ಅನರ್ಹರು, ನಾಲಾಯಕ್‌ಗಳು ಎಂದ 'ಕೈ'-ಜೆಡಿಎಸ್ ಗೆ ಮತದಾರರಿಂದ ಸೂಕ್ತ ಉತ್ತರ: ಸಚಿವ ಶ್ರೀರಾಮುಲು

Update: 2019-12-09 11:59 GMT
Photo: Facebook

ಬೆಂಗಳೂರು, ಡಿ. 9: ‘ರಾಜ್ಯದ 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ 12 ಅಭ್ಯರ್ಥಿಗಳು ಗೆಲುವು ಸಾಧಿಸುವುದರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಆನೆಬಲ ಬಂದಿದೆ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.

ಸೋಮವಾರ ಉಪಚನಾವಣೆ ಫಲಿತಾಂಶದ ಬಳಿಕ ಸರಣಿ ಟ್ವೀಟ್ ಮಾಡಿರುವ ಅವರು, ‘ಸುಸ್ಥಿರ ಅಭಿವೃದ್ಧಿಯ ಆಡಳಿತಕ್ಕೆ ಕೈಜೋಡಿಸಲು ಬಂದಿರುವ ಎಲ್ಲ ಶಾಸಕರಿಗೆ ಹೃದಯ ಪೂರ್ವಕ ಅಭಿನಂದನೆಗಳು. ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ನೀಡಿ ರಾಜ್ಯದಲ್ಲಿ ಸ್ಥಿರ ಮತ್ತು ಅಭಿವೃದ್ಧಿಯ ಆಡಳಿತವನ್ನು ಬೆಂಬಲಿಸಿದ ಮತದಾರರಿಗೆ ಕೃತಜ್ಞತೆಗಳು’ ಎಂದು ತಿಳಿಸಿದ್ದಾರೆ.

‘ಹುಣಸೂರಿನಲ್ಲಿ ಮತದಾರರ ತೀರ್ಪನ್ನು ಗೌರವಿಸುತ್ತಾ ಸೋಲಿಗೆ ನೆಪಗಳನ್ನು ಹೇಳದೆ ಒಪ್ಪಿಕೊಳ್ಳುತ್ತೇವೆ. ಆದರೆ, ನಮ್ಮ ಅಭ್ಯರ್ಥಿ ಎಚ್.ವಿಶ್ವನಾಥ್ ಅವರನ್ನು ಬೆಂಬಲಿಸಿ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಎರಡನೆ ಸ್ಥಾನಕ್ಕೆ ಕೊಂಡೊಯ್ಯುವ ಮೂಲಕ ಪಕ್ಷಕ್ಕೆ ಉಜ್ವಲ ಭವಿಷ್ಯವಿದೆ ಎಂದು ತೋರಿಸಿಕೊಟ್ಟ ಮತದಾರರಿಗೆ ತುಂಬು ಹೃದಯದ ಕೃತಜ್ಞತೆಗಳು’ ಎಂದು ಶ್ರೀರಾಮುಲು ತಿಳಿಸಿದ್ದಾರೆ.

‘ಸೋತರೂ ಮುಂದಿನ ದಿನಗಳಲ್ಲಿ ನಿಮ್ಮಂದಿಗೆ ನಾವಿದ್ದೇವೆ ಎಂದು ಈ ಮೂಲಕ ಭರವಸೆ ನೀಡುತ್ತೇನೆ. ಅನರ್ಹರು ಯಾರು ಎಂಬುದನ್ನು ಮತದಾರರು ನಿರ್ಧರಿಸಿದ್ದಾರೆ. ನಮ್ಮ ಅಭ್ಯರ್ಥಿಗಳನ್ನು ಅನರ್ಹರು, ನಾಲಾಯಕ್‌ಗಳು ಎಂದು ಟೀಕಿಸುತ್ತಾ ಜನರ ಮುಂದೆ ಹೋದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳನ್ನು ಆಡಳಿತ ನಡೆಸಲು ನೀವು ಅನರ್ಹರು ಎಂದು ನಿರ್ಧರಿಸುವ ಮೂಲಕ ಮತದಾರ ಪ್ರಭುಗಳು ಸೂಕ್ತ ಉತ್ತರ ಕೊಟ್ಟಿದ್ದಾರೆ’ ಎಂದು ರಾಮುಲು ತಿರುಗೇಟು ನೀಡಿದ್ದಾರೆ.

‘ಯಾರು ಸಹ್ಯ, ಯಾರು ಅಸಹ್ಯ ಎಂಬುದನ್ನು ಪ್ರಜ್ಞಾವಂತ ಮತದಾರರು ನಿರ್ಧರಿಸಿದ್ದಾರೆ. ರಾಜಕೀಯ ಹೋರಾಟದಲ್ಲಿ ಸೋಲು-ಗೆಲುವು ಸಾಮಾನ್ಯ. ಸೋಲನ್ನು ಗೆಲುವಿನ ಮೆಟ್ಟಿಲಾಗಿ ಬಳಸಿಕೊಳ್ಳುವುದೇ ನಿಜವಾದ ರಾಜಕಾರಣಿ ಗುಣ. ಅದನ್ನು ಬಿಟ್ಟು ಜನರ ತೀರ್ಪಿನ ಬಗ್ಗೆ ವ್ಯಂಗ್ಯದ ಟೀಕೆಗಳು ವ್ಯಕ್ತಿಯ ಮನಸ್ಥಿತಿಯನ್ನು ಹೇಳುತ್ತದೆ. ಸೋಲನ್ನು ಒಪ್ಪಿಕೊಂಡು ಜನರನ್ನು ಗೌರವಿಸುವ ಗುಣ ಬರುವವರೆಗೆ ಗೆಲುವಿನ ರುಚಿ ನೋಡಲು ಸಾಧ್ಯವಿಲ್ಲ’

-ಬಿ.ಶ್ರೀರಾಮುಲು, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News