ಹುಣಸೂರಿನಲ್ಲಿ 'ಕೈ' ಮೇಲುಗೈ: ಅನರ್ಹ ಶಾಸಕ ಎಚ್.ವಿಶ್ವನಾಥ್ ಗೆ ಹೀನಾಯ ಸೋಲು

Update: 2019-12-09 15:53 GMT

ಮೈಸೂರು,ಡಿ.9: ಹುಣಸೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ವಿರುದ್ಧ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಹೀನಾಯ ಸೋಲನುಭವಿಸಿದ್ದಾರೆ. ಕಾಂಗ್ರೆಸ್ ನ ಎಚ್.ಪಿ.ಮಂಜುನಾಥ್ ವಿರುದ್ಧ 39,727 ಮತಗಳ ಅಂತರದಿಂದ ಪರಾಭವಗೊಳ್ಳುವ ಮೂಲಕ ಮುಖಭಂಗ ಅನುಭವಿಸಿದ್ದಾರೆ.

ಕಾಂಗ್ರೆಸ್ ನ ಎಚ್.ಪಿ.ಮಂಜುನಾಥ್ 92,725, ಬಿಜೆಪಿಯ ಎಚ್.ವಿಶ್ವನಾಥ್ 52,998, ಜೆಡಿಎಸ್ ಅಭ್ಯರ್ಥಿ ದೇವರಗಳ್ಳಿ ಸೋಮಶೇಖರ್ 32,895 ಮತಗಳನ್ನು ಪಡೆದಿದ್ದಾರೆ.

ಹುಣಸೂರು ನಗರದ ದಿ.ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಯಿತು. ಮೊದಲಿಗೆ ಅಂಚೆ ಮತಗಳನ್ನು ಎಣಿಸಲಾಯಿತು. ಇದರಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಮುನ್ನಡೆ ಸಾಧಿಸಿದರು. ನಂತರ ಎಲೆಕ್ಟ್ರೋಲ್ ಮತಗಳ ಎಣಿಕೆ ನಡೆಯಿತು. ಮೊದಲ ಸುತ್ತಿನಿಂದಲೂ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಮುನ್ನಡೆ ಸಾಧಿಸುತ್ತಲೇ ಬಂದರು. ಅಂತಿಮವಾಗಿ ವಿಜಯಮಾಲೆಯನ್ನು ತನ್ನದಾಗಿಸಿಕೊಂಡರು.

ಅಭ್ಯರ್ಥಿಗಳ ಪಡೆದ ಮತಗಳ ವಿವರ: ಎಚ್.ವಿಶ್ವನಾಥ್-ಬಿಜೆಪಿ-52998, ಇಮ್ತಿಯಾಜ್ ಅಹಮದ್-ಬಿಎಸ್‍ಪಿ-1098, ಎಚ್.ಪಿ.ಮಂಜುನಾಥ್- ಕಾಂಗ್ರೆಸ್ -92725, ದೇವರಹಳ್ಳಿ ಸೋಮಶೇಖರ್-ಜೆಡಿಎಸ್-32895, ಎಸ್.ಜಗದೀಶ್-ಕೆಜೆಪಿ-582, ಎಮ್ಮೆಕೊಪ್ಪಲು ತಿಮ್ಮಾಬೋವಿ-ಕರ್ನಾಟಕ ರಾಷ್ಟ್ರ ಸಮಿತಿ -207, ದಿವಾಕರ್ ಗೌಡ-ಪ್ರಜಾಕೀಯ ಉತ್ತಮ ಪ್ರಜಾಕೀಯ ಪಾರ್ಟಿ-425, ದೇವನೂರು ಪುಟ್ಟನಂಜಯ್ಯ-ಎಸ್‍ಡಿಪಿಐ 1124, ಉಮೇಶ-ಪಕ್ಷೇತರ-432, ರೇವಣ್ಣ-ಪಕ್ಷೇತರ-325 ಮತಗಳನ್ನು ಪಡೆದಿದ್ದಾರೆ.

ಗೆಲುವಿನ ನಗೆ ಬೀರಿದ ಎಚ್.ಪಿ.ಮಂಜನಾಥ್: ಹುಣಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಗೆಲುವಿನ ಸುಳಿವು ಸಿಗುತ್ತಿದ್ದಂತೆ ಸಂತಸ ವ್ಯಕ್ತಪಡಿಸಿದರು.

ಮತ ಎಣಿಕೆ ಕೇಂದ್ರಕ್ಕೆ ಬೆಳಿಗ್ಗೆಯೇ ಆಗಮಿಸಿದ ಎಚ್.ಪಿ.ಮಂಜುನಾಥ್ ಎಣಿಕೆ ಪೂರ್ಣಗೊಳ್ಳುವವರೆಗೂ ಕೇಂದ್ರದಲ್ಲಿಯೇ ಇದ್ದು ಕಾರ್ಯಕರ್ತರು ಅಭಿಮಾನಿಗಳೊಂದಿಗೆ ಗೆಲುವಿನ ಸಂಭ್ರಮ ಹಂಚಿಕೊಂಡರು. ನಂತರ ಚುನಾವಣಾಧಿಕಾರಿಗಳು ಅಧಿಕೃತ ಘೋಷಣೆ ಮಾಡಿದ ನಂತರ ಆಯ್ಕೆ ಪತ್ರವನ್ನು ಎಚ್.ಪಿ.ಮಂಜುನಾಥ್ ಅವರಿಗೆ ನೀಡಿದರು.

ಮತ ಎಣಿಕೆ ಕೇಂದ್ರದಿಂದ ಹೊರ ಬರುತ್ತಿದ್ದಂತೆ ಹೊರಗಡೆ ತಮ್ಮ ನಾಯಕನಿಗಾಗಿ ಕಾಯುತಿದ್ದ ಕಾರ್ಯಕರ್ತರು ಅಭಿಮಾನಿಗಳು ಮೇಲಕ್ಕೆ ಎತ್ತಿಕೊಂಡು ಜಯಘೋಷ ಕೂಗಿದರು.

ನಂತರ ನಗರ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿದ ಮಂಜುನಾಥ್ ದೇವರ ದರ್ಶನ ಪಡೆದರು. ನಂತರ ಅವರ ಮನೆಗೆ ತೆರಳಿ ತಾಯಿಯ ಆಶೀರ್ವಾದ ಪಡೆದು ಭಾವುಕರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News