ಮಸೀದಿಗೆ 5 ಎಕರೆ ಜಮೀನು ನೀಡುವ ಅಗತ್ಯವಿಲ್ಲ : ಸುಪ್ರೀಂ ಕೋರ್ಟ್ ಗೆ ಹಿಂದೂ ಮಹಾಸಭಾ ಅರ್ಜಿ

Update: 2019-12-09 06:47 GMT

ಹೊಸದಿಲ್ಲಿ : ಅಯೋಧ್ಯೆ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಹಿಂದೂ ಮಹಾಸಭಾ  ಮರು ಪರಿಶೀಲನಾ ಅರ್ಜಿಯನ್ನು ಇಂದು  ಸಲ್ಲಿಸಲು ನಿರ್ಧರಿಸಿದೆ ಎಂದು ಸಂಘಟನೆಯ ವಕೀಲರಾದ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.

ಮಸೀದಿ ನಿರ್ಮಿಸಲು ಐದು ಎಕರೆ ಪರ್ಯಾಯ ಜಮೀನು ನೀಡುವಂತೆ ಕೋರ್ಟ್ ನೀಡಿರುವ ಆದೇಶ ಮರು ಪರಿಶೀಲಿಸ ಬೇಕೆಂದು ಹಿಂದೂ ಮಹಾಸಭಾ ಕೋರಲಿದೆ.  ಅಯೋಧ್ಯೆಯ ವಿವಾದಿತ ಭೂಮಿಯ  ಹೊರಾಂಗಣ ಹಾಗೂ ಒಳಾಂಗಣ ಹಿಂದೂಗಳಿಗೆ ಸೇರಿದ್ದೆಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿರುವುದರಿಂದ ಮಸೀದಿಗೆ 5 ಎಕರೆ ಜಮೀನು ನೀಡಲು ಯಾವುದೇ ಕಾರಣಗಳಿಲ್ಲ ಎಂದು ತನ್ನ ಅರ್ಜಿಯಲ್ಲಿ ಹಿಂದೂ ಮಹಾಸಭಾ ಹೇಳಿದೆ.

ಇದು ಅಯೋಧ್ಯೆ ತೀರ್ಪಿನ ವಿರುದ್ಧ ಸಲ್ಲಿಸಲಾಗುವ ಏಳನೇ ಮರುಪರಿಶೀಲನಾ ಅರ್ಜಿಯಾಗಲಿದೆ.  ಈಗಾಗಲೇ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಬೆಂಬಲ ಹೊಂದಿರುವ ಮೌಲಾನ ಮುಫ್ತಿ ಹಸ್ಬುಲ್ಲಾಹ್, ಮೌಲಾನ ಮಹಫೂಝುರ್ ರಹ್ಮಾನ್, ಮಿಶ್ಬಾಹುದ್ದೀನ್, ಮುಹಮ್ಮದ್ ಉಮರ್ ಹಾಗೂ ಹಾಜಿ ಮಹಬೂಬ್ ಎಂಬವರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರೆ, ಆರನೇ  ಅರ್ಜಿಯನ್ನು ಮುಹಮ್ಮದ್ ಅಯ್ಯುಬ್ ಎಂಬವರು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News