ದಿಲ್ಲಿಯಲ್ಲಿ ಅಗ್ನಿ ಅವಘಡ: ಮೃತರ ಸಂಖ್ಯೆ 43ಕ್ಕೆ ಏರಿಕೆ

Update: 2019-12-08 14:33 GMT

ಹೊಸದಿಲ್ಲಿ,ಡಿ.8: ದಿಲ್ಲಿಯ ಜನ ನಿಬಿಡ ಪ್ರದೇಶವಾದ ರಾಣಿ ಝಾನ್ಸಿ ರಸ್ತೆಯ ಅನಾಜ್ ಮಂಡಿಯಲ್ಲಿನ ಲಗೇಜ್ ತಯಾರಿಕೆ ಫ್ಯಾಕ್ಟರಿಯಲ್ಲಿ ರವಿವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ 43 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಹೆಚ್ಚಿನವರು ಕಾರ್ಮಿಕರಾಗಿದ್ದು ಮಲಗಿದಲ್ಲಿಯೇ ಚಿರನಿದ್ರೆಗೆ ಜಾರಿದ್ದಾರೆ.

ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮೃತರ ಕುಟುಂಬಗಳಿಗೆ ತಲಾ 10 ಲ.ರೂ. ಮತ್ತು ಗಾಯಾಳುಗಳಿಗೆ ತಲಾ ಒಂದು ಲ.ರೂ.ಪರಿಹಾರವನ್ನು ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಶೋಕವನ್ನು ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿರುವ ದಿಲ್ಲಿ ಸರಕಾರವು ಏಳು ದಿನಗಳಲ್ಲಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.

ನಸುಕಿನ ಐದು ಗಂಟೆಗೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,5:22ಕ್ಕೆ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನೆಯಾಗಿತ್ತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡು ಒಳಗೆ ಸಿಲುಕಿದ್ದ ಹಲವರನ್ನು ರಕ್ಷಿಸಿದರು. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಒಟ್ಟು 30 ಅಗ್ನಿಶಾಮಕ ಯಂತ್ರಗಳು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿವೆ.

ವಸತಿ ಪ್ರದೇಶದಲ್ಲಿಯ ಇಕ್ಕಟ್ಟಾದ ಬೀದಿಯಲ್ಲಿರುವ ಈ ಫ್ಯಾಕ್ಟರಿಯಲ್ಲಿ ದುರಂತ ಸಂಭವಿಸಿದ ವೇಳೆ ಸುಮಾರು 62 ಜನರಿದ್ದರು. ಈ ಪ್ರದೇಶದಲ್ಲಿಯ ಇಕ್ಕಟ್ಟಾದ ಓಣಿಗಳಲ್ಲಿ ಹಲವಾರು ಸಣ್ಣ ಫ್ಯಾಕ್ಟರಿಗಳು ಮತ್ತು ಗೋದಾಮುಗಳಿವೆ.

ಮೃತರಲ್ಲಿ ಹೆಚ್ಚಿನವರು ನಿದ್ರೆಯಲ್ಲಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಕೆಲವರು ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆವರಣದಲ್ಲಿ ಭಾರೀ ಪ್ರಮಾಣದಲ್ಲಿ ಸಂಗ್ರಹವಿದ್ದ ಪ್ಲಾಸ್ಟಿಕ್‌ಗೆ ಬೆಂಕಿ ಹತ್ತಿಕೊಂಡಿದ್ದರಿಂದ ಸ್ಥಳದಲ್ಲಿ ವಿಪರೀತ ಹೊಗೆ ತುಂಬಿಕೊಂಡಿತ್ತು. ಹೆಚ್ಚಿನ ಗಾಯಾಳುಗಳನ್ನು ಎಲ್‌ಎನ್‌ಜೆಪಿ ಮತ್ತು ಲೇಡಿ ಹಾರ್ಡಿಂಜ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

 ಬೆಂಕಿ ಅವಘಡದ ಮಾಹಿತಿ ತಿಳಿಯುತ್ತಲೇ ಭಾರೀ ಸಂಖ್ಯೆಯಲ್ಲಿ ಸ್ಥಳೀಯರು ಮತ್ತು ಕಾರ್ಮಿಕರ ಕುಟುಂಬದವರು ಘಟನಾ ಸ್ಥಳದಲ್ಲಿ ಜಮಾವಣೆಗೊಂಡಿದ್ದು ಕೋಲಾಹಲದ ಸ್ಥಿತಿ ಸೃಷ್ಟಿಯಾಗಿತ್ತು. ತಮ್ಮವರು ಎಲ್ಲಿದ್ದಾರೆ ಎನ್ನುವುದು ಗೊತ್ತಾಗದೇ ಹಲವರು ಪರದಾಡುತ್ತಿದ್ದರು.

ಘಟನೆಯ ನಂತರ ಹೊಸದಿಲ್ಲಿ ರೈಲ್ವೆ ನಿಲ್ದಾಣದ ಬಳಿಯ ರಾಣಿ ಝಾನ್ಸಿ ಫ್ಲೈ ಓವರ್‌ನಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು.

ದುರ್ಘಟನೆಯ ಕುರಿತು ತೀವ್ರ ಶೋಕವನ್ನು ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಅವರು,ಇದೊಂದು ಭೀಕರ ಘಟನೆ ಎಂದು ಬಣ್ಣಿಸಿದ್ದಾರೆ.

ಕೇಜ್ರಿವಾಲ್ ಭೇಟಿ

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕೇಜ್ರಿವಾಲ್ ಸಂತ್ರಸ್ತರಿಗೆ ಪರಿಹಾರವನ್ನು ಘೋಷಿಸಿದರಲ್ಲದೆ, ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಸರಕಾರವೇ ಭರಿಸುವ ಭರವಸೆಯನ್ನು ನೀಡಿದರು.

ಕಳೆದ ವರ್ಷ ಬವಾನಾದಲ್ಲಿ ಸಂಭವಿಸಿದ್ದ ಇಂತಹುದೇ ಅಗ್ನಿ ಅವಘಡದಲ್ಲಿ 17 ಜನರು ಮೃತಪಟ್ಟಿದ್ದ ಘಟನೆಯ ಬಳಿಕ ಇಂದಿನದು ಅತ್ಯಂತ ಭೀಕರ ಅಗ್ನಿ ದುರಂತವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News