ಅತ್ಯಾಚಾರ: ಪೊಲೀಸರ ಸಹಭಾಗಿತ್ವವೆಷ್ಟು?

Update: 2019-12-09 03:30 GMT

ಭಾರತ ತಲೆತಲಾಂತರದಿಂದ ಹೆಣ್ಣನ್ನು ಭೋಗವಸ್ತುವನ್ನಾಗಿಯೇ ನೋಡುತ್ತಾ ಬಂದಿದೆ. ಖುಜುರಾಹೋದಂತಹ ದೇವಸ್ಥಾನಗಳೇ ಅದಕ್ಕೆ ಉದಾಹರಣೆ. ದೇವರ ಹೆಸರಿನಲ್ಲಿ, ಸಂಸ್ಕೃತಿಯ ಹೆಸರಿನಲ್ಲಿ, ಆಚರಣೆ, ಸಂಪ್ರದಾಯದ ಹೆಸರಿನಲ್ಲಿ ಆಕೆಯ ಮೇಲೆ ಬೇರೆ ಬೇರೆ ರೀತಿಯಲ್ಲಿ ಅತ್ಯಾಚಾರ ನಡೆದಿದೆ. ಒಂದೆಡೆ ಹೆಣ್ಣನ್ನು ದೇವತೆಯೆಂದು ಕರೆಯುತ್ತಲೇ ಆಕೆಯನ್ನು ಪತಿಯ ಚಿತೆಗೆ ತಳ್ಳಲಾಗಿದೆ. ಧರ್ಮದ ಹೆಸರಿನಲ್ಲಿ ‘ದೇವದಾಸಿಯರನ್ನು’ ಹುಟ್ಟು ಹಾಕಿ ಅತ್ಯಾಚಾರಕ್ಕೆ ಧಾರ್ಮಿಕ ಮುಖವಾಡಗಳನ್ನು ನೀಡಿದ್ದೂ ಈ ನೆಲವೇ. ಒಂದಾನೊಂದು ಕಾಲದಲ್ಲಿ ಕೆಳಜಾತಿಯ ಹೆಣ್ಣು ಮಕ್ಕಳಿಗೆ ರವಿಕೆ ಹಾಕುವ ಹಕ್ಕು ಕೂಡ ಇರಲಿಲ್ಲ. ಹೆಣ್ಣು ತನ್ನ ಮಾನವನ್ನು ಮೇಲ್‌ಜಾತಿಯ ಜನರೆದುರು ಮುಚ್ಚುವುದೇ ದುರಹಂಕಾರದ ಸಂಕೇತವಾಗಿತ್ತು. ಇತ್ತ ಮೇಲ್‌ಜಾತಿಯ ಹೆಣ್ಣು ಮಕ್ಕಳ ಬದುಕಿನ ನೋವು ದುಮ್ಮಾನಗಳೇ ಇನ್ನೊಂದು ಬಗೆಯದಾಗಿದ್ದವು. ವಿಧವೆಯ ಹೆಸರಿನಲ್ಲಿ ಆಕೆ ಇನ್ನೂ ದೌರ್ಜನ್ಯಗಳನ್ನು ಎದುರಿಸುತ್ತಲೇ ಇದ್ದಾರೆ. ವಿಧವೆಯರಿಗಾಗಿಯೇ ಉತ್ತರ ಪ್ರದೇಶದ ವೃಂದಾವನದಲ್ಲಿ ಕೇರಿಯೊಂದನ್ನು ನಿರ್ಮಿಸಿದ ಹೆಮ್ಮೆ ನಮ್ಮದು. ಹೆಣ್ಣು ಪುರುಷರ ತೊತ್ತು ಎನ್ನುವ ಮನಸ್ಥಿತಿ ಇಂದಿಗೂ ಅಳಿದಿಲ್ಲ. ಆದುದರಿಂದಲೇ, ಒಬ್ಬ ಮಹಿಳೆ ಕಲಿತು ಉತ್ತಮ ಉದ್ಯೋಗಕ್ಕೆ ಸೇರಿ ಸ್ವಾವಲಂಬಿಯಾದರೆ ಪುರುಷನ ‘ಗಂಡಸುತನ’ಕ್ಕೆ ಎಲ್ಲೋ ಘಾಸಿಯಾಗುತ್ತದೆ. ಒಟ್ಟು ಮಹಿಳೆಯರ ಕುರಿತಂತೆಯೇ ಪುರುಷರಲ್ಲಿ ಈ ಧೋರಣೆಯಿರುವಾಗ, ಕೆಳ ಜಾತಿಯ ಅದರಲ್ಲೂ ದಲಿತ ಹೆಣ್ಣು ಗ್ರಾಮೀಣ ಪ್ರದೇಶದಲ್ಲಿ ಕಲಿತು ಪುರುಷನಿಗೆ ಸಮನಾಗಿ ನಿಂತರೆ ಅದರ ಪರಿಣಾಮ ಏನಾಗಬಹುದು? ಖೈರ್ಲಾಂಜಿಯಲ್ಲಿ ದಲಿತ ಹೆಣ್ಣು ಮಕ್ಕಳ ಮೇಲೆ ಇಡೀ ಗ್ರಾಮವೇ ಸೇರಿ ನಡೆಸಿದ ಅತ್ಯಾಚಾರ ಮತ್ತು ಬರ್ಬರ ಕೊಲೆ ಸಂಭವಿಸಿದ್ದ್ದು ಸಮಾಜದಲ್ಲಿ ಅವರು ಎಲ್ಲರಂತೆ ಬಾಳುವ ಕನಸು ಕಂಡ ಕಾರಣಕ್ಕಾಗಿ ಎನ್ನುವುದನ್ನು ಮರೆಯಬಾರದು. ಆ ದಲಿತ ಕುಟುಂಬದ ‘ಸೊಕ್ಕನ್ನು’ ಮುರಿಯಲು ಮತ್ತು ಉಳಿದ ದಲಿತರಿಗೆ ಎಚ್ಚರಿ ನೀಡಲು ಹತ್ಯಾಕಾಂಡವನ್ನು ಪ್ರಾಯೋಜಿಸಲಾಯಿತು. ಈ ದೇಶದಲ್ಲಿ ಅತ್ಯಾಚಾರ ಸುದ್ದಿಯಾಯಿತೆಂದರೆ, ಸಹಜವಾಗಿಯೇ ಅದು ನಡೆದಿರುವುದು ಒಂದೋ ನಗರದಲ್ಲಿ ಅಥವಾ ಮೇಲ್‌ಜಾತಿಯ ಮೇಲೆ ಮತ್ತು ಅತ್ಯಾಚಾರ ನಡೆಸಿದವರು ಕೆಳ ಜಾತಿಯ ಕೂಲಿ ಕಾರ್ಮಿಕರು. ಅತ್ಯಾಚಾರದ ಮೇಲಿನ ಆಕ್ರೋಶಕ್ಕಿಂತಲೂ ಇಲ್ಲಿ ಜಾತಿಯ ಹಿರಿಮೆ-ಕೀಳರಿಮೆಗಳೇ ಹೆಚ್ಚು ಕೆಲಸ ಮಾಡುತ್ತದೆ. ಇನ್ನು ಬಲಿಷ್ಠ ಜಾತಿಗಳೇ ಆಳುತ್ತಿರುವ ಉತ್ತರ ಭಾರತದಂತಹ ಸಮಾಜದಲ್ಲಿ ಇದು ಸಾಮಾನ್ಯ. ಅತ್ಯಾಚಾರಕ್ಕೊಳಗಾದ ಹೆಣ್ಣು ಅದನ್ನು ಸ್ವೀಕರಿಸಿ ಸುಮ್ಮನಿರದೆ ಪ್ರತಿಭಟಿಸುವುದು ತಮ್ಮ ಜಾತಿಯ ವಿರುದ್ಧ ತೋರುವ ಬಂಡಾಯವಾಗಿ ಮೇಲ್ ಜಾತಿಯ ಜನರು ಭಾವಿಸುತ್ತಾರೆ. ಆದುದರಿಂದಲೇ, ಜಮೀನ್ದಾರಿ ಮನಸ್ಥಿತಿಯಿರುವ ಸಮಾಜದಲ್ಲಿ ಅತ್ಯಾಚಾರಗೊಳಗಾದ ಹೆಣ್ಣು ಪ್ರತಿಭಟಿಸಿದರೆ ಇನ್ನಷ್ಟು ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಇಂದು ಈ ದೇಶದಲ್ಲಿ ಬಹಿರಂಗವಾದ ಅತ್ಯಾಚಾರ ಘಟನೆಗಳಿಗಿಂದ ಮುಚ್ಚಿ ಹೋದ ಅತ್ಯಾಚಾರ ಘಟನೆಗಳೇ ಹೆಚ್ಚಿವೆ. ಇದಕ್ಕೆ ಕಾರಣ ಇಂದಿಗೂ ಈ ದೇಶದ ಪೊಲೀಸ್ ಮತ್ತು ನ್ಯಾಯ ವ್ಯವಸ್ಥೆ ಮೇಲ್‌ಜಾತಿಯ ಮುಷ್ಟಿಯಲ್ಲಿರುವುದು. ಈ ಹಿನ್ನೆಲೆಯಲ್ಲಿ ನೋಡಿದರೆ, ಹೈದರಾಬಾದ್ ಪ್ರಕರಣದಲ್ಲಿ ಎನ್‌ಕೌಂಟರ್ ಮೂಲಕ ಆರೋಪಿಗಳನ್ನು ಕೊಂದಾಕ್ಷಣ ರೇಪ್‌ಗಳಲ್ಲಿ ಇಳಿಕೆಯಾಗುತ್ತದೆ ಎನ್ನುವುದು ನಮ್ಮ ಅಮಾಯಕತೆಯಾಗಿದೆ. ಮೇಲ್ ಜಾತಿಯ ತರುಣಿಯನ್ನು ಮುಟ್ಟಿದರೆ ಏನಾಗುತ್ತದೆ ಎನ್ನುವುದನ್ನೇ ಪೊಲೀಸರ ಮೂಲಕರ ನಿರೂಪಿಸಲಾಗಿದೆ. ಯಾಕೆಂದರೆ ಈ ದೇಶದ ಬಹುತೇಕ ಅತ್ಯಾಚಾರಗಳಲ್ಲಿ ನೇರ ಅಥವಾ ಪರೋಕ್ಷವಾದ ಪೊಲೀಸರ ಭಾಗೀದಾರಿಕೆಯಿದೆ. ಯಾರೋ ನಾಲ್ವರು ಬೀದಿ ಕಾಮುಕರನ್ನು ಕೊಂದು ಹಾಕಿ ಮೀಸೆ ತಿರುವುತ್ತಿರುವ ಪೊಲೀಸ್ ಇಲಾಖೆ, ತನ್ನ ಸಮ್ಮತಿಯಿಂದಲೇ ನಡೆಯುತ್ತಿರುವ ಅತ್ಯಾಚಾರಗಳ ಕುರಿತಂತೆ ತಲೆತಗ್ಗಿಸಿದ ಉದಾಹರಣೆ ತೀರಾ ಕಡಿಮೆ.

   ತೆಲಂಗಾಣದಲ್ಲಿ ಅತ್ಯಾಚಾರಿಗಳಿಗೆ ‘ನ್ಯಾಯ’ ಸಿಕ್ಕಿತು ಎಂದು ಸಂಭ್ರಮಿಸುತ್ತಿರುವ ಶಕ್ತಿಗಳು ಉನ್ನಾವೊದಲ್ಲಿ ನಡೆದ ಘಟನೆಯ ಕುರಿತಂತೆ ವೌನವಾಗಿದೆ. ಅತ್ಯಾಚಾರಕ್ಕೊಳಗಾದ ಯುವತಿ ನ್ಯಾಯಕ್ಕಾಗಿ ಬೀದಿಗಿಳಿದರೆ ಆಕೆಗೆ ಒದಗುವ ಸ್ಥಿತಿ ಎಷ್ಟು ಹೀನಾಯವಾಗಿರುತ್ತದೆ ಎನ್ನುವುದನ್ನು ಉತ್ತರ ಪ್ರದೇಶದ ಪ್ರಕರಣಗಳು ಮತ್ತೆ ಮತ್ತೆ ಸಾಬೀತು ಪಡಿಸುತ್ತವೆ. ಉನ್ನಾವೊ ಎನ್ನುವುದು ಉತ್ತರ ಪ್ರದೇಶದ ‘ಅತ್ಯಾಚಾರದ ರಾಜಧಾನಿ’. ಈ ವರ್ಷದಲ್ಲಿ ಉನ್ನಾವೊದಲ್ಲಿ ಒಟ್ಟು 86 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಮುಚ್ಚಿ ಹೋದ ಪ್ರಕರಣಗಳು ಅವೆಷ್ಟೋ. ಯಾಕೆಂದರೆ ಉನ್ನಾವೊ ಸೇರಿದಂತೆ ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಾಚಾರದ ವಿರುದ್ಧ ಧ್ವನಿಯೆತ್ತುವುದು ಸುಲಭವಲ್ಲ. ಇಲ್ಲಿ, ನ್ಯಾಯಕ್ಕಾಗಿ ನ್ಯಾಯಾಲಯಕ್ಕೆ ತೆರಳುತ್ತಿದ್ದ ಸಂತ್ರಸ್ತೆಯ ಮೇಲೆ ಆರೋಪಿಗಳ ಸಹಿತ ಐವರು ದುಷ್ಕರ್ಮಿಗಳು ಹಾಡಹಗಲೇ ಚಾಕುವಿನಿಂದ ಇರಿದು, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಅಂದರೆ ಈ ದೇಶದ ನ್ಯಾಯ ವ್ಯವಸ್ಥೆಯನ್ನು, ಕಾನೂನು ವ್ಯವಸ್ಥೆಯನ್ನು ದುಷ್ಕರ್ಮಿಗಳು ಅದೆಷ್ಟು ಹಗುರವಾಗಿ ತೆಗೆದುಕೊಂಡಿದ್ದಾರೆ ಎನ್ನುವುದನ್ನು ಇದು ಹೇಳುತ್ತದೆ. ಆಕೆಗೆ ಜೀವಬೆದರಿಕೆಯಿತ್ತು ಎನ್ನುವುದನ್ನು ಕುಟುಂಬ ಹೇಳಿದೆ. ಈ ಕುರಿತಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಅವರು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಯಾಕೆಂದರೆ, ಸಂತ್ರಸ್ತೆ ಮೇಲ್‌ಜಾತಿಗೆ ಸೇರಿದವಳಾಗಿರಲಿಲ್ಲ. ಪೊಲೀಸ್ ಠಾಣೆ ಈ ದೇಶದಲ್ಲಿ ತಳಸ್ತರದ ಜಾತಿಯ ದೂರುಗಳನ್ನು ಗಂಭೀರವಾಗಿ ಸ್ವೀಕರಿಸುವುದಿಲ್ಲ. ವಿಪರ್ಯಾಸ ಗಮನಿಸಿ. ಸುಟ್ಟು ಹೋದ ದೇಹದ ಜೊತೆಗೆ ಸಂತ್ರಸ್ತೆ ಸುಮಾರು ಒಂದು ಕಿ.ಮೀ. ನಡೆದಿದ್ದಳು. ಅಲ್ಲಿಯವರೆಗೂ ಆಕೆಗೆ ನೆರವು ನೀಡಲು ಯಾರೂ ಮುಂದೆ ಬಂದಿರಲಿಲ್ಲ. ಆಸ್ಪತ್ರೆಯಲ್ಲೂ ಆಕೆ ನ್ಯಾಯಕ್ಕಾಗಿ ಬೊಬ್ಬೆ ಹೊಡೆಯುತ್ತಿದ್ದಳು. ಇಂದು ಉತ್ತರ ಪ್ರದೇಶ ಸರಕಾರ ಕುಟುಂಬಕ್ಕೆ ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳಲು ಯತ್ನಿಸುತ್ತಿದೆ. ಆದರೆ ಆರೋಪಿಗಳ ಕುರಿತಂತೆ ಅಲ್ಲಿನ ಪೊಲೀಸ್ ವ್ಯವಸ್ಥೆ ಹೇಗೆ ನಡೆದುಕೊಳ್ಳುತ್ತಿದೆ ಎನ್ನುವ ಬಗ್ಗೆ ಯಾವ ವಿವರಗಳೂ ಇಲ್ಲ.

  ಸಂತ್ರಸ್ತೆಯರೇ ಬಲಿಪಶುಗಳಾಗುವುದು ಉನ್ನಾವೊಗೆ ಹೊಸತೇನಲ್ಲ. ಇತ್ತೀಚೆಗೆ ಬಿಜೆಪಿಯ ಶಾಸಕ ಸೆಂಗಾರ್ ವಿರುದ್ಧ ಮಹಿಳೆಯೊಬ್ಬಳು ಅತ್ಯಾಚಾರ ದೂರು ಸಲ್ಲಿಸಿದ ಕಾರಣದಿಂದ, ಆಕೆಯ ತಂದೆಯನ್ನು ಪೊಲೀಸರೇ ಥಳಿಸಿ ಕೊಂದು ಹಾಕಿದರು. ಆಕೆಯ ಸಂಬಂಧಿಯನ್ನು ಅಪಘಾತದ ಮೂಲಕ ಕೊಂದರು. ಸಂತ್ರಸ್ತೆಯೂ ಅಪಘಾತದಲ್ಲಿ ಗಂಭೀರ ಗಾಯಗೊಂಡಳು. ಸಂತ್ರಸ್ತೆ ಬಹಿರಂಗವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕದೆ ಇದ್ದಲ್ಲಿ ಶಾಸಕನ ಬಂಧನವೇ ಆಗುತ್ತಿರಲಿಲ್ಲ. ಹಲವು ನಾಶ, ನಷ್ಟಗಳ ಬಳಿಕ ಆಕೆಗೆ ಪೊಲೀಸ್ ಭದ್ರತೆ ಸಿಕ್ಕಿತು. ಇಲ್ಲವಾದರೆ ಆಕೆಯನ್ನೂ ಬಹಿರಂಗವಾಗಿ ಬೆಂಕಿ ಹಚ್ಚಿ ಕೊಂದು ಬಿಡುತ್ತಿದ್ದರು. ಇನ್ನಾದರೂ ಆಕೆಗೆ ಅಪಾಯವಿಲ್ಲ ಎನ್ನುವಂತಿಲ್ಲ. ವಿಪರ್ಯಾಸ ಗಮನಿಸಿ. ಇದೇ ಉನ್ನಾವೊ ಜಿಲ್ಲೆಯ ಗ್ರಾಮವೊಂದರಲ್ಲಿ ದುಷ್ಕರ್ಮಿಗಳಿಂದ ಪಾರಾಗಿ ಬಂದು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದ ಮಹಿಳೆಯೊಬ್ಬಳನ್ನು ಪೊಲೀಸರೇ ಬೆದರಿಸಿ ವಾಪಸ್ ಕಳುಹಿಸಿದ ಘಟನೆ ವರದಿಯಾಗಿದೆ. ‘‘ಅತ್ಯಾಚಾರ ನಡೆದ ಬಳಿಕ ಮಾತ್ರ ನಾವು ದೂರು ತೆಗೆದುಕೊಳ್ಳುತ್ತೇವೆ’’ ಎಂದು ಆಕೆಗೆ ಪೊಲೀಸರು ಉತ್ತರಿಸಿದ್ದರು. ಈ ದೇಶದಲ್ಲಿ ‘ಅತ್ಯಾಚಾರ ಒಂದು ಸಂಸ್ಕೃತಿ, ಪರಂಪರೆ’ಯಾಗಿ ಆಚರಣೆಯಲ್ಲಿದೆ ಎನ್ನುವ ಅಂಶವನ್ನು ಗುರುತಿಸಿ ಅದಕ್ಕೆ ಔಷಧಿಯನ್ನು ಕೊಡಲು ಮುಂದಾಗಬೇಕಾಗಿದೆ. ಇಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಮಹಿಳೆ ಮತ್ತೆ ಪ್ರಬಲ ಜಾತಿಗಳ ಅಡ್ಡೆಯಾಗಿರುವ ಪೊಲೀಸ್ ಠಾಣೆಯಲ್ಲಿ ರಕ್ಷಣೆಯನ್ನು ಕೇಳಬೇಕು. ಅಲ್ಲಿ ಸರಿಯಾದ ತನಿಖೆ ನಡೆದು, ಬಲವಾದ ಎಫ್‌ಐಆರ್ ಆದರೆ ಮಾತ್ರ ನ್ಯಾಯಾಲಯದಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗಲು ಸಾಧ್ಯ. ಆದರೆ ಬಹುತೇಕ ಪ್ರಕರಣದಲ್ಲಿ ಪೊಲೀಸರು ಸರಿಯಾದ ಸಾಕ್ಷಗಳನ್ನು ಒದಗಿಸುವುದಿಲ್ಲ ಮಾತ್ರವಲ್ಲ, ಅದನ್ನು ನಾಶ ಮಾಡಿರುತ್ತಾರೆ. ಹೈದರಾಬಾದ್‌ನ ಅತ್ಯಾಚಾರ ಸಂತ್ರಸ್ತೆಗೆ ಪೊಲೀಸರು ನ್ಯಾಯಕೊಟ್ಟರು ಎಂದು ಸಂಭ್ರಮಿಸುವ ಮುನ್ನ, ಪೊಲೀಸರ ಸಹಭಾಗಿತ್ವದ ಕಾರಣದಿಂದ ಈ ದೇಶದಲ್ಲಿ ಅತ್ಯಾಚಾರಗಳು ಹೆಚ್ಚುತ್ತಿರುವ ಕುರಿತಂತೆ ನಾವು ಆತಂಕ ಪಡಬೇಕಾಗಿದೆ. ಅತ್ಯಾಚಾರಿಗಳಿಗೆ ಶಿಕ್ಷೆ ನೀಡುವ ಅಧಿಕಾರವನ್ನು ನಾವು ಪೊಲೀಸರ ಕೈಗೆ ಕೊಡಲು ಅತ್ಯುತ್ಸಾಹ ತೋರುವ ಮುನ್ನ ಈ ಬಗ್ಗೆ ಯೋಚಿಸಬೇಕಾಗಿದೆ. ಪೊಲೀಸರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸಿದರೆ ಈ ದೇಶದಲ್ಲಿ ಅತ್ಯಾಚಾರ ಅರ್ಧಕ್ಕರ್ಧ ಇಳಿಕೆಯಾದೀತು. ಆರೋಪಿಗಳಿಗೆ ಶಿಕ್ಷೆ ನೀಡುವಲ್ಲಿ ನ್ಯಾಯವ್ಯವಸ್ಥೆಗೂ ಅನುಕೂಲವಾದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News