗಳ ನಡೆಯದಿರಲು ಸಿದ್ಧರಾಗಿರಲಿಲ್ಲ ಎಂಬುದನ್ನು ಈ ಎನ್‌ಕೌಂಟರ್ ಸೂಚಿಸಿದೆ ಎಂದು ಅದು ಹೇಳಿದೆ.

ನಾಲ್ವರು ಆರೋಪಿಗಳು ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿರುವುದರ ಬಗ್ಗೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಎನ್‌ಎಚ್‌ಆರ್‌ಸಿ, ಈ ಪ್ರಕರಣವನ್ನು ತುಂಬಾ ಸೂಕ್ಷ್ಮವಾಗಿ ತನಿಖೆ ನಡೆಸಬೇಕು ಎಂದು ಹೇಳಿದೆ.

 ‘‘ಪೊಲೀಸರ ಕಸ್ಟಡಿಯಲ್ಲಿದ್ದ ನಾಲ್ವರು ಆರೋಪಿಗಳು ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿರುವುದು ಆಯೋಗ ಕಳವಳ ಪಡುವ ವಿಚಾರ’’ ಎಂದು ಎನ್‌ಎಚ್‌ಆರ್‌ಸಿ ಹೇಳಿದೆ. ‘‘ಬಂಧಿತರು ತಪ್ಪು ಮಾಡಿದ್ದರೆ, ಅವರನ್ನು ಕಾನೂನಿನ ಪ್ರಕಾರ ಶಿಕ್ಷಿಸಬೇಕು’’ ಎಂದು ಆಯೋಗ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News