ಯಲ್ಲಾಪುರದಲ್ಲಿ ಬಿಜೆಪಿಯ ಶಿವರಾಮ್ ಹೆಬ್ಬಾರ್ ಗೆಲುವು

Update: 2019-12-09 17:15 GMT

ಕಾರವಾರ, ಡಿ.9: ಯಲ್ಲಾಪುರ-ಮುಂಡಗೋಡ ವಿಧಾನಸಭೆ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಅರಬೈಲ್ ಶಿವರಾಮ ಹೆಬ್ಬಾರ ಅವರು ಒಟ್ಟು 80,440 ಮತಗಳನ್ನು ಪಡೆದು ಗೆಲವು ದಾಖಲಿಸಿದ್ದಾರೆ. ಸಮೀಪದ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಭೀಮಣ್ಣ ನಾಯ್ಕ ಅವರನ್ನು 31,408 ಮತಗಳ ಅಂತರದಿಂದ ಸೋಲಿಸಿದರು. 

ಡಿಸೆಂಬರ್ 5 ರಂದು ಉಪಚುನಾವಣೆಗೆ ಮತದಾನ ನಡೆದಿದ್ದು, 1.72 ಲಕ್ಷ ಮತದಾರರಿದ್ದ ಕ್ಷೇತ್ರದಲ್ಲಿ ಶೇ. 77.52 ಮತದಾನವಾಗಿತ್ತು. 65,381 ಪುರುಷ ಹಾಗೂ 68,182 ಮಹಿಳೆಯರು ಸೇರಿ ಒಟ್ಟು 1,33,564 ಮತದಾರರಿಂದ ಮತದಾನವಾಗಿತ್ತು.

ಅದರಂತೆ ಸೋಮವಾರ ಶಿರಸಿಯ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ನಡೆದು, ಒಟ್ಟು 17 ಸುತ್ತುಗಳಲ್ಲಿ ಮತಎಣಿಕೆ ನಡೆಯಿತು. ಹೆಬ್ಬಾರ್ ಅವರು ಒಟ್ಟು 80,440 ಮತಗಳನ್ನು ಪಡೆದರೆ, ಕಾಂಗ್ರೆಸ್ ಪಕ್ಷದ ಭೀಮಣ್ಣ ನಾಯ್ಕ 49,034 ಮತಗಳನ್ನು ಪಡೆದು 2 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಪ್ರತಿ ಸುತ್ತಿನಲ್ಲೂ ನೋಟಾ ಕೂಡ ಸದ್ದು ಮಾಡುವದರೊಂದಿಗೆ ಅಂತಿಮವಾಗಿ 1444 ಮತಗಳು ನೋಟಾ ಮತದಾನವಾಗಿದೆ.  

ಉಳಿದಂತೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜೆ.ಡಿ.ಎಸ್ ಅಭ್ಯರ್ಥಿ ಎ.ಚೈತ್ರಾ ಗೌಡ 1,235 ಮತ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಜೈತುನಬಿ ಜಿಗಳೂರು 443, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಸುನೀಲ ಪವಾರ್ 281 ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಚಿದಾನಂದ ಹರಿಜನ 413, ಮಹೇಶ್ ಹೆಗಡೆ 301 ಮತಗಳನ್ನು ಪಡೆದಿದ್ದಾರೆ. 

ಜಿಲ್ಲಾ ಚುನಾವಣಾಧಿಕಾರಿ ಡಾ. ಹರೀಶ್‍ಕುಮಾರ್.ಕೆ, ಚುನಾವಣಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ನೇತೃತ್ವ ವಹಿಸಿದ್ದರು.  

''ಉಪ ಚುನಾವಣೆಯಲ್ಲಿ ದಾಖಲೆ ಅಂತರದಲ್ಲಿ ಗೆಲುವು ಸಾಧಿಸುವುದಾಗಿ ಹೇಳಿದ್ದೆ. ಜನ ನನ್ನ ಮೇಲೆ ವಿಶ್ವಾಸವಿಟ್ಟು ದಾಖಲೆ ಅಂತರದಲ್ಲಿ ಜಯ ನೀಡಿದ್ದಾರೆ. ನನ್ನನ್ನು ಅನರ್ಹ ಗೊಳಿಸಿದವರನ್ನು ನನ್ನ ಜನರೇ ಅನರ್ಹಗೊಳಿಸಿದ್ದಾರೆ''.

- ಶಿವರಾಮ್ ಹೆಬ್ಬಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News