ಬ್ರಿಟನ್: ಸುದೀರ್ಘ ಕಾನೂನು ಹೋರಾಟದ ಬಳಿಕ 'ದತ್ತು ಸ್ವೀಕಾರ' ಹಕ್ಕು ಗೆದ್ದ ಸಿಕ್ಖ್ ದಂಪತಿ

Update: 2019-12-08 04:05 GMT

ಲಂಡನ್: ಜನಾಂಗೀಯ ತಾರತಮ್ಯಕ್ಕೆ ಒಳಗಾಗಿ ದತ್ತು ಸ್ವೀಕಾರ ಹಕ್ಕು ನಿರಾಕರಿಸಲ್ಪಟ್ಟ ಭಾರತೀಯ ಮೂಲದ ಸಿಕ್ಖ್ ದಂಪತಿ ಕೊನೆಗೂ ಸುದೀರ್ಘ ಕಾನೂನು ಹೋರಾಟದಲ್ಲಿ ಜಯ ಸಾಧಿಸಿದ್ದಾರೆ.

ಭಾರತೀಯ ಮೂಲದವರು ಎಂಬ ಕಾರಣಕ್ಕಾಗಿ ದತ್ತು ಪಡೆಯುವವರ ಆಂಗೀಕೃತ ಪಟ್ಟಿಯಲ್ಲಿ ಇವರ ಹೆಸರನ್ನು ನೋಂದಾಯಿಸಲು ರಾಯಲ್ ಬೋರೊ ಆಫ್ ವಿಂಡ್ಸರ್ ಅಂಡ್ ಮೇಡನ್‍ಹೆಡ್ ಕೌನ್ಸಿಲ್ ಇವರ ಅರ್ಜಿಯನ್ನು ತಿರಸ್ಕರಿಸಿತ್ತು. ಇದರಿಂದಾಗಿ ಸಂದೀಪ್ ಹಾಗೂ ರೀನಾ ಮಂದೆರ್ ದಂಪತಿ ಸಾಗರೋತ್ತರ ದೇಶಗಳಿಂದ ದತ್ತು ಪಡೆಯುವ ಅನಿವಾರ್ಯತೆಗೆ ಸಿಲುಕಿದ್ದರು.

ಕೇವಲ ಬಿಳಿಯ ಬ್ರಿಟಿಷ್ ಶಾಲಾಪೂರ್ವದ ಮಕ್ಕಳು ಮಾತ್ರ ದತ್ತು ಪಡೆಯಲು ಲಭ್ಯರಿದ್ದು, ನಿಮಗೆ ದತ್ತು ಪಡೆಯುವ ಅವಕಾಶ ಹೆಚ್ಚಬೇಕಾದರೆ ಭಾರತೀಯ ಉಪಖಂಡದತ್ತ ನೋಡುವುದು ಸೂಕ್ತ ಎಂದು ಬರ್ಕ್‍ಶೈರ್ ನ ಮೇಡನ್‍ಹೆಡ್‍ನಲ್ಲಿ ವಾಸವಿದ್ದ ಈ ದಂಪತಿಗೆ ತಿಳಿಸಲಾಗಿತ್ತು.

2016ರಲ್ಲಿ ಬಂದ ಈ ಆದೇಶದ ವಿರುದ್ಧ ದಂಪತಿ ಕಾನೂನು ಸಮರ ನಡೆಸಿದ್ದರು. ಸ್ಥಳೀಯ ಸಂಸದರು ಹಾಗೂ ಅಂದಿನ ಗೃಹ ಕಾರ್ಯದರ್ಶಿಯಾಗಿದ್ದ ತೆರೇಸಾ ಮೇ ಕೂಡಾ ಇದಕ್ಕೆ ಬೆಂಬಲಿಸಿದ್ದರು. ಸಮಾನತೆ ಮತ್ತು ಮಾಣವ ಹಕ್ಕುಗಳ ಆಯೋಗ ಕೂಡಾ ದಂಪತಿಯ ಬೆಂಬಲಕ್ಕೆ ನಿಂತಿತು. ಈ ತಾರತಮ್ಯಕ್ಕಾಗಿ ಸ್ಥಳೀಯ ಪ್ರಾಧಿಕಾರದ ನಿರ್ಧಾರದ ವಿರುದ್ಧ ದಂಪತಿ ದಾವೆ ಹೂಡಿದರು.

ನಾಲ್ಕು ದಿನಗಳ ಕಾಲ ವಿಚಾರಣೆ ನಡೆಸಿದ ಆಕ್‍ಫರ್ಡ್ ಕೌಂಟಿ ಕೋರ್ಟ್‍ನ ನ್ಯಾಯಾಧೀಶೆ ಮೆಲಿಸ್ಸಾ ಕ್ಲರ್ಕ್, ದಂಪತಿಯ ಪರವಾಗಿ ತೀರ್ಪು ನೀಡಿದ್ದಾರೆ. ಸುಮಾರು 30 ವರ್ಷ ವಯಸ್ಸಿನ ದಂಪತಿಗೆ 27 ಲಕ್ಷ ರೂಪಾಯಿ (29,454.42 ಪೌಂಡ್) ಸಾಮಾನ್ಯ ದಂಡ ಪಾವತಿಸುವಂತೆಯೂ ನ್ಯಾಯಾಲಯ, ಸ್ಥಳೀಯ ಪ್ರಾಧಿಕಾರಕ್ಕೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News