ಉಪಚುನಾವಣೆಯಲ್ಲಿ ಸೋಲು: ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

Update: 2019-12-09 13:36 GMT

ಬೆಂಗಳೂರು, ಡಿ. 9: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನು ಬಲವಾದ ನಂಬಿಕೆ ಇಟ್ಟಿದ್ದು, ಉಪಚುನಾವಣೆಯಲ್ಲಿ ಮತದಾರರ ತೀರ್ಪನ್ನು ನಾನು ಒಪ್ಪಿಕೊಂಡಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ಉಪಚುನಾವಣೆ ಸೋಲಿನ ಹೊಣೆ ಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸೋಮವಾರ ಉಪಚುನಾವಣೆ ಫಲಿತಾಂಶದ ಬಳಿಕ ಇಲ್ಲಿನ ತನ್ನ ಕಾವೇರಿ ನಿವಾಸದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ಸಲ್ಲಿಸಿದ್ದೇನೆ ಎಂದರು.

ನಿರೀಕ್ಷೆ ಹುಸಿ: ಮತದಾರರು ಪ್ರಜಾಪ್ರಭುತ್ವ ವ್ಯವಸ್ಥೆ ಉಳಿವಿನ ದೃಷ್ಟಿಯಿಂದ ಪಕ್ಷಾಂತರಿಗಳಿಗೆ ಶಿಕ್ಷೆ ನೀಡಲಿದ್ದು, ಪಾಠ ಕಲಿಸಲಿದ್ದಾರೆಂಬ ನಿರೀಕ್ಷೆ ಇತ್ತು. ಆದರೆ, ನನ್ನ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ. ಏನೇ ಆದರೂ ಜನತೆಯ ತೀರ್ಪನ್ನು ಒಪ್ಪಿಕೊಂಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಹದಿನೈದು ಕ್ಷೇತ್ರಗಳ ಉಪಚುನಾವಣೆ ತೀರ್ಪು ಬಂದಿದೆ. ರಾಜ್ಯದ ಜನತೆ ನೀಡಿದ ತೀರ್ಪನ್ನು ಅತ್ಯಂತ ಗೌರವದಿಂದ ಒಪ್ಪುತ್ತೇನೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಪ್ರಜಾತಂತ್ರದ ಮೌಲ್ಯಗಳನ್ನು ಎತ್ತಿಹಿಡಿಯುವ ದೃಷ್ಟಿಯಿಂದ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಣೆ ನೀಡಿದರು.

‘ನಾನು ಮತ್ತು ಸಿದ್ದರಾಮಯ್ಯ ಮೊದಲಿನಿಂದಲೂ ಆತ್ಮೀಯರು. ಅವರೊಂದಿಗೆ ನಾವು ಇದ್ದೇವೆ. ಪಕ್ಷದ ಹೈಕಮಾಂಡ್ ಏನು ರಾಜೀನಾಮೆ ಕೇಳಿರಲಿಲ್ಲ. ಅವರೇ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ’

-ಕೆ.ಆರ್.ರಮೇಶ್‌ ಕುಮಾರ್, ಮಾಜಿ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News