ಉಪ ಚುನಾವಣೆ: ಅರಳಿದ ಕಮಲ, ಜೆಡಿಎಸ್ ಗೆ ಮುಖಭಂಗ, ನೆಲಕಚ್ಚಿದ ಕಾಂಗ್ರೆಸ್

Update: 2019-12-09 07:55 GMT

ಬೆಂಗಳೂರು, ಡಿ.8: ರಾಜ್ಯದಲ್ಲಿ  ಮುಖ್ಯ ಮಂತ್ರಿ  ಬಿ.ಎಸ್  ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಅಗ್ನಿ ಪರೀಕ್ಷೆಯಾಗಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದೆ.

ಉಪ ಚುನಾವಣೆಯು ಬಿಜೆಪಿ ಸರಕಾರದ ಅಭದ್ರತೆಯನ್ನು ದೂರ ಮಾಡಿದೆ. ಕಾಂಗ್ರೆಸ್ ಗೆ ಮತ್ತೆ ಹಿನ್ನಡೆ ಉಂಟಾಗಿದೆ. ಜೆಡಿಎಸ್ ಮುಖಭಂಗ ಅನುಭವಿಸಿದೆ.

ಒಟ್ಟು 15 ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. 2ರಲ್ಲಿ ಕಾಂಗ್ರೆಸ್ ,1ರಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು  ಮುನ್ನಡೆ ಸಾಧಿಸಿದ್ದಾರೆ.10 ಕ್ಷೇತ್ರಗಳ ,ಮತ ಎಣಿಕೆ ಪೂರ್ಣಗೊಂಡಿದ್ದು 9 ರಲ್ಲಿ ಬಿಜೆಪಿ, 2ರಲ್ಲಿ ಕಾಂಗ್ರೆಸ್ ಜಯ ಗಳಿಸಿದೆ.

ಹೊಸಕೋಟೆಯಲ್ಲಿ ಬಿಜೆಪಿಯ  ಎಂಟಿಬಿ ನಾಗರಾಜ್ ಅವರು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ ಸೋಲಿನ ಭೀತಿ ಎದುರಿಸುತ್ತಿದ್ದಾರೆ. ಶರತ್ ಬಚ್ಚೇಗೌಡ ಗೆಲುವು ಬಹುತೇಕ ಖಚಿತವಾಗಿದೆ. 

ತೀವ್ರ ಕುತೂಹಲ ಕೆರಳಿಸಿದ್ದ ಹುಣಸೂರಿನಲ್ಲಿ ಬಿಜೆಪಿಯ ಎಚ್. ವಿಶ್ವನಾಥ್ ಸೋಲು ಅನುಭವಿಸಿದ್ದಾರೆ. ಅವರು ಕಾಂಗ್ರೆಸ್ ನ ಹೆಚ್ ಪಿ ಮಂಜುನಾಥ್  ಗೆಲುವಿನ ನಗೆ ಬೀರಿದ್ದಾರೆ.

ಗೋಕಾಕ್ ನಲ್ಲಿ ಸಹೋದರರ ನಡುವಿನ ಜಿದ್ದಾಜಿದ್ದಿನ ಹೋರಾಟದಲ್ಲಿ ಬಿಜೆಪಿಯ ರಮೇಶ್ ಜಾರಕಿಹೊಳಿ ಕೈ ಮೇಲಾಗಿದೆ. ಅವರು ಜಯ ಗಳಿಸಿದ್ದಾರೆ. ಯಲ್ಲಾಪುರದಲ್ಲಿ ಬಿಜೆಪಿಯ ಶಿವರಾಮ್ ಹೆಬ್ಬಾರ್ 31,406 ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿದ್ದಾರೆ.

ಕಾಂಗ್ರೆಸ್ ನ  ಭದ್ರಕೋಟೆ ಚಿಕ್ಕಬಳ್ಳಾಪುರದಲ್ಲಿ ಮಾಜಿ ಶಾಸಕ ಬಿಜೆಪಿಯ  ಡಾ.ಕೆ.ಸುಧಾಕರ್ ಮತ್ತೆ ಜಯ ಸಾಧಿಸಿದ್ದಾರೆ.  ಮಂಡ್ಯದ ಕೆ.ಆರ್.ಪೇಟೆಯಲ್ಲಿ ಬಿಜೆಪಿಯ ನಾರಾಯಣ ಗೌಡ, ಕಾಗವಾಡದಲ್ಲಿ  ಶ್ರೀಮಂತ ಪಾಟೀಲ್,   ಹಿರೇಕೆರೂರು ಬಿ.ಸಿ.ಪಾಟೀಲ್, ವಿಜಯ ನಗರದಲ್ಲಿ  ಆನಂದ್ ಸಿಂಗ್, ಅಥಣಿ ಯಲ್ಲಿ  ಮಹೇಶ್ ಕುಮಟಹಳ್ಳಿ, ರಾಣೆಬೆನ್ನೂರು ಕ್ಷೇತ್ರದಲ್ಲಿ  ಅರುಣ್ ಕುಮಾರ್ , ಯಶವಂತಪುರ ಎಸ್ ಟಿ ಸೋಮಶೇಖರ್  ಜಯ ಗಳಿಸಿದ್ದಾರೆ. ಶಿವಾಜಿನಗರದಲ್ಲಿ ಕಾಂಗ್ರೆಸ್ ನ ರಿಝ್ವಾನ್ ಅರ್ಶದ್ ಜಯದ ಹಾದಿಯಲ್ಲಿದ್ದಾರೆ. 

"ಮಾತು ಕೊಟ್ಟವರಿಗೆ ಸಚಿವ ಸ್ಥಾನ ಕೊಡುತ್ತೇವೆ. ಬಿಜೆಪಿ 12ರಲ್ಲಿ ಜಯ ಗಳಿಸಿದೆ. ಮುಂಬರುವ ಚುನಾವಣೆಯಲ್ಲಿ 150 ಸ್ಥಾನ ಗಳಿಸಲಿದೆ. ವಿಪಕ್ಷಗಳು  ಅಭಿವೃದ್ಧಿಗೆ ಇನ್ನಾದರೂ ಸಹಕಾರ ನೀಡಲಿ" 

ಬಿ.ಎಸ್.ಯಡಿಯೂರಪ್ಪ, ಮುಖ್ಯ ಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News