ಸ್ಕ್ರಿಪ್ ರೂಪದ ಇಲೆಕ್ಟೋರಲ್ ಬಾಂಡ್ ಗಳು ದೇಶಕ್ಕೆ ಅಪಾಯಕಾರಿ: ಜೇಟ್ಲಿಗೆ ಪತ್ರ ಬರೆದಿದ್ದ ಊರ್ಜಿತ್ ಪಟೇಲ್

Update: 2019-12-09 11:23 GMT

ಹೊಸದಿಲ್ಲಿ: ಇಲೆಕ್ಟೋರಲ್ ಬಾಂಡ್ ಗಳನ್ನು ಸ್ಕ್ರಿಪ್ ರೂಪದ ಬದಲು ಡಿಜಿಟಲ್ ರೂಪದಲ್ಲಿ ನೀಡಬೇಕೆಂದು ಒತ್ತಾಯಿಸಿ ತಾವು ಅಧಿಕಾರದಲ್ಲಿದ್ದ ವೇಳೆ ಭಾರತೀಯ ರಿಸರ್ವ್ ಬ್ಯಾಂಕ್‍ ನ ಮಾಜಿ ಗವರ್ನರ್ ಊರ್ಜಿತ್ ಪಟೇಲ್ ಆಗಿನ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಹಲವು ಬಾರಿ ಪತ್ರ ಬರೆದಿದ್ದರೂ ವಿತ್ತ ಸಚಿವಾಲಯ ಅದನ್ನು ಗಣನೆಗೆ  ತೆಗೆದುಕೊಂಡಿಲ್ಲ ಎಂದು thequint.com ವರದಿ ಮಾಡಿದೆ.

"ಇಲೆಕ್ಟೋರಲ್ ಬಾಂಡ್‍ ಗಳನ್ನು ಸ್ಕ್ರಿಪ್ ರೂಪದಲ್ಲಿ ನೀಡುವುದು ಅಕ್ರಮ ನಗದು ವರ್ಗಾವಣೆಯ ಅಪಾಯವೊಡ್ಡುತ್ತದೆ. ಆರ್ ಬಿಐ ಇಲೆಕ್ಟೋರಲ್ ಬಾಂಡ್ ಗಳನ್ನು ಸ್ಕ್ರಿಪ್ ರೂಪದಲ್ಲಿ ನೀಡುವ ಪ್ರಕ್ರಿಯೆಗೆ ಒಪ್ಪಿದ್ದೇ ಆದಲ್ಲಿ ಇದರಿಂದಾಗಿ ಅಕ್ರಮ ನಗದು ವರ್ಗಾವಣೆಯ ಅಪಾಯವಿರುವ ಹೊರತಾಗಿಯೂ ಅದನ್ನು ಒಪ್ಪಿದೆ ಎಂಬ ಆರೋಪ ಎದುರಿಸುವಂತಾಗುತ್ತದೆ'' ಎಂದು ಜೇಟ್ಲಿಗೆ ಬರೆದ ಪತ್ರದಲ್ಲಿ ಪಟೇಲ್ ವಿವರಿಸಿದ್ದರು.

ಹೋರಾಟಗಾರ್ತಿ ಅಂಜಲಿ ಭಾರಧ್ವಾಜ್ ಅವರು ಆರ್‍ ಟಿಐ ಅರ್ಜಿ ಮೂಲಕ ಪಡೆದ ಮಾಹಿತಿಗಳಂತೆ ಪಟೇಲ್ ಅವರು  ವಿತ್ತ ಸಚಿವರಿಗೆ ಜನವರಿ 2, 2018ರಂದು ಹಾಗೂ ಸೆಪ್ಟೆಂಬರ್ 2017ರಲ್ಲಿ ಎರಡು ಪತ್ರಗಳನ್ನು ಬರೆದಿದ್ದರು.

ಸೆಪ್ಟೆಂಬರ್ 14, 2017ರಂದು ಪರೆದ ಪತ್ರದಲ್ಲಿ, "ಡಿಜಿಟಲ್ ರೂಪದ ಇಲೆಕ್ಟೋರಲ್ ಬಾಂಡ್ ಗಳು ಹೆಚ್ಚು ಪಾರದರ್ಶಕವಾಗಿರುತ್ತವೆ ಹಾಗೂ ಅಕ್ರಮ ನಗದು ವರ್ಗಾವಣೆಗೆ ಆಸ್ಪದ ನೀಡುವುದಿಲ್ಲ, ದೇಣಿಗೆ ನೀಡಿದವರ ಮಾಹಿತಿಗಳು ಆರ್‍ ಬಿಐ ಬಳಿ ಇರುತ್ತದೆ'' ಎಂದು ಪಟೇಲ್ ಬರೆದಿದ್ದರು. ಈ ಡಿಜಿಟಲ್ ಬಾಂಡುಗಳು ಹೆಚ್ಚು ಸುರಕ್ಷಿತ ಹಾಗೂ ಪ್ರಿಂಟಿಂಗ್ ವೆಚ್ಚವನ್ನೂ ಉಳಿತಾಯಗೊಳಿಸುತ್ತವೆ ಎಂದೂ ಅವರು ತಮ್ಮ ಪತ್ರದಲ್ಲಿ ಹೇಳಿದ್ದರು.

ಆದರೆ ಇಲೆಕ್ಟ್ರಾನಿಕ್ ರೂಪದಲ್ಲಿ ಇಲೆಕ್ಟೋರಲ್ ಬಾಂಡ್‍ ಗಳನ್ನು ನೀಡುವ ಪಟೇಲ್ ಶಿಫಾರಸಿಗೆ ಅಸಮ್ಮತಿ ಸೂಚಿಸಿ ವಿತ್ತ ಕಾರ್ಯದರ್ಶಿ ಸುಭಾಶ್ ಚಂದ್ರ ಗರ್ಗ್ ಸೆಪ್ಟೆಂಬರ್ 21, 2017ರಂದು ಪತ್ರ ಬರೆದಿದ್ದರು. ದಾನಿಗಳ ಗುರುತನ್ನು  ರಾಜಕೀಯ ಪಕ್ಷಗಳಿಗೆ ತಿಳಿಯದಂತೆ ಗೌಪ್ಯತೆ ಕಾಪಾಡುವ  ಪ್ರಮುಖ ಅಂಶವನ್ನು ಇಲೆಕ್ಟ್ರಾನಿಕ್ ಮಾದರಿಯ ಇಲೆಕ್ಟೋರಲ್ ಬಾಂಡ್ ಗಳು ಒದಗಿಸುವುದಿಲ್ಲ ಎಂದು ಗರ್ಗ್ ತಮ್ಮ ಪತ್ರದಲ್ಲಿ ತಿಳಿಸಿದ್ದರು.

ಮತ್ತೆ ಅಕ್ಟೋಬರ್ 5, 2017ರಂದು ಆರ್‍ ಬಿಐಗೆ ಪತ್ರ ಬರೆದ ಗರ್ಗ್, ಇಲೆಕ್ಟೋರಲ್ ಬಾಂಡ್‍ ಗಳನ್ನು ಸ್ಕ್ರಿಪ್ ರೂಪದಲ್ಲಿಯೇ ನೀಡಲಾಗುವುದೆಂದು ಸ್ಪಷ್ಟ ಪಡಿಸಿದ್ದರು.

ಸರಕಾರದ ನಿಲುವಿನಿಂದ ಅಸಮಾಧಾನಗೊಂಡ ಆರ್‍ ಬಿಐ ಅಕ್ಟೋಬರ್ 18,2017ರಂದು ನಡೆದ ಆಂತರಿಕ ಸಭೆಯಲ್ಲಿ "ಸರಕಾರ ಎಸ್‍ ಬಿಐ ಮೂಲಕ ಸ್ಕ್ರಿಪ್ ರೂಪದಲ್ಲಿ ಇಲೆಕ್ಟೋರಲ್ ಬಾಂಡ್‍ಗಳನ್ನು ಜಾರಿಗೊಳಿಸುವುದಾದರೆ ಹಾಗೆಯೇ ಆಗಲಿ'' ಎಂಬ ಸರ್ವಾನುಮತದ ನಿರ್ಧಾರ ಕೈಗೊಂಡಿತ್ತು.

"ಹಾಗೆಯೇ ಆಗಲಿ" ಎಂಬ ಮಾತುಗಳನ್ನೇ ಎತ್ತಿಕೊಂಡು ಎಸ್‍ ಬಿಐ ಮೂಲಕ ನೀಡಲಾಗುವ ಇಲೆಕ್ಟೋರಲ್ ಬಾಂಡ್‍ ಗಳಿಗೆ ಆರ್‍ ಬಿಐ ಪರೋಕ್ಷವಾಗಿ ಒಪ್ಪಿದೆ. ವಿತ್ತ ಸಚಿವರು ಈ ಕುರಿತಂತೆ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಬಹುದು ಎಂದು ಗರ್ಗ್ ಟಿಪ್ಪಣಿ ನೀಡಿದ್ದರು.

ಆದರೆ ಇಲೆಕ್ಟೋರಲ್ ಬಾಂಡ್ ಯೋಜನೆಯನ್ನು ಸರಕಾರ ಜಾರಿಗೊಳಿಸಿದ ರೀತಿಗೆ ಆರ್‍ ಬಿಐ, ಚುನಾವಣಾ ಆಯೋಗ ಹಾಗೂ ಕಾನೂನು ಸಚಿವಾಲಯವೂ ಆಕ್ಷೇಪ ಸೂಚಿಸಿದ್ದರೂ ಸರಕಾರ ಯೋಜನೆಯನ್ನು ಜಾರಿಗೊಳಿಸಿ ಅಕ್ರಮ ನಗದು ವರ್ಗಾವಣೆಯ ಅಪಾಯವನ್ನು ನಿರ್ಲಕ್ಷ್ಯಿಸಿತ್ತು ಎಂದು ವರದಿಯಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News