​ರಾಜ್ಯ ರಾಜಕೀಯ ಭವಿಷ್ಯದ ದಿಕ್ಸೂಚಿ: ಮತ ಎಣಿಕೆಗೆ ಕ್ಷಣಗಣನೆ

Update: 2019-12-09 02:16 GMT

ಬೆಂಗಳೂರು : ತೀವ್ರ ಕುತೂಹಲ ಕೆರಳಿಸಿರುವ 15 ಕ್ಷೇತ್ರಗಳ ಚುನಾವಣೆಯ ಮತ ಎಣಿಕೆಗೆ ಸಕಲ ಸಿದ್ಧತೆ ನಡೆದಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರ ಹಾಗೂ 13 ಮಂದಿ ಅನರ್ಹ ಶಾಸಕರ ಭವಿಷ್ಯ ಇಂದು ಮಧ್ಯಾಹ್ನದ ವೇಳೆಗೆ ಸ್ಪಷ್ಟವಾಗಲಿದೆ. ಬೆಳಗ್ಗೆ 8ಕ್ಕೆ ಎಣಿಕೆ ಕಾರ್ಯ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ನಿರೀಕ್ಷಿಸಲಾಗಿದೆ.

ಅಧಿಕಾರದಲ್ಲಿ ಮುಂದುವರಿಯಲು ಬಿಜೆಪಿ ಕನಿಷ್ಠ ಆರು ಸ್ಥಾನಗಳನ್ನು ಗೆಲ್ಲಬೇಕು. ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಸ್ಪಷ್ಟ ಬಹುಮತ ಸಾಧಿಸುವ ವಿಶ್ವಾಸದಲ್ಲಿ ಬಿಜೆಪಿ ಮುಖಂಡರು ಇದ್ದಾರೆ. ಆರು ಸ್ಥಾನಗಳನ್ನು ಗೆದ್ದಲ್ಲಿ 223 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯಬಲ 112 ಆಗಲಿದೆ. ಮುಳಬಾಗಿಲು ಪಕ್ಷೇತರ ಶಾಸಕ ಹಾಗೂ ಅಬ್ಕಾರಿ ಸಚಿವ ಎಚ್.ನಾಗೇಶ್ ಆ ಪಕ್ಷದ ಬೆಂಬಲಕ್ಕಿದ್ದಾರೆ.

ಬಿಜೆಪಿಗೆ ವ್ಯತಿರಿಕ್ತ ಫಲಿತಾಂಶ ಬಂದಲ್ಲಿ ಕಾಂಗ್ರೆಸ್- ಜೆಡಿಎಸ್ ಮರು ಮೈತ್ರಿ ಸಾಧ್ಯತೆ ನಿಚ್ಚಳ. ಆಗ ಬಿಜೆಪಿ ಮತ್ತೆ ಅಪರೇಶನ್ ಕಮಲ ಆರಂಭಿಸಬಹುದು ಇಲ್ಲವೇ ರಾಷ್ಟ್ರಪತಿ ಆಡಳಿತ ಹೇರುವ ಚಿಂತನೆ ನಡೆಸಬಹುದು.

ಬಿಜೆಪಿ ಸ್ಥಾನಗಳನ್ನು ಐದಕ್ಕೆ ಸೀಮಿತಗೊಳಿಸುವ ನಿರೀಕ್ಷೆ ವಿರೋಧ ಪಕ್ಷಗಳದ್ದು. ಜೆಡಿಎಸ್ ಈ ಬಗ್ಗೆ ತುಂಬು ವಿಶ್ವಾಸದಲ್ಲಿದ್ದು, ಹೊಸ ಮೈತ್ರಿಕೂಟದಲ್ಲಿ ಮತ್ತೆ ಕಿಂಗ್‌ಮೇಕರ್ ಆಗಬಹುದು ಎಂಬ ಲೆಕ್ಕಾಚಾರದಲ್ಲಿದೆ. ಆಗ ಜೆಡಿಎಸ್‌ಗೆ ಬಿಜೆಪಿ ಜತೆ ಅಥವಾ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ಎರಡು ಅವಕಾಶಗಳಿರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News